ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿನ ಸಂತೆಕಟ್ಟೆ ಸಮೀಪದ ನಯಂಪಳ್ಳಿಯ ಕಾಶೀಮಠ ಶ್ರೀ ಗೋಪಾಲಕೃಷ್ಣ ದೇವಸ್ಥಾನಕ್ಕೆ ಮಂಗಳವಾರ ಸಂಜೆ ಶ್ರೀ ಕಾಶಿ ಮಠದ ಶ್ರೀ ಸಂಯಮಿಂದ್ರ ತೀರ್ಥ ಸ್ವಾಮೀಜಿ ಭೇಟಿ ನೀಡಿ, ನವೀಕೃತ ಸುತ್ತುಪೌಳಿ, ನಾಗಬನ ಮತ್ತು ನೂತನ ಪುಷ್ಕರಣಿಯನ್ನು ದೀಪ ಪ್ರಜ್ವಲನ ಮಾಡಿ, ಆರತಿ ಬೆಳಗಿಸಿ ಉದ್ಘಾಟಿಸಿದರು.ನಂತರ ಶ್ರೀಪಾದರು ತಮ್ಮ ಅನುಗ್ರಹ ಸಂದೇಶದಲ್ಲಿ, ನಮ್ಮ ಹಿರಿಯರು ಸಮಾಜದ ಅಭಿವೃದ್ಧಿಗಾಗಿ ಈ ದೇವಾಲಯ ನಿರ್ಮಾಣ ಮಾಡಿದರು. ಅಲ್ಲಿ ನಮ್ಮ ಪೂಜ್ಯ ಗುರು ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿ ಅವರ ಜನ್ಮ ಶತಮಾನೋತ್ಸವದ ಸವಿನೆನಪಿಗಾಗಿ ನೂರಾರು ಮನೆಮನೆಗಳಲ್ಲಿ ಭಜನೆ ಆರಂಭಿಸಿ ಶ್ರೀಗುರುಗಳ ಆರಾಧನೆ ಮಾಡುತ್ತಿರುವುದು ಸಂತಸ ತಂದಿದೆ. ದೇವಳದ ಸುತ್ತುಪೌಳಿ, ಪುಷ್ಕರಣಿಯ ಅಭಿವೃದ್ಧಿಗೆ ಸಹಕರಿಸಿದ ದಾನಿಗಳು ಹಾಗೂ ದೇವರ ಸೇವೆ ಮಾಡುವ ಎಲ್ಲರಿಗೂ ಗುರುವಿನ ಹಾಗೂ ಶ್ರೀ ದೇವರ ವಿಶೇಷ ಅನುಗ್ರಹ ನಿಮ್ಮಲ್ಲರ ಮೇಲೆ ಇರಲಿ ಎಂದು ಹಾರೈಸಿದರು.ನಯಂಪಳ್ಳಿ ಶ್ರೀ ಕಾಶಿ ಮಠದ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಶಿರಿಯಾರ ಗಣೇಶ್ ನಾಯಕ್ ಮಾತನಾಡಿ, ಈ ದೇವಾಲಯ 1825ರಲ್ಲಿ ಕಾಶಿಮಠಕ್ಕೆ ಶ್ರೀಮದ್ ಸುಮತಿಂದ್ರ ಸ್ವಾಮೀಜಿಯವರ ಕಾಲದಲ್ಲಿ ಹಸ್ತಾಂತರಗೊಂಡಿತು. ಅದರಂಗವಾಗಿ ಪ್ರಸ್ತುತ 2025 ಸಂಪೂರ್ಣ ವರ್ಷವನ್ನು 200ನೇ ವರ್ಷದ ಮಹೋತ್ಸವವನ್ನಾಗಿ ಆಚರಿಸಲಾಗುವುದು. ಶ್ರೀದೇವರ ಸನ್ನಿಧಿಯಲ್ಲಿ ನಡೆಯುವ ಏಕಾಹ ಭಜನೆಯ 25 ವರ್ಷಕ್ಕೆ ಪದಾರ್ಪಣೆಯ ಅಂಗವಾಗಿ ರಜತ ಮೊಹೋತ್ಸವ ಆಚರಣೆ, ವಿವಿಧ ಧಾರ್ಮಿಕ ಕಾರ್ಯಕ್ರಮ ಪ್ರತಿ ತಿಂಗಳು ನಡೆಯಲಿದೆ ತಿಳಿಸಿದರು.
ದೇವಳದ ಪ್ರಧಾನ ಅರ್ಚಕ ಶ್ರೀಜಿತ್ ಶರ್ಮಾ ಮತ್ತು ರಘುವೀರ ಆಚಾರ್ಯ, ವೇದಮೂರ್ತಿ ಚೇ೦ಪಿ ಶ್ರೀಕಾಂತ್ ಭಟ್ ನೇತೃತ್ವದಲ್ಲಿ ಅರ್ಚಕರು ಧಾರ್ಮಿಕ ಪೂಜಾವಿಧಾನ ನೆರವೇರಿಸಿದರು. ಸಮಾರಂಭದಲ್ಲಿ ಉಪಾಧ್ಯಕ್ಷರಾದ ಸತೀಶ್ ಪೈ, ಕಾರ್ಯದರ್ಶಿ ಅರವಿಂದ್ ಭಟ್, ಜೊತೆ ಕಾರ್ಯದರ್ಶಿ ಸುಭಾಶ್ ಭಟ್, ಕೋಶಾಧಿಕಾರಿ ನಾಗೇಂದ್ರ ನಾಯಕ್, ಪ್ರಮುಖರಾದ ಕಾಶೀನಾಥ್ ಭಟ್ ಕಲ್ಯಾಣಪುರ, ದಿನೇಶ್ ಶೆಣೈ, ಶಂಕರ್ ಶೆಣೈ, ರಾಮಚಂದ್ರ ಕಿಣೆ, ಅಜಿತ್ ಪೈ, ಸೀತಾರಾಮ್ ಭಟ್, ವಾಸುದೇವ ಶೆಣೈ, ಸುಭಾಷ್ ಕಾಮತ್, ಸಂತೋಷ್ ಭಕ್ತ, ಸಂದೀಪ್ ನಾಯಕ್, ಮೆನೇಜರ್ ಜಗದೀಶ್ ಕಿಣಿ, ಜಿಎಸ್‌ಬಿ ಯುವಕ /ಮಹಿಳಾ ಮಂಡಳಿಯ ಸದಸ್ಯರು, ನೂರಾರು ಸಮಾಜ ಬಾಂಧವರು ಇದ್ದರು.