ವಿದ್ಯಾರ್ಥಿ ನಿಲಯಗಳಿಗೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಬೇಕು : ಕಟಾರಿಯಾ

| Published : Jan 05 2025, 01:31 AM IST

ಸಾರಾಂಶ

ಚಿಕ್ಕಮಗಳೂರು, ವಿದ್ಯಾರ್ಥಿನಿಲಯಗಳಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಉತ್ತಮ ವಾತಾವರಣ ರೂಪಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಅಧಿಕಾರಿಗಳಿಗೆ ಸೂಚಿಸಿದರು.

ಚಿಕ್ಕಮಗಳೂರು ಜಿಪಂನಲ್ಲಿ ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ವಿದ್ಯಾರ್ಥಿನಿಲಯಗಳಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಉತ್ತಮ ವಾತಾವರಣ ರೂಪಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಅಧಿಕಾರಿಗಳಿಗೆ ಸೂಚಿಸಿದರು.ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,

ವಿದ್ಯಾರ್ಥಿ ನಿಲಯಗಳಲ್ಲಿ ಬಡ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಾರೆ. ಅವರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ವಿಶೇಷ ಕಾಳಜಿ ವಹಿಸಬೇಕು. ಶುದ್ಧ ಕುಡಿಯುವ ನೀರು, ಸ್ನಾನಕ್ಕೆ ಬಿಸಿ ನೀರು ಹಾಗೂ ಪೌಷ್ಟಿಕ ಆಹಾರ ನೀಡುವುದಲ್ಲದೆ, ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದರು. ಜಿಲ್ಲೆಯಲ್ಲಿರುವ ಅಂಗನವಾಡಿ ಮತ್ತು ಶಾಲಾ ಕಟ್ಟಡಗಳನ್ನು ತಾಂತ್ರಿಕವಾಗಿ ಪರಿಶೀಲಿಸಿ ಕಟ್ಟಡಗಳ ಸುರಕ್ಷತೆ ಮತ್ತು ಅಸುರಕ್ಷತೆ ಬಗ್ಗೆ ದೃಢೀಕರಣ ನೀಡಬೇಕು ಎಂದು ಸೂಚಿಸಿದ ಅವರು, ಅಸುರಕ್ಷಿತ ಕಟ್ಟಡಗಳನ್ನು ಗುರುತಿಸಿ ಮಳೆಗಾಲ ಪ್ರಾರಂಭವಾಗುವುದರೊಳಗೆ ದುರಸ್ತಿ ಪಡಿಸಬೇಕೆಂದು ಹೇಳಿದಾಗ, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಸಭೆಗೆ ಮಾಹಿತಿ ನೀಡಿ ಈಗಾಗಲೇ ಅಸುರಕ್ಷಿತ ಕಟ್ಟಡಗಳನ್ನು ಗುರುತಿಸಿ ಕಟ್ಟಡಗಳ ದುರಸ್ತಿ ಕಾರ್ಯ ನಡೆಯುತ್ತಿದೆ ಎಂದರು.ಸರ್ಕಾರಿ ಆಸ್ತಿಯನ್ನು ಪಹಣಿಯಲ್ಲಿ ಇಂಡೀಕರಣ ಮಾಡಲು ಈಗಾಗಲೇ ಎಲ್ಲಾ ಇಲಾಖೆಗಳಿಗೂ ಸೂಚಿಸಲಾಗಿದೆ. ಇಂಡೀಕರಣವಾಗದೆ ಇರುವ ಜಾಗದ ದಾಖಲೆಗಳನ್ನು ಪರಿಶೀಲಿಸಿ ಪಹಣಿಯಲ್ಲಿ ಇಂಡೀಕರಣ ಮಾಡಲು ಕ್ರಮವಹಿಸಬೇಕು. ಶಾಲೆ, ಆಸ್ಪತ್ರೆ ಮುಂತಾದವುಗಳಿಗೆ ಹಿಂದೆ ದಾನಿಗಳು ನೀಡಿದ ಜಾಗಗಳನ್ನು ಪಹಣಿಯಲ್ಲಿ ಇಂಡೀಕರಣ ಮಾಡದೆ ಇರುವು ದರಿಂದ ಇವುಗಳ ಬೆಲೆ ಹೆಚ್ಚಾಗಿರುವುದರಿಂದ ದಾನಿಗಳ ವಂಶಸ್ಥರು ಜಾಗ ದಾನ ನೀಡುವುದಿಲ್ಲ ಎಂದು ಹೇಳುತ್ತಿದ್ದಾರೆ. ಹಲವಾರು ಕೇಸುಗಳು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿವೆ. ಆದ್ದರಿಂದ ತಮ್ಮ ಇಲಾಖೆಯ ಜಾಗ ಆಸ್ತಿಗಳ ದಾಖಲೆ ಗಳನ್ನು ಪರಿಶೀಲಿಸಿ ಪಹಣಿಯಲ್ಲಿ ಇಂಡೀಕರಣಗೊಳಿಸಲು ಕ್ರಮವಹಿಸಬೇಕೆಂದು ತಿಳಿಸಿದರು.

ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಚ್.ಎಸ್. ಕೀರ್ತನಾ ಮಾತನಾಡಿ, ನರೇಗಾ ಯೋಜನೆಯಡಿ ಜಿಲ್ಲೆಯಲ್ಲಿ 721 ಬದು ನೀರು ನಿರ್ವಹಣೆ ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, 19 ಗ್ರಾಮಗಳ ಪೈಕಿ 6 ಗ್ರಾಮಗಳಲ್ಲಿನ ಸಮುದಾಯ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ಮುಕ್ತಾಯಗೊಂಡಿದೆ. 270 ವೈಯಕ್ತಿಕ ಕಾಮಗಾರಿಗಳು ಪ್ರಗತಿಯಲ್ಲಿದೆ. ಉಳಿದ ಕಾಮಗಾರಿಗಳಿಗೆ ಟೆಂಡರ್ ಕರೆಯಲು ಕ್ರಮವಹಿಸಲಾಗಿದೆ. ಈ ಯೋಜನೆಯಡಿ 2024-25 ನೇ ಸಾಲಿನ ವಾರ್ಷಿಕ 30 ಲಕ್ಷ ಮಾನವ ದಿನಗಳ ಸೃಜನೆಗೆ ಗುರಿ ನಿಗಧಿಯಾಗಿದ್ದು, ಈವರೆಗೆ 21.46 ಲಕ್ಷ ಮಾನವ ದಿನಗಳು ಸೃಜನೆಯಾಗಿ ವಾರ್ಷಿಕ ಶೇ. 71.55 ಸಾಧನೆಯಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಂ ಅಮಟೆ, ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ, ಉಪ ವಿಭಾಗಾಧಿಕಾರಿ ದಲ್ಜಿತ್ ಕುಮಾರ್, ಡಾ. ಕಾಂತರಾಜ್ ಉಪಸ್ಥಿತರಿದ್ದರು.

---- ಬಾಕ್ಸ್‌ -----ಜಿಲ್ಲೆಯಲ್ಲಿ 120 ಕಂದಾಯ ಗ್ರಾಮ ಗುರುತು: ಡಿಸಿಜಿಲ್ಲೆಯಲ್ಲಿ 120 ಕಂದಾಯ ಗ್ರಾಮಗಳನ್ನು ಗುರುತಿಸಲಾಗಿದೆ. ಈವರೆಗೆ 97 ಗ್ರಾಮಗಳು ಪ್ರಾಥಮಿಕ ಅಧಿಸೂಚನೆ ಆಗಿವೆ. 6 ಪ್ರಾಥಮಿಕ ಅಧಿಸೂಚನೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬಾಕಿ 17 ಇವೆ. 60 ಗ್ರಾಮಗಳಿಗೆ ಸರ್ಕಾರದಿಂದ ಅಂತಿಮ ಅಧಿಸೂಚನೆ ಆಗಿದ್ದು, 7 ಗ್ರಾಮಗಳಿಗೆ ಅಂತಿಮ ಅಧಿಸೂಚನೆಗೆ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಒಟ್ಟು 3900 ಹಕ್ಕು ಪತ್ರಗಳನ್ನು ವಿತರಣೆ ಮಾಡಲು ಗುರುತಿಸಲಾಗಿದ್ದು, ಗ್ರಾಮ ಆಡಳಿತಾಧಿಕಾರಿಗಳ ಲಾಗಿನ್ ನಲ್ಲಿ 171, ತಹಸೀಲ್ದಾರ್ ಲಾಗಿನ್ 767 ಹಕ್ಕುಪತ್ರಗಳ ಅಂತಿಮ ಅಧಿಸೂಚನೆಗೆ ಬಾಕಿ ಇದೆ. ಬಾಕಿ ಇರುವ ಹಕ್ಕುಪತ್ರಗಳನ್ನು ತುರ್ತಾಗಿ ಅನುಮೋದನೆಗೆ ಕ್ರಮವಹಿಸಲಾಗುತ್ತಿದೆ. 1337 ಹಕ್ಕುಪತ್ರಗಳಿಗೆ ತಹಸೀಲ್ದಾರರು ಅಂತಿಮವಾಗಿ ಅನುಮೋದನೆ ನೀಡಿದ್ದು, ಹಕ್ಕುಪತ್ರ ವಿತರಿಸಲು ಕ್ರಮವಹಿಸಲಾಗುವುದೆಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಭೆಯಲ್ಲಿ ಮಾಹಿತಿ ನೀಡಿದರು.

4 ಕೆಸಿಕೆಎಂ 1ಚಿಕ್ಕಮಗಳೂರಿನ ಜಿಪಂ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದರ್‌ ಕುಮಾರ್‌ ಕಟಾರಿಯಾ ಅವರ ಅಧ್ಯಕ್ಷತೆಯಲ್ಲಿ ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಡಿಸಿ ಮೀನಾ ನಾಗರಾಜ್‌, ಜಿಪಂ ಸಿಇಒ ಕೀರ್ತನಾ ಇದ್ದರು.