ಏಕ ನಿವೇಶನ ಸಮಸ್ಯೆ ಬಗೆಹರಿಸಲು ಅಗತ್ಯ ಕ್ರಮ: ವೆಂಕಟ್ ರಾಜಾ

| Published : Sep 07 2024, 01:42 AM IST

ಸಾರಾಂಶ

ನಗರಸಭೆಯ ಸಭಾಂಗಣದಲ್ಲಿ ಆಡಳಿತಾಧಿಕಾರಿ ವೆಂಕಟ್ ರಾಜಾ ಅವರ ಅಧ್ಯಕ್ಷತೆಯಲ್ಲಿ ನಗರಸಭಾ ಸಾಮಾನ್ಯ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ನಗರ ವ್ಯಾಪ್ತಿಯಲ್ಲಿ ನಿವೇಶನಗಳ ಖಾತೆ ತೆರೆಯಲು ಇರುವ ‘ಏಕ ನಿವೇಶನ’ ಸಮಸ್ಯೆಯನ್ನು ಬಗೆಹರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳು ಹಾಗೂ ನಗರಸಭಾ ಆಡಳಿತಾಧಿಕಾರಿಗಳಾದ ವೆಂಕಟ್ ರಾಜಾ ಸ್ಪಷ್ಟಪಡಿಸಿದ್ದಾರೆ.

ನಗರಸಭೆಯ ಸಭಾಂಗಣದಲ್ಲಿ ಆಡಳಿತಾಧಿಕಾರಿ ವೆಂಕಟ್ ರಾಜಾ ಅವರ ಅಧ್ಯಕ್ಷತೆಯಲ್ಲಿ ನಗರಸಭಾ ಸಾಮಾನ್ಯ ಸಭೆ ನಡೆಯಿತು.

ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ಕೆ.ಎಸ್. ರಮೇಶ್, ನಗರಸಭಾ ವ್ಯಾಪ್ತಿಯಲ್ಲಿ ನಿವೇಶನಗಳನ್ನು ಹೊಂದಿರುವ ಬಡ ಮಂದಿ ಖಾತೆಗಳನ್ನು ಮಾಡಿಸುವ ಹಂತದಲ್ಲಿ ಏಕ ನಿವೇಶನದ ವಿಭಜನ ನಕ್ಷೆಯ ಷರತ್ತು ವಿಧಿಸಲಾಗುತ್ತಿದೆ. ಇದಕ್ಕಾಗಿ ನಿವೇಶನ ಹೊಂದಿರುವವರು ಮುಡಾಕ್ಕೆ ತೆರಳಿದರೆ ಅಲ್ಲಿ ಇದರ ಅವಶ್ಯಕತೆ ಇಲ್ಲವೆಂದು ಹಿಂಬರಹ ನೀಡಿ ಮರಳಿ ನಗರಸಭೆಗೆ ಕಡತ ಕಳುಹಿಸುತ್ತಿದ್ದಾರೆ. ಇದರಿಂದ ಬಹಳಷ್ಟು ಸಮಸ್ಯೆ ಆಗುತ್ತಿದೆ ಎಂದು ಸಭೆಯ ಗಮನಕ್ಕೆ ತಂದರು.

ಇದಕ್ಕೆ ಪೂರಕವಾಗಿ ಅಮಿನ್ ಮೊಹಿಸಿನ್ ಮಾತನಾಡಿ, ಬಹಳಷ್ಟು ಹಿಂದಿನಿಂದಲೆ ನಗರ ವ್ಯಾಪ್ತಿಯಲ್ಲಿ ಮನೆ, ನಿವೇಶನ ಹೊಂದಿದ್ದು, ಇದನ್ನು ತಮ್ಮ ಮಕ್ಕಳಿಗೆ ಹಂಚಿಕೆ ಮಾಡಿಕೊಡುವ ಹಂತದಲ್ಲಿಯೂ ‘ಏಕ ನಿವೇಶನ ವಿಭಜನೆ ನಕ್ಷೆ’ ಕೇಳಲಾಗುತ್ತಿದೆ. ಆದರೆ ಈ ಬಗ್ಗೆ ನ್ಯಾಯಾಲಯಗಳು ವಿವಿಧ ಪ್ರಕರಣಗಳಲ್ಲಿ ಇದರ ಅಗತ್ಯವಿಲ್ಲವೆಂದು ತೀರ್ಪು ನೀಡಿರುವ ಅಂಶವನ್ನು ಸಭೆಯ ಮುಂದಿಟ್ಟು, ಸಮಸ್ಯೆ ಬಗೆಹರಿಸುವಂತೆ ಕೋರಿದರು.

ಈ ಬಗ್ಗೆ ಸುದೀರ್ಘ ಚರ್ಚೆ ನಡೆದು ಆಡಳಿತಾಧಿಕಾರಿ ವೆಂಕಟ್ ರಾಜಾ ಅವರು, ಈ ಬಗ್ಗೆ ಜನರಿಗೆ ಅನುಕೂಲಕರವಾದ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

* ಗುತ್ತಿಗೆದಾರ ಸಂಸ್ಥೆ ಬ್ಲಾಕ್ ಲಿಸ್ಟ್‌ಗೆ: ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಎಲ್‌ಇಡಿ ಬೀದಿ ದೀಪಗಳು ಸಮರ್ಪಕವಾಗಿ ಉರಿಯದೆ, ನಗರ ಕತ್ತಲೆಯಲ್ಲಿ ಮುಳುಗಿದೆ. ಇದನ್ನು ಸಮರ್ಪಕವಾಗಿ ನಿರ್ವಹಿಸದಿರುವ ವಿಚಾರ ಸಭೆಯಲ್ಲಿ ಪ್ರಸ್ತಾಪವಾಯಿತು. ಈ ಸಂದರ್ಭ ಜಿಲ್ಲಾಧಿಕಾರಿ, ಟೆಂಡರ್ ನಿಯಮಗಳಂತೆ ಗುತ್ತಿಗೆದಾರ ಸಂಸ್ಥೆ ಬೀದಿ ದೀಪ ನಿರ್ವಹಿಸಿಲ್ಲ ಎಂದಾದರೆ ಅದನ್ನು ಕಪ್ಪು ಪಟ್ಟಿಗೆ ಒಳಪಡಿಸುವ ಎಚ್ಚರಿಕೆ ನೀಡಿದರು.

*ಗುಂಡಿ ಮುಚ್ಚುವುದಕ್ಕೆ ಅವಕಾಶ: ಮಡಿಕೇರಿ ನಗರ ವ್ಯಾಪ್ತಿಯಲ್ಲಿ ತುರ್ತಾಗಿ ನಡೆಯಬೇಕಾಗಿರುವ ರಸ್ತೆ ಗುಂಡಿ ಮುಚ್ಚುವ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ಹಾಗೂ ಮಡಿಕೇರಿ ನಗರಸಭಾ ಆಡಳಿತಾಧಿಕಾರಿ ವೆಂಕಟ್ ರಾಜಾ ತಿಳಿಸಿದರು. ಎನ್‌ಡಿಆರ್‌ಎಫ್ ಅಡಿ ರಸ್ತೆಗಳ ಗುಂಡಿ ಮುಚ್ಚುವ ಕಾಮಗಾರಿಗಳಿಗೆ ಮಾತ್ರ ಅವಕಾಶವಿದೆ. ಇದನ್ನು ಗಮನದಲ್ಲಿರಿಸಿಕೊಂಡು ಪ್ರಸ್ತಾವನೆಯನ್ನು ಸಲ್ಲಿಸುವಂತೆ ಸದಸ್ಯರಿಗೆ ಸ್ಪಷ್ಟ ಮಾಹಿತಿ ನೀಡಿದರು.

ಸದಸ್ಯ ಮನ್ಸೂರ್ ಮಾತನಾಡಿ ಮಡಿಕೇರಿ ನಗರ ವ್ಯಾಪ್ತಿಯಲ್ಲಿ ನಗರೋತ್ಥಾನದಡಿ ಆಗಿರುವ ಕೆಲಸಗಳನ್ನು ಮತ್ತೆ ನಡಾವಳಿಯಲ್ಲಿ ನಗರಸಭಾ ನಿಧಿಯ ಕಾಮಗಾರಿಗಳಲ್ಲಿ ತೋರಿಸಲಾಗಿದೆ ಎಂದು ಸಭೆಯ ಗಮನ ಸೆಳೆದರು. ಸದಸ್ಯ ಅಮಿನ್ ಮೊಹಿಸಿನ್, ನಗರೋತ್ಥಾನದಡಿ ನಡೆದ ಬಹಳಷ್ಟು ಕಾಮಗಾರಿಗಳು ಈಗ ಹದಗೆಟ್ಟಿದೆ ಮತ್ತು ಸಾಕಷ್ಟು ಕಾಮಗಾರಿಗಳು ನಡೆದಿಲ್ಲ ಎಂದರು.

ಸದಸ್ಯ ಕೆ.ಎಸ್. ರಮೇಶ್ ಮಾತನಾಡಿ ದಸರಾ ಸಮೀಪಿಸುತ್ತಿದ್ದು, ದಶಮಂಟಪಗಳು ತೆರಳುವ ಹಾದಿಯ ದುರಸ್ತಿ ಕಾರ್ಯ ಅವಶ್ಯವಾಗಿ ನಡೆಯಬೇಕಾಗಿದೆ ಎಂದು ಒತ್ತಾಯಿಸಿದರು. ಆಡಳಿತಾಧಿಕಾರಿ ವೆಂಕಟ್ ರಾಜಾ ಮಾತನಾಡಿ ಎನ್‌ಡಿಆರ್‌ಎಫ್ ಅಡಿ ನಗರದ ಗುಂಡಿ ಮುಚ್ಚುವ ಕೆಲಸಗಳನ್ನಷ್ಟೆ ಮಾಡಲು ಸಾಧ್ಯ. ಈ ಹಿನ್ನೆಲೆಯಲ್ಲಿ ಅದಕ್ಕೆ ಪೂರಕವಾದ ಪ್ರಸ್ತಾವನೆಯನ್ನು ಮಾತ್ರವೇ ಸಲ್ಲಿಸುವಂತೆ ಸೂಚಿಸಿದರು.

* ಪಾದಚಾರಿ ಸ್ನೇಹಿ ರಸ್ತೆ: ನಗರದ ಡಿಸಿಸಿ ಬ್ಯಾಂಕ್‌ನಿಂದ ರಾಜಾಸೀಟ್‌ವರೆಗಿನ ರಸ್ತೆಯ ಇಕ್ಕೆಲಗಳಲ್ಲಿ ಇಂಟರ್ ಬ್ಲಾಕ್‌ಗಳನ್ನು ಅಳವಡಿಸಿ ಪಾದಚಾರಿ ಸ್ನೇಹಿ ರಸ್ತೆಯನ್ನಾಗಿ ಪರಿವರ್ತಿಸುವ ಅಗತ್ಯವಿದೆ. ಈ ಕಾರ್ಯ ಹತ್ತು ಹದಿನೈದು ದಿನಗಳಲ್ಲಿ ಪೂರ್ಣಗೊಳಿಸಬಹುದು. ಈ ಕುರಿತು ಅಗತ್ಯ ಗಮನ ಹರಿಸುವಂತೆ ಪೌರಾಯುಕ್ತರಿಗೆ ಸ್ಪಷ್ಟ ನಿರ್ದೇಶನವನ್ನು ನೀಡಿದರು.

ಕೈ ತಪ್ಪಿತೆ ಪುಟಾಣಿ ರೈಲು?: ನಗರಸಭಾ ಮಾಜಿ ಅಧ್ಯಕ್ಷೆ ಅನಿತಾ ಪೂವಯ್ಯ ರಾಜಾಸೀಟು ಬಳಿಯ ಪುಟಾಣಿ ರೈಲು ದುರಸ್ತಿಗೊಳಿಸಿ, ಮತ್ತೆ ಚಾಲನೆ ನೀಡಬೇಕೆನ್ನುವ ಅನಿಸಿಕೆ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ವೆಂಕಟ್ ರಾಜಾ ಪುಟಾಣಿ ರೈಲು ಪುನರಾರಂಭಕ್ಕೆ ಸಂಬಂಧಿಸಿದಂತೆ ಈಗಾಗಲೆ ಸರ್ವೇ ನಡೆಸಲಾಗಿದ್ದು, ೧ ಕೋಟಿ ರು. ಅಗತ್ಯವಿದೆ. ಅಲ್ಲದೆ ಆ ಪ್ರದೇಶ ತೋಟಗಾರಿಕಾ ಇಲಾಖೆಯ ವಶಕ್ಕೆ ಹೋಗಿದೆ ಎಂದು ಸಭೆಗೆ ತಿಳಿಸಿದರು. ಈ ಸಂದರ್ಭ ಉಮೇಶ್ ಸುಬ್ರಮಣಿ ಮಾತನಾಡಿ ತೋಟಗಾರಿಕಾ ಇಲಾಖೆಯ ವಶದಲ್ಲಿರುವ ಪುಟಾಣಿ ರೈಲನ್ನು ನಗರಸಭೆಗೆ ನೀಡುವಂತೆ ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ವೆಂಕಟ್ ರಾಜಾ ಕಾನೂನಿನಂತೆ ಪ್ರಸ್ತುತ ಪುಟಾಣಿ ರೈಲು ತೋಟಗಾರಿಕಾ ಇಲಾಖೆಯ ವಶದಲ್ಲಿದೆ. ಏಕಾಏಕಿ ಅದನ್ನು ನಗರಸಭೆಗೆ ಕಾನೂನಿನಂತೆ ನೀಡಲು ಸಾಧ್ಯವಿಲ್ಲ. ಈ ಬಗ್ಗೆ ತೋಟಗಾರಿಕಾ ಇಲಾಖೆಯೊಂದಿಗೆ ಚರ್ಚಿಸಬೇಕಿದೆ ಎಂದು ಸ್ಪಷ್ಟಪಡಿಸಿದರು.

* ಅಸಮರ್ಪಕ ತ್ಯಾಜ್ಯ ವಿಲೇವಾರಿ: ಮಡಿಕೇರಿ ನಗರಸಭಾ ವ್ಯಾಪ್ತಿಯಲ್ಲಿ ಹಸಿಕಸ ಮತ್ತು ಒಣಕಸಗಳ ವಿಲೇವಾರಿ ಸಮರ್ಪಕವಾಗಿ ನಡೆಯದಿರುವ ಅಂಶವನ್ನು ಮನ್ಸೂರು ಸಭೆಯ ಗಮನಕ್ಕೆ ತಂದು, ನಗರದ ಅಲ್ಲಲ್ಲಿ ಸಿಸಿ ಟಿವಿ ಅಳವಡಿಸಿದ್ದರೂ ಕಸವನ್ನು ಎಲ್ಲೆಂದರಲ್ಲಿ ಎಸೆಯುವುದನ್ನು ನಿಯಂತ್ರಿಸಲು ಸಾಧ್ಯವಾಗದಿರುವ ಕುರಿತು ಸಭೆಯ ಗಮನ ಸೆಳೆದರು. ಇದಕ್ಕೆ ಪೂರಕವಾಗಿ ಸದಸ್ಯ ಅಪ್ಪಣ್ಣ ಮಾತನಾಡಿ ಸುಮಾರು ೫೦ ರಿಂದ ೫೫ ಲಕ್ಷ ವೆಚ್ಚದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಆರಂಭಿಸಲಾಗಿದ್ದರೂ ಕಸ ವಿಲೇವಾರಿ ಮಾತ್ರ ನಡೆಯುತ್ತಿಲ್ಲ ಎಂದು ದೂರಿದರು.

ನಮಗೂ ಕೊಡಿ ಅನುದಾನ!: ನಗರಸಭಾ ಮಾಜಿ ಅಧ್ಯಕ್ಷೆ ಅನಿತಾ ಪೂವಯ್ಯ ನಗರಸಭಾ ನಿಧಿಯಿಂದ ಪ್ರತಿ ವಾರ್ಡಿಗೆ ಒದಗಿಸಿರುವ ೫ ಲಕ್ಷ ರು.ಗಳ ಅನುದಾನದಡಿ ಅಭಿವೃದ್ಧಿ ಕಾಮಗಾರಿಗಳಿಗೆ ಅವಕಾಶ ಒದಗಿಸಲು ಕೋರಿದರು. ಇದೇ ಹಂತದಲ್ಲಿ ನಾಮ ನಿರ್ದೇಶಿತ ಸದಸ್ಯರು, ತಮಗೂ ೨ ಲಕ್ಷ ಅನುದಾನ ಒದಗಿಸುವಂತೆ ಮನವಿ ಮಾಡಿದರು. ಇದಕ್ಕೆ ಬಿಜೆಪಿ ಸದಸ್ಯರು ವಿರೋಧ ವ್ಯಕ್ತಪಡಿಸಿದರೆ, ಕಾಂಗ್ರೆಸ್ ಸದಸ್ಯ ರಾಜೇಶ್ ಯಲ್ಲಪ್ಪ ನಿಮ್ಮ ಅವಧಿಯಲ್ಲಿ ನಾಮನಿರ್ದೇಶಿತ ಬಿಜೆಪಿ ಸದಸ್ಯರಿಗೆ ಅನುದಾನ ಒದಗಿಸಿಲ್ಲವೆ ಎಂದಿದ್ದು ವಾಗ್ವಾದಕ್ಕೆ ಕಾರಣವಾಯಿತು.

ವೆಂಕಟ್ ರಾಜಾ ಮಾತನಾಡಿ ಈ ಅನುದಾನ ಅಭಿವೃದ್ಧಿ ಕಾರ್ಯಗಳಿಗೆ ಮೀಸಲಾಗಿರುತ್ತದೆ. ನಾಮನಿರ್ದೇಶಿತ ಸದಸ್ಯರು ಅಗತ್ಯವಾಗಿ ನಡೆಯಬೇಕಾದ ಕಾಮಗಾರಿಗಳನ್ನು ತಮಗೆ ಸೂಚಿಸಿದರೆ ಪರಿಶೀಲಿಸಿ ಅವುಗಳನ್ನು ನಡೆಸುವುದಾಗಿ ಸ್ಪಷ್ಟಪಡಿಸಿದರು.

ಕಲಾ ಕ್ಷೇತ್ರ ನಿರ್ಮಾಣ: ಕಾವೇರಿ ಕಲಾಕ್ಷೇತ್ರದ ಪುನರ್ ನಿರ್ಮಾಣ ಹಂತದಲ್ಲಿ ವಾಹನ ನಿಲುಗಡೆ ವ್ಯವಸ್ಥೆಗೆ ಅವಕಾಶ ಕಲ್ಪಿಸಬಹುದೆನ್ನುವ ವಿಚಾರವನ್ನು ಆಡಳಿತಾಧಿಕಾರಿ ವೆಂಕಟ್ ರಾಜಾ ಅವರು ಸಭೆಯ ಮುಂದಿರಿಸಿದರು. ಈಗಾಗಲೆ ಕಾವೇರಿ ಕಲಾ ಕ್ಷೇತ್ರದ ಪುನರ್ ನಿರ್ಮಾಣಕ್ಕೆ ನೀಲಿ ನಕಾಶೆ ಸಿದ್ಧವಾಗಿದೆ. ಪ್ರಸ್ತುತ ನಗರದಲ್ಲಿ ವಾಹನ ನಿಲುಗಡೆ ಸಮಸ್ಯೆ ಹೆಚ್ಚಾಗಿದೆ. ಈ ಹಿನ್ನೆಲೆ ನಗರದ ಕೇಂದ್ರ ಸ್ಥಾನದಲ್ಲಿ ಕಲಾ ಕ್ಷೇತ್ರ ನಿರ್ಮಿಸುವ ಸಂದರ್ಭ ೨ ಹಂತದ ವಾಹನ ನಿಲುಗಡೆಯನ್ನು ಅಲ್ಲಿ ಒದಗಿಸಲು ಸಾಧ್ಯವಿದೆ. ಇದರಲ್ಲಿ ಒಂದು ಹಂತದಲ್ಲೇ ೨೨೫ ಕಾರುಗಳನ್ನು ನಿಲ್ಲಿಸಲು ಅವಕಾಶ ದೊರಕಲಿದೆ ಎಂದು ಮಾಹಿತಿ ನೀಡಿದರು. ..............ಸಾಮಾನ್ಯ ಸಭೆ ‘ಕಾನೂನು ಬದ್ಧವಲ್ಲ’

ಆಡಳಿತಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕರೆಯಲಾಗಿರುವ ನಗರ ಸಭೆ ಸಾಮಾನ್ಯ ಸಭೆಯ ನಡಾವಳಿಯಲ್ಲಿ ಈ ಹಿಂದಿನ ಹಲವು ಸಭೆಗಳ ಅಂಶಗಳನ್ನು ತರದೆ ಇರುವ ಹಿನ್ನೆಲೆಯಲ್ಲಿ ಸಭೆಯ ಕಾನೂನು ಬದ್ಧವಲ್ಲವೆಂದು ಸದಸ್ಯ ಅಮಿನ್ ಮೊಹಿಸಿನ್ ಸಭೆಯ ಗಮನಕ್ಕೆ ತಂದ ಘಟನೆ ನಡೆಯಿತು.

ಈ ಹಿಂದೆ ಪೌರಾಯುಕ್ತರನ್ನು ಇಲ್ಲಿಂದ ವರ್ಗಾವಣೆ ಮಾಡಬೇಕೆನ್ನುವ ನಿರ್ಣಯ ತೆಗೆದುಕೊಂಡ ಸಭೆಯ ನಿರ್ಣಯಗಳನ್ನು ಈ ಸಭೆಗೆ ತಂದಿಲ್ಲ. ಹಿಂದಿನ ಆಯವ್ಯಯ ಸಭೆಯ ನಿರ್ಣಯಗಳನ್ನು ಸಭೆಗೆ ತಂದಿಲ್ಲ ಎಂದು ಉದಾಹರಣೆ ಸಹಿತ ವಿವರಿಸಿದ ಅಮಿನ್ ಮೊಹಿಸಿನ್, ಇವೆಲ್ಲವುಗಳನ್ನು ಪೌರಾಯುಕ್ತರು ಉದ್ದೇಶ ಪೂರ್ವಕವಾಗಿ ಮರೆ ಮಾಡಿದ್ದಾರೆಂದು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಆಡಳಿತಾಧಿಕಾರಿ ವೆಂಕಟ್ ರಾಜ ಈ ಬಗ್ಗೆ ತನಿಖೆ ಮಾಡಿಸುವುದಾಗಿ ತಿಳಿಸಿದರು. ಮುಂದಿನ ಸಭೆಯಲ್ಲಿ ಕಳೆದ ಸಭೆಗಳ ಅಂಶಗಳನ್ನು ತರಬೇಕೆಂದು ಪೌರಾಯುಕ್ತರಿಗೆ ಸೂಚಿಸಿದರಲ್ಲದೇ, ಸದಸ್ಯರ ಒಪ್ಪಿಗೆ ಇದ್ದಲ್ಲಿ ಸಭೆ ನಡೆಸಬಹುದೆಂದು ತಿಳಿಸಿದರು. ಇದಕ್ಕೆ ಸದಸ್ಯರು ಒಪ್ಪಿಗೆ ಸೂಚಿಸಿದ ಬಳಿಕ ಸಭೆ ಮುಂದುವರಿಯಿತು.