ಸಾರಾಂಶ
-ಮರ್ಲೆ ಗ್ರಾಪಂ ವ್ಯಾಪ್ತಿಯ ಗಿಡ್ಡೇನಹಳ್ಳಿಯಲ್ಲಿ 20 ಲಕ್ಷ ರು. ವೆಚ್ಚದ ರಸ್ತೆ ಡಾಂಬರೀಕರಣ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುರಸ್ತೆ ಡಾಂಬರೀಕರಣದಲ್ಲಿ ಗುಣಮಟ್ಟ ಕಾಪಾಡಿಕೊಂಡು ಉತ್ತಮ ರಸ್ತೆ ನಿರ್ಮಿಸಿ ಗ್ರಾಮಸ್ಥರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಗುತ್ತಿಗೆದಾರರಿಗೆ ಸೂಚನೆ ನೀಡಿದರು.
ತಾಲೂಕಿನ ಮರ್ಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಿಡ್ಡೇನಹಳ್ಳಿ ಗ್ರಾಮದಲ್ಲಿ 20 ಲಕ್ಷ ರು. ವೆಚ್ಚದ ರಸ್ತೆ ಡಾಂಬರೀಕರಣ ಕಾಮಗಾರಿಗೆ ಶನಿವಾರ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಅಂಬಳೆ ಹೋಬಳಿ ಹೊಸಕೋಟೆ, ಕುರುಬರಹಳ್ಳಿ, ಜಡಗನಹಳ್ಳಿ ಹಾಗೂ ಗಿಡ್ಡೇನಹಳ್ಳಿ ಗ್ರಾಮಗಳ ರಸ್ತೆ ಡಾಂಬರೀಕರಣಕ್ಕೆ ಈಗಾಗಲೇ 1.35 ಕೋಟಿ ರು. ಅನುದಾನ ಮೀಸಲಿರಿಸಿದ್ದು, ಗುತ್ತಿಗೆದಾರರು ಸೂಕ್ತ ರೀತಿಯಲ್ಲಿ ಬಳಕೆ ಮಾಡಿಕೊಂಡು ಗ್ರಾಮಸ್ಥರಿಗೆ ಸಮರ್ಪಕ ರಸ್ತೆ ನಿರ್ಮಿಸಿಕೊಡಬೇಕು ಎಂದು ಹೇಳಿದರು.ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ಬಂದಾಗಿನಿಂದ ಹಲವಾರು ಜನಪರ ಯೋಜನೆಗಳನ್ನು ರೂಪಿಸಿದೆ. ಮುಖ್ಯಮಂತ್ರಿಗಳು ಹೆಚ್ಚಾಗಿ ಗ್ರಾಮೀಣ ಪ್ರದೇಶದ ರೈತರಿಗೆ ಒತ್ತು ನೀಡುತ್ತಿದ್ದಾರೆ. ಜೊತೆಗೆ ಗ್ರಾಮಗಳ ಇತರೆ ಸವಲತ್ತುಗಳನ್ನು ಒದಗಿಸುವ ಮೂಲಕ ಪ್ರಾಮಾಣಿಕ ಕೆಲಸ ಮಾಡಲಾಗುವುದು ಎಂದರು.
ಮುಂದಿನ ದಿನಗಳಲ್ಲಿ ರಸ್ತೆ ಕಾಮಗಾರಿ ಸಂಬಂಧ ಹಂತ ಹಂತವಾಗಿ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು ಎಂದ ಅವರು, ಕಾಮಗಾರಿಗಳಲ್ಲಿ ಗುಣಮಟ್ಟ ಕಾಪಾಡುವ ಜೊತೆಗೆ ಗ್ರಾಮಸ್ಥರ ಸಹಕಾರದ ಮೂಲಕ ಡಾಂಬರೀಕರಣ ಪೂರ್ಣಗೊಳಿಸಬೇಕು ಎಂದು ಹೇಳಿದರು.ಈಗಾಗಲೇ ಹೊಸಕೋಟೆ ರಸ್ತೆಗೆ 70 ಲಕ್ಷ, ಕುರುಬರಹಳ್ಳಿ ರಸ್ತೆಗೆ 25 ಲಕ್ಷ, ಜಡಗನಹಳ್ಳಿ ರಸ್ತೆಗೆ 20 ಲಕ್ಷ ಹಾಗೂ ಮುಗುಳುವಳ್ಳಿಯಿಂದ ಗಿಡ್ಡೇನಹಳ್ಳಿ ರಸ್ತೆಗೆ 20 ಲಕ್ಷ ಸೇರಿದಂತೆ ಒಟ್ಟು 1.35 ಕೋಟಿ ಅನುದಾನ ವನ್ನು ಸರ್ಕಾರ ಮೀಸರಿಸಲಾಗಿದೆ ಎಂದು ತಿಳಿಸಿದರು.
ಜಿಪಂ ಮಾಜಿ ಸದಸ್ಯ ಕೆ.ವಿ.ಮಂಜುನಾಥ್ ಮಾತನಾಡಿ, ಹರಿಹರದಹಳ್ಳಿ, ಮರ್ಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲವು ಗ್ರಾಮಗಳಿಗೆ ಸಮುದಾಯ ಭವನ ನಿರ್ಮಾಣ ಹಾಗೂ ಮರ್ಲೆಯಿಂದ ಲಕ್ಯಾವರೆಗೆ ರಸ್ತೆ ಅಭಿವೃದ್ದಿಗೊಳಿಸುವ ಸಂಬಂಧ ಶಾಸಕರಿಗೆ ಮನವಿ ಮಾಡಿದರು.ಹರಿಹರದಹಳ್ಳಿ ಗ್ರಾಪಂ ಅಧ್ಯಕ್ಷೆ ಶಾರದಾ ಮಾಸ್ತೇಗೌಡ, ಕಾಂಗ್ರೆಸ್ ಅಂಬಳೆ ಹೋಬಳಿ ಅಧ್ಯಕ್ಷ ವಿಜಯ ಕುಮಾರ್, ಮರ್ಲೆ ಗ್ರಾಪಂ ಸದಸ್ಯ ರಾಜೇಗೌಡ, ಸೇವಾದಳ ಅಧ್ಯಕ್ಷ ಬಸವರಾಜ್, ಗ್ರಾಪಂ ಮಾಜಿ ಅಧ್ಯಕ್ಷರಾದ ಓಂಪ್ರಕಾಶ್, ಕೆ.ವಿ.ವಿರೂಪಾಕ್ಷ, ಕೆಂಚೇಗೌಡ, ಕೆ.ಎಸ್.ಪ್ರಕಾಶ್, ಮುಖಂಡರಾದ ಪುಟ್ಟೇಗೌಡ, ಮುಳ್ಳೇಗೌಡ, ಲಕ್ಷ್ಮಣ ಗೌಡ, ಚಿಕ್ಕೇಗೌಡ ಉಪಸ್ಥಿತರಿದ್ದರು.
2 ಕೆಸಿಕೆಎಂ 4ಚಿಕ್ಕಮಗಳೂರು ತಾಲೂಕಿನ ಮರ್ಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಿಡ್ಡೇನಹಳ್ಳಿ ಗ್ರಾಮದಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿಗೆ ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಶನಿವಾರ ಗುದ್ದಲಿಪೂಜೆ ನೆರವೇರಿಸಿದರು.