ಸಾರಾಂಶ
ಚನ್ನಪಟ್ಟಣ: ಚನ್ನಪಟ್ಟಣ ಕ್ಷೇತ್ರದ ಎನ್ ಡಿಎ ಮೈತ್ರಿಕೂಟದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರವಾಗಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಮೈತ್ರಿಕೂಟದ ನಾಯಕರು ಬಿರುಸಿನ ಪ್ರಚಾರ ನಡೆಸಿದರು.
ಕ್ಷೇತ್ರದ ದಶಾವರ, ಮಾಕಳಿ, ನಾಗವಾರ ಗ್ರಾಮಗಳಲ್ಲಿ ಪ್ರಚಾರ ನಡೆಸಿದ ನಾಯಕರು, ಮೈತ್ರಿಕೂಟದ ಅಭ್ಯರ್ಥಿ ಪರವಾಗಿ ಮತಯಾಚಿಸಿದರು. ಅಲ್ಲದೆ, ಉಪ ಚುನಾವಣೆಯಲ್ಲಿ ಇನ್ನಿಲ್ಲದ ಅಕ್ರಮಗಳನ್ನು ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಎಲ್ಲಾ ನಾಯಕರು ತೀವ್ರ ವಾಗ್ದಾಳಿ ನಡೆಸಿದರು ಹಾಗೂ ಸರ್ಕಾರ ಭಾರೀ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಎನ್ ಡಿಎ ನಾಯಕರು ಆರೋಪ ಮಾಡಿದರು.ಕೇಂದ್ರ ಸಚಿವ ಕುಮಾರಸ್ವಾಮಿ ಮಾತನಾಡಿ, ನಾನು ಚುನಾವಣೆ ಹೊತ್ತಿನಲ್ಲಿ ಮಾತ್ರ ರಾಜಕೀಯ ಮಾಡುತ್ತೇನೆ. ಅಭಿವೃದ್ಧಿ ವಿಷಯ ಬಂದಾಗ ಅದನ್ನು ಹತ್ತಿರಕ್ಕೆ ಬಿಟ್ಟುಕೊಳ್ಳುವುದಿಲ್ಲ. ನಾವೆಲ್ಲಾ ಮೈತ್ರಿ ನಾಯಕರು ಚನ್ನಪಟ್ಟಣ ಅಭಿವೃದ್ಧಿಗೆ ಬದ್ಧರಾಗಿದ್ದೇವೆ ಎಂದು ಘೋಷಣೆ ಮಾಡಿದರು.
ನಿಖಿಲ್ ಅವರು ಶಾಸಕರಾದರೆ ನಾನು ಮಾಡಿದ್ದಕ್ಕಿಂತ ಹೆಚ್ಚು ಮಟ್ಟದಲ್ಲಿ ಕ್ಷೇತ್ರದ ಅಭಿವೃದ್ಧಿ ಆಗುತ್ತದೆ. ಅಲ್ಲದೆ, ನಾನು ಈಗ ಕೇಂದ್ರ ಸಚಿವ ಆಗಿರುವುದರಿಂದ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ನೆರವು ಸಿಗಲಿದೆ. ಮುಖ್ಯವಾಗಿ ರಾಮನಗರ ಚನ್ನಪಟ್ಟಣ ಅವಳಿ ನಗರಗಳಾಗಿ ಅಭಿವೃದ್ಧಿ ಹೊಂದಿದೆ ಇಡೀ ರಾಜ್ಯದಲ್ಲಿಯೇ ಮಾದರಿ ನಗರಗಳಾಗಿ ಬದಲಾಗಲಿವೆ ಎಂದು ಕುಮಾರಸ್ವಾಮಿ ಹೇಳಿದರು.ಹತ್ತು ಸಾವಿರಕ್ಕೂ ಹೆಚ್ಚು ಉದ್ಯೋಗ :
ರಾಮನಗರ, ಚನ್ನಪಟ್ಟಣ ನಡುವೆ ಬೃಹತ್ ಕೈಗಾರಿಕೆ ಸ್ಥಾಪನೆ ಮಾಡುವ ವಿಚಾರವನ್ನು ಪುನರುಚ್ಚರಿಸಿದ ಕುಮಾರಸ್ವಾಮಿ, ನಮ್ಮ ಭಾಗದ ಪ್ರತಿಭಾವಂತ ಯುವಜನರಿಗೆ ಸ್ಥಳೀಯವಾಗಿಯೇ ಉದ್ಯೋಗ ಕಲ್ಪಿಸುವುದು ನನ್ನ ಬದ್ಧತೆ. ಇದು ಕೇವಲ ಚುನಾವಣೆ ಉದ್ದೇಶಕ್ಕೆ ನೀಡುತ್ತಿರುವ ಭರವಸೆ ಅಲ್ಲ. ನನ್ನ ಅಂತರಾಳದಲ್ಲಿ ಇರುವ ಆಶಯ ಅದು. ಸುಮಾರು ಹತ್ತು ಸಾವಿರ ಯುವಕ, ಯುವತಿಯರಿಗೆ ಉದ್ಯೋಗ ಕೊಡಿಸಬೇಕು ಎನ್ನುವುದು ನನ್ನ ಸಂಕಲ್ಪ. ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮ ನಿರ್ಭರ್ ಭಾರತ್, ಮೇಕ್ ಇನ್ ಇಂಡಿಯಾ ಪರಿಕಲ್ಪನೆಗಳ ಅಡಿಯಲ್ಲಿ ಈ ಕೈಗಾರಿಕೆಯನ್ನು ಸ್ಥಾಪನೆ ಮಾಡಲಾಗುವುದು. ಈ ನಿಟ್ಟಿನಲ್ಲಿ ನಾನು ಈಗಾಗಲೇ ಪ್ರಯತ್ನ ಆರಂಭಿಸಿದ್ದೇನೆ ಎಂದರು.ರಾಜ್ಯದಲ್ಲಿ ಆಡಳಿತದ ಶೂನ್ಯ ಸ್ಥಿತಿ :
ಪ್ರತಿಪಕ್ಷದ ನಾಯಕ ಆರ್.ಅಶೋಕ ಮಾತನಾಡಿ, ರಾಜ್ಯದಲ್ಲಿ ಆಡಳಿತದ ವಿಚಾರಕ್ಕೆ ಬಂದರೆ ಶೂನ್ಯ ಪರಿಸ್ಥಿತಿ ಇದೆ. ಸರ್ಕಾರ ಕೇವಲ ಭ್ರಷ್ಟಾಚಾರದಲ್ಲಿ ಮುಳುಗು ತೇಲುತ್ತಿದೆ ಎಂದು ಆರೋಪಿಸಿದರು.ರಾಜ್ಯದ ಮುಖ್ಯಮಂತ್ರಿಯೇ ಆರೋಪಿ ಸ್ಥಾನದಲ್ಲಿದ್ದಾರೆ. ಮುಡಾ ಸೈಟುಗಳನ್ನು ಕಬಳಿಸಿದ್ದಾರೆ. ಅವರಿಗೆ ಅಧಿಕಾರದಲ್ಲಿ ಮುಂದುವರಿಯುವ ಯಾವುದೇ ನೈತಿಕ ಹಕ್ಕು ಸಿದ್ದರಾಮಯ್ಯ ಅವರಿಗೆ ಇಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ಆಡಳಿತ ಸಂಪೂರ್ಣವಾಗಿ ಕುಸಿತ :ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಮಾತನಾಡಿ, ರಾಜ್ಯದಲ್ಲಿ ಆಡಳಿತ ಸಂಪೂರ್ಣವಾಗಿ ಕುಸಿದಿದೆ. ಎಲ್ಲಾ ಇಲಾಖೆಗಳಲ್ಲಿ ಲೂಟಿ ಮಾಡುತ್ತಿದೆ. ಇದನ್ನು ಎಟಿಎಂ ಸರ್ಕಾರ ಎಂದು ಕರೆಯಬೇಕು. ಜನರ ದುಡ್ಡನ್ನು ಭಾರೀ ಪ್ರಮಾಣದಲ್ಲಿ ಲಪಟಾಯಿಸುತ್ತಿದೆ ಎಂದು ಟೀಕೆ ಮಾಡಿದರು.
ನಿಖಿಲ್ ಅವರಿಗೆ ಮತ ಹಾಕಿ. ದೇವೇಗೌಡರು ವಾಗ್ದಾನ ಮಾಡುವಂತೆ ಕೆ ಆರ್ ಎಸ್ ಗಿಂತ ದೊಡ್ಡ ಗಾತ್ರದ ಆಣೆಕಟ್ಟೆಯನ್ನು ನಿರ್ಮಿಸಲು ಪಣ ತೊಟ್ಟಿದ್ದಾರೆ. ತಮ್ಮ ಕೊನೆ ಉಸಿರು ಹೋಗುವುದಕ್ಕೆ ಮೊದಲು ಈ ಕನಸನ್ನು ನನಸು ಮಾಡುತ್ತೇನೆ ಎಂದು ಅವರು ಶಪಥ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಕುಮಾರಸ್ವಾಮಿ ಅವರ ನಾಯಕತ್ವದಲ್ಲಿ ಈ ಅಣೆಕಟ್ಟೆಯನ್ನು ಕಟ್ಟುತ್ತೇವೆ ಎಂದು ಅಶ್ವತ್ಥನಾರಾಯಣ ಹೇಳಿದರು.ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಆರ್ ಪಿಐ ರಾಷ್ಟ್ರೀಯ ನಾಯಕ ವೆಂಕಟಸ್ವಾಮಿ, ಮಾಜಿ ಸಂಸದ ಮುನಿಸ್ವಾಮಿ, ಪಂಚಾಯಿತಿಯ ಮಾಜಿ ಅಧ್ಯಕ್ಷೆ ಶಿವಲಿಂಗಮ್ಮ ಮತ್ತಿತರರು ಹಾಜರಿದ್ದರು.
10ಕೆಆರ್ ಎಂಎನ್ 10.ಜೆಪಿಜಿಚನ್ನಪಟ್ಟಣ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಮೈತ್ರಿಕೂಟದ ನಾಯಕರು ಬಿರುಸಿನ ಪ್ರಚಾರ ನಡೆಸಿದರು.