ಸಾರಾಂಶ
ಕರ್ನಾಟಕವನ್ನು ಕ್ಷಯ ರೋಗ ಮುಕ್ತ ರಾಜ್ಯವನ್ನಾಗಿಸಲು ಸರ್ಕಾರ ಅಗತ್ಯ ಕ್ರಮ ವಹಿಸಿದ್ದು, 16 ಜಿಲ್ಲೆಗಳಲ್ಲಿ ಬಿಸಿಜಿ ಲಸಿಕೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಕರ್ನಾಟಕವನ್ನು ಕ್ಷಯ ರೋಗ ಮುಕ್ತ ರಾಜ್ಯವನ್ನಾಗಿಸಲು ಸರ್ಕಾರ ಅಗತ್ಯ ಕ್ರಮ ವಹಿಸಿದ್ದು, 16 ಜಿಲ್ಲೆಗಳಲ್ಲಿ ಬಿಸಿಜಿ ಲಸಿಕೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.ವಿಶ್ವ ಕ್ಷಯ ರೋಗ ದಿನ ಹಿನ್ನೆಲೆಯಲ್ಲಿ ಮಂಗಳವಾರ ಆರೋಗ್ಯ ಇಲಾಖೆಯ ಹಮ್ಮಿಕೊಂಡಿದ್ದ ಬೃಹತ್ ಬಿಸಿಜಿ ಲಸಿಕಾಕರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಈಗಾಗಲೇ ರಾಜ್ಯದಲ್ಲಿ 1060 ಗ್ರಾಮ ಪಂಚಾಯತಿಗಳನ್ನು ಕ್ಷಯ ರೋಗ ಮುಕ್ತವಾಗಿಸಲಾಗಿದೆ. ಅಲ್ಲದೇ ಕ್ಷಯ ನಿರ್ಮೂಲನಾ ಕಾರ್ಯಕ್ರಮದ ಅಡಿಯಲ್ಲಿ ರೋಗಿಗಳಿಗೆ 98721 ಪೌಷ್ಠಿಕ ಆಹಾರದ ಕಿಟ್ ವಿತರಿಸಲಾಗಿದೆ. ಸಾರ್ವಜನಿಕರು ಕ್ಷಯ ರೋಗ ಬರದಂತೆ ಮುನ್ನೆಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಬಿಸಿಜಿ ಲಸಿಕಾ ಕಾರ್ಯಕ್ರಮದ ಲಾಭ ಪಡೆಯಬೇಕು ಎಂದರು.
ಬಿಸಿಜಿ ಲಸಿಕೆ ಸುರಕ್ಷಿತವಾಗಿದ್ದು, ಸಾರ್ವಜನಿಕರು ಅಪನಂಬಿಕೆ ಹೋಗಲಾಡಿಸಿ ಸುರಕ್ಷತೆಯ ಸಂದೇಶ ರವಾನಿಸಲು ಆರೋಗ್ಯ ಇಲಾಖೆ ನಿರ್ದೇಶಕಿ ತ್ರಿವೇಣಿ ಅವರು ಸೇರಿದಂತೆ ಕ್ಷಯ ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯರು ಈ ವೇಳೆ ಬಿಸಿಜಿ ಲಸಿಕೆ ಪಡೆದರು.77987 ಕ್ಷಯರೋಗಿಗಳು:
ರಾಜ್ಯದಲ್ಲಿ 2024 ರಲ್ಲಿ 20 ಲಕ್ಷಕ್ಕೂ ಹೆಚ್ಚು ಸಂಭಾವ್ಯ ಕ್ಷಯರೋಗಿಗಳ ಕಫ ಪರೀಕ್ಷೆ ಮಾಡಲಾಗಿದೆ ಹಾಗೂ ಖಾಸಗಿ ವಲಯದಿಂದ 28,122 ಮತ್ತು ಸಾರ್ವಜನಿಕ ವಲಯದಿಂದ 49,865 ಸೇರಿ ಒಟ್ಟು 77987 ಕ್ಷಯರೋಗಿಗಳನ್ನು ಪತ್ತೆ ಹಚ್ಚಲಾಗಿದೆ. ಎಲ್ಲ ಕ್ಷಯರೋಗಿಗಳಿಗೆ ಕನಿಷ್ಠ 6 ತಿಂಗಳ ಅವಧಿಯ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಕ್ಷಯ ರೋಗದಿಂದ ಉಂಟಾಗುವ ಮರಣ ದರವನ್ನು ಶೇ. 8 ರಿಂದ ಶೇ.6 ಇಳಿಸಲಾಗಿದೆ. ಇದುವರೆಗೂ 4787 ನಿಕ್ಷಯ್ ಮಿತ್ರರಿಂದ 98,721 ಪೌಷ್ಠಿಕ ಆಹಾರದ ಕಿಟ್ ಗಳನ್ನು ಕ್ಷಯರೋಗಿಗಳಿಗೆ ವಿತರಿಸಲಾಗಿದೆ. ರಾಜ್ಯದಲ್ಲಿ ಪ್ರತಿ 2.5 ಲಕ್ಷ ಜನಸಂಖ್ಯೆಗೆ ಒಂದು ಕ್ಷಯ ಘಟಕ ಸ್ಥಾಪಿಸಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 1450 ಮೈಕ್ರೋಸ್ಕೋಪಿಕ್ ಕೇಂದ್ರ ಸ್ಥಾಪಿಸಲಾಗಿದೆ.