ಧ್ವಜ ಸತ್ಯಾಗ್ರಹದ ಅಭಿವೃದ್ಧಿ ದೃಷ್ಟಿಯಿಂದ ಡೀಸಿ ನೇತೃತ್ವದಲ್ಲಿ ಸಮಿತಿ ರಚಿಸಿ ಕಾಲ ಕಾಲಕ್ಕೆಸಲಹೆ ಸೂಚನೆಗಳನ್ನು ಗಣನೆಗೆ ತೆಗೆದುಕೊಂಡು ಅಭಿವೃದ್ಧಿ ಪಡಿಸಿ ನನ್ನ ಅಧಿಕಾರ ಅವಧಿಯಲ್ಲಿಯೇ ಹೋರಾಟದ ಈ ಸ್ಥಳವನ್ನು ಇತಿಹಾಸದ ಪುಟದಲ್ಲಿ ಅಚ್ಚಳಿಯದೆ ಉಳಿದುಕೊಳ್ಳಲು ಕ್ರಮ ವಹಿಸುವುದು.
ಕನ್ನಡ ಪ್ರಭ ವಾರ್ತೆ ಮದ್ದೂರು
ಐತಿಹಾಸಿಕ ಪಾರಂಪರಿಕ ಸ್ಥಳ ಶಿವಪುರ ಸತ್ಯಾಗ್ರಹ ಸೌಧದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಶಾಸಕ ಕೆ.ಎಂ.ಉದಯ್ ಶನಿವಾರ ಹೇಳಿದರು.ಸತ್ಯಾಗ್ರಹ ಸೌಧದ ಆವರಣದಲ್ಲಿ ಎಂ.ಎಚ್.ಚನ್ನೇಗೌಡ ವಿದ್ಯಾ ಸಂಸ್ಥೆ, ಎಚ್.ಕೆ.ವೀರಣ್ಣಗೌಡ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ ಹಾಗೂ ಸಾಮಾಜಿಕ ಸಂಘಟನೆಗಳ ಸಹಯೋಗದಲ್ಲಿ ನಡೆದ 80ನೇ ಸ್ವಾತಂತ್ರ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಸೌಧದ ಅಭಿವೃದ್ಧಿಗೆ ಸರ್ಕಾರದಿಂದ ಈಗಾಗಲೇ ಎರಡು ಕೋಟಿ ರು. ಅನುದಾನ ಬಿಡುಗಡೆಯಾಗಿದೆ. ಈ ಅನುದಾನದಿಂದ ಪೂರ್ಣ ಅಭಿವೃದ್ಧಿ ಆಸಾಧ್ಯ. ಹೀಗಾಗಿ ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನ ತಂದು ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು ಎಂದು ಆಶ್ವಾಸನೆ ನೀಡಿದರು.ಧ್ವಜ ಸತ್ಯಾಗ್ರಹದ ಅಭಿವೃದ್ಧಿ ದೃಷ್ಟಿಯಿಂದ ಡೀಸಿ ನೇತೃತ್ವದಲ್ಲಿ ಸಮಿತಿ ರಚಿಸಿ ಕಾಲ ಕಾಲಕ್ಕೆಸಲಹೆ ಸೂಚನೆಗಳನ್ನು ಗಣನೆಗೆ ತೆಗೆದುಕೊಂಡು ಅಭಿವೃದ್ಧಿ ಪಡಿಸಿ ನನ್ನ ಅಧಿಕಾರ ಅವಧಿಯಲ್ಲಿಯೇ ಹೋರಾಟದ ಈ ಸ್ಥಳವನ್ನು ಇತಿಹಾಸದ ಪುಟದಲ್ಲಿ ಅಚ್ಚಳಿಯದೆ ಉಳಿದುಕೊಳ್ಳಲು ಕ್ರಮ ವಹಿಸುವುದು ಎಂದರು.
ಚನ್ನೇಗೌಡ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಅಪೂರ್ವ ಚಂದ್ರ ಮಾತನಾಡಿ, ಸತ್ಯಾಗ್ರಹ ಸೌಧದ ಅಭಿವೃದ್ಧಿಗೆ ಕ್ಷೇತ್ರದ ಶಾಸಕರು ಸೇರಿದಂತೆ ಜಿಲ್ಲೆಯ ಎಲ್ಲಾ ಶಾಸಕರು, ಪರಿಷತ್ ಸದಸ್ಯರು ತಮ್ಮ ಪ್ರದೇಶ ಅಭಿವೃದ್ಧಿ ಅನುದಾನದಿಂದ ಅಲ್ಪಸ್ವಲ್ಪ ಹಣ ಬಿಡುಗಡೆ ಮಾಡಿ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಕೆ.ಟಿ.ಚಂದು, ತಹಸೀಲ್ದಾರ್ ಶಿವಕುಮಾರ್ ಬಿರಾದಾರ, ತಾಪಂ ಇಒ ರಾಮಲಿಂಗಯ್ಯ, ಜಿಲ್ಲಾ ಸಹಕಾರ ಬ್ಯಾಂಕ್ ನಿರ್ದೇಶಕ ಪಿ.ಸಂದರ್ಶ, ಚುಂಚಶೀ ಗೆಳೆಯರ ಬಳಗದ ಅಧ್ಯಕ್ಷ ಡಾ.ಬಿ.ಕೃಷ್ಣ, ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ್, ದೇಶಹಳ್ಳಿ ಶಿವಪ್ಪ, ಎಂಡಿ ಮಹಾಲಿಂಗಯ್ಯ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು ಹಾಗೂ ವಿದ್ಯಾ ಸಂಸ್ಥೆಯ ಬೋಧಕರು ಮತ್ತು ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು.