ಸರ್ಕಾರಿ ಶಾಲೆ ಮಕ್ಕಳ ಸಾಧನೆಗೆ ಅಗತ್ಯ ಮಾರ್ಗದರ್ಶನ ಅವಶ್ಯ: ಸುಮತಿ ಕುಮಾರಸ್ವಾಮಿ

| Published : Jul 27 2025, 01:51 AM IST

ಸರ್ಕಾರಿ ಶಾಲೆ ಮಕ್ಕಳ ಸಾಧನೆಗೆ ಅಗತ್ಯ ಮಾರ್ಗದರ್ಶನ ಅವಶ್ಯ: ಸುಮತಿ ಕುಮಾರಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರಿ ಶಾಲೆ ಮಕ್ಕಳಲ್ಲಿ ಸಾಕಷ್ಟು ಪ್ರತಿಭೆ ಇದ್ದು, ಸೂಕ್ತ ಪ್ರೋತ್ಸಾಹ ಮತ್ತು ಅಗತ್ಯ ಮಾರ್ಗದರ್ಶನ ನೀಡಿದಲ್ಲಿ ಉನ್ನತ ಸಾಧನೆ ಮಾಡಲು ಸಾಧ್ಯ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷೆ ಸುಮತಿ ಕುಮಾರಸ್ವಾಮಿ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಸರ್ಕಾರಿ ಶಾಲೆ ಮಕ್ಕಳಲ್ಲಿ ಸಾಕಷ್ಟು ಪ್ರತಿಭೆ ಇದ್ದು, ಸೂಕ್ತ ಪ್ರೋತ್ಸಾಹ ಮತ್ತು ಅಗತ್ಯ ಮಾರ್ಗದರ್ಶನ ನೀಡಿದಲ್ಲಿ ಉನ್ನತ ಸಾಧನೆ ಮಾಡಲು ಸಾಧ್ಯ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷೆ ಸುಮತಿ ಕುಮಾರಸ್ವಾಮಿ ಹೇಳಿದರು.

ತಾಲೂಕಿನ ಕೊಮ್ಮನಾಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಟೀ ಶರ್ಟ್ ಮತ್ತು ಲೇಖನ ಸಾಮಾಗ್ರಿಗಳನ್ನು ವಿತರಿಸಿ ಮಾತನಾಡಿ, ಸರ್ಕಾರದ ಸೌಲಭ್ಯಗಳ ಜತೆಯಲ್ಲಿ ಸಂಘ ಸಂಸ್ಥೆಗಳ ನೆರವು ಅತಿ ಮುಖ್ಯ, ಇದರಿಂದ ಮಕ್ಕಳಿಗೆ ಕಲಿಕೆಗೆ ಪೂರಕವಾದ ವಾತಾವರಣ ಸೃಷ್ಟಿಯಾಗುತ್ತದೆ ಎಂದು ತಿಳಿಸಿದರು.

ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ಅಧ್ಯಕ್ಷ ನೆಪ್ಚೂನ್ ಕಿಶೋರ್ ಕುಮಾರ್ ಮಾತನಾಡಿ, ಈ ವರ್ಷ ರೋಟರಿಯ ಹಲವಾರು ಪ್ರಮುಖ ಜಿಲ್ಲಾ ಯೋಜನೆಗಳನ್ನು ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಅನುಷ್ಠಾನಗೊಳಿಸುತ್ತಿದ್ದೇವೆ. ರಸ್ತೆ ಸುರಕ್ಷತೆ ಹಾಗೂ ಪರಿಸರದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹೆಚ್ಚಾಗಿ ಮಾಡುತ್ತಿದ್ದೇವೆ ಎಂದರು.

ಸರ್ಕಾರಿ ಶಾಲಾ ಮಕ್ಕಳು ವೈಯಕ್ತಿಕ ಸ್ವಚ್ಛತೆ ಹಾಗೂ ಪ್ರತಿನಿತ್ಯ ವಿದ್ಯಾಭ್ಯಾಸದ ಜತೆಗೆ ದೈಹಿಕ ವ್ಯಾಯಾಮ, ಯೋಗಾಸನ ಹಾಗೂ ಕ್ರೀಡೆಗಳ ಬಗ್ಗೆ ಗಮನಹರಿಸಬೇಕು ಎಂದು ನುಡಿದರು.

ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಡಾ. ಧನಂಜಯ ರಾಂಪುರ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ನುರಿತ ಶಿಕ್ಷಕರು ಇರುವುದರ ಜೊತೆಗೆ ಸರ್ಕಾರದ ಒಳ್ಳೆಯ ಸೌಲಭ್ಯಗಳು ಇದ್ದು, ಸದುಪಯೋಗ ಪಡಿಸಿಕೊಂಡು ಮಕ್ಕಳು ಸರ್ವತೋಮುಖವಾಗಿ ಅಭಿವೃದ್ಧಿ ಆಗಬೇಕು ಎಂದು ಹೇಳಿದರು.

ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್ ಮಾತನಾಡಿ, ಕೊಮ್ಮನಾಳು ಶಾಲೆಗೆ ಈಗಾಗಲೇ ಮ್ಯಾಚಿಂಗ್ ಗ್ರಾಂಟ್ ಮುಖಾಂತರ ಬೆಂಚ್, ಡೆಸ್ಕ್ ಹಾಗೂ ಶೌಚಾಲಯ ನಿರ್ಮಾಣದಲ್ಲಿ ಸಹಕರಿಸಿದೆ. ಜಿಲ್ಲೆಯಲ್ಲಿ ಒಂದು ಮಾದರಿ ಶಾಲೆಯಾಗಿ ಹೊರಹೊಮ್ಮಿದ ಸರ್ಕಾರಿ ಕೊಮ್ಮನಾಳು ಶಾಲೆ ಇಂದಿಗೂ ಮಾದರಿಯಾಗಿದೆ ಎಂದು ತಿಳಿಸಿದರು.

ಮುಖ್ಯೋಪಾಧ್ಯಾಯ ಚಂದ್ರಪ್ಪ ಮಾತನಾಡಿ, ರೋಟರಿ ಸೇವೆಯನ್ನು ನಾವು ಮರೆಯಲು ಸಾಧ್ಯವೇ ಇಲ್ಲ. ಪ್ರತಿಭಾ ಪುರಸ್ಕಾರ, ಆರೋಗ್ಯ ತಪಾಸಣಾ ಶಿಬಿರ ಹಾಗೂ ಅನೇಕ ಉಪಯುಕ್ತ ಕಾರ್ಯಕ್ರಮಗಳನ್ನು ರೋಟರಿ ಸಂಸ್ಥೆ ನಮ್ಮ ಶಾಲೆಗೆ ಮಾಡುತ್ತಿದೆ. ಈಗ ಮಕ್ಕಳಿಗೆ ಅಗತ್ಯವಾಗಿ ಬೇಕಾಗಿರುವ ಯೂನಿಫಾರಂ ಟಿ-ಶರ್ಟ್ ಹಾಗೂ ಅಗತ್ಯ ವಸ್ತುಗಳ ವಿತರಣೆ ಸ್ಮರಣೀಯವಾಗಿದೆ ಎಂದರು.

ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 120 ಜನ ವಿದ್ಯಾರ್ಥಿಗಳಿಗೆ ಟೀ ಶರ್ಟ್, ಯೂನಿಫಾರಂ ಅನ್ನು ವಿತರಿಸಲಾಯಿತು. ಶಿಕ್ಷಕರಾದ ಗೀತಾ ಚಿಕ್ಕಮಠ ಉಪಸ್ಥಿತರಿದ್ದರು.