ಬರ ಹಿನ್ನೆಲೆ ರಾಜ್ಯದ ಬಹುತೇಕ ರೈತ ಕುಟುಂಬ, ಕೃಷಿಕೂಲಿ ಕಾರ್ಮಿಕರು ರಾಜ್ಯದ ಗ್ಯಾರಂಟಿ ಯೋಜನೆಗಳ ಮೇಲೆ ಅವಲಂಬನೆ ಆಗಿದ್ದಾರೆ
ಹೊಸಪೇಟೆ: ಮಳೆ ಕೊರತೆಯಿಂದ ರಾಜ್ಯದಲ್ಲಿ ಬರ ಪರಿಸ್ಥಿತಿ ಉಂಟಾಗಿದ್ದು, ಮುಂಗಾರಿನಲ್ಲಿ ಸಾಕಷ್ಟು ಬೆಳೆ ಹಾನಿ ಆಗಿದೆ. ಕೃಷಿ ವಲಯ ಸದೃಢಗೊಳಿಸಲು ಕೃಷಿ ಇಲಾಖೆ ಅಧಿಕಾರಿಗಳು ಕ್ರಿಯಾಶೀಲತೆ ಮತ್ತು ಬದ್ಧತೆಯಿಂದ ಕಾರ್ಯ ಮಾಡುವ ಮೂಲಕ ಈ ವರ್ಷದ ಬರವು ರೈತರಿಗೆ ಮುಂದಿನ ವರ್ಷಗಳಿಗೆ ವರವಾಗುವಂತೆ ನೆಲ, ಜಲ ಮತ್ತು ಮಣ್ಣು ಸಂರಕ್ಷಣೆಗೆ ಮುಂಜಾಗ್ರತೆಯಾಗಿ ಅಗತ್ಯ ಕಾಮಗಾರಿ ಕೈಗೊಳ್ಳಬೇಕೆಂದು ಕೃಷಿ ಸಚಿವ ಪಿ.ಎಂ. ನರೇಂದ್ರಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ವಿಜಯನಗರ ಜಿಪಂ ಸಭಾಂಗಣದಲ್ಲಿ ಶನಿವಾರ ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳ ಕೃಷಿ ಇಲಾಖೆಯ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು.ಬರ ಹಿನ್ನೆಲೆ ರಾಜ್ಯದ ಬಹುತೇಕ ರೈತ ಕುಟುಂಬ, ಕೃಷಿಕೂಲಿ ಕಾರ್ಮಿಕರು ರಾಜ್ಯದ ಗ್ಯಾರಂಟಿ ಯೋಜನೆಗಳ ಮೇಲೆ ಅವಲಂಬನೆ ಆಗಿದ್ದಾರೆ. ಭವಿಷ್ಯತ್ತಿನಲ್ಲಿ ರೈತರಿಗೆ ಉಪಯುಕ್ತವಾಗುವ ಯೋಜನೆ ನಿಮ್ಮ ಅನುಭವದ ಆಧಾರದಲ್ಲಿ ರೂಪಿಸಿ. ವಿಬಿಜಿ ರಾಮ್ ಜಿ ಯೋಜನೆಗೆ ಆದ್ಯತೆ ನೀಡಿ ಮಣ್ಣು, ಜಲ ಸಂರಕ್ಷಣೆಗೆ ಕ್ರಮ ಕೈಗೊಳ್ಳಬೇಕೆಂದು ಹೇಳಿದರು.
ಮುಂದಿನ ವರ್ಷವೂ ಎಲ್ನಿನೋ ಪರಿಣಾಮದಿಂದ ಮಳೆ ಕೊರತೆ ಆಗುವ ಮಾಹಿತಿ ಇದೆ. ಕೃಷಿ ಇಲಾಖೆ ಅಧಿಕಾರಿ, ರೈತರಿಗೆ ಅಲ್ಪಾವಧಿ ಬೆಳೆ ಬೆಳೆಯುವಂತೆ ಪ್ರೋತ್ಸಾಹ ನೀಡಬೇಕು. ಬರ ಪರಿಸ್ಥಿತಿ ಸಮರ್ಪಕವಾಗಿ ನಿರ್ವಹಿಸಲು ರಾಜ್ಯದ ಕೃಷಿ ವಿಶ್ವವಿದ್ಯಾಲಯ, ಕೃಷಿ ಸಂಶೋಧನಾ ಕೇಂದ್ರ ಸಮರ್ಪಕವಾಗಿ ತೊಡಗಿಸಿಕೊಳ್ಳಬೇಕು. ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿ, ಸಂಶೋಧಕರನ್ನು, ಅಧ್ಯಾಪಕರನ್ನು ರೈತರ ಜಮೀನುಗಳಿಗೆ ಕರೆ ತಂದು ರೈತರೊಂದಿಗೆ ಸಮನ್ವಯ ಸಾಧಿಸಲು ಇಲಾಖೆ ಅಧಿಕಾರಿಗಳು ಯೋಜನೆ ರೂಪಿಸಬೇಕೆಂದು ತಿಳಿಸಿದರು.ಕೃಷಿ ಇಲಾಖೆ ಅಧಿಕಾರಿ ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳಬೇಕು. ಸೋಮಾರಿಗಳಂತೆ ಕಚೇರಿಗೆ ಮಾತ್ರ ಸೀಮತವಾಗಬಾರದು. ರೈತರು, ಕೃಷಿ ಕೂಲಿಕಾರರು ಈ ವರ್ಷ ಸಂಕಷ್ಟದಲ್ಲಿದ್ದಾರೆ. ಅವರಿಗೆ ನೆರವಾಗಬೇಕು. ಅವರಿಗೆ ವರ್ಷ ಪೂರ್ತಿ ಕೆಲಸ ಸಿಗುವಂತೆ, ಅದು ಕೃಷಿ ಅಭಿವೃದ್ಧಿಗೆ ಸಹಾಯಕವಾಗುವಂತೆ ಮಾಡಬೇಕು ಎಂದು ಸಚಿವರು ಅಧಿಕಾರಿಗಳಿಗೆ ನಿರ್ದೇಶಿಸಿದರು.
ಸಭೆಯಲ್ಲಿ ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಗರಿಮಾ ಪನ್ವಾರ ಮಾತನಾಡಿ, ಪ್ರಸಕ್ತ ಸಾಲಿನ ಮುಂಗಾರು ಮತ್ತು ಹಿಂಗಾರಿಗೆ ಮಳೆ ಕೊರತೆ ಹೆಚ್ಚಾಗಿದ್ದು, ಬಿತ್ತನೆ ಪ್ರಮಾಣ ಅತೀ ಕಡಿಮೆ ಆಗಿದೆ. ಸಕಾಲಿಕ ಮಳೆಯ ಕೊರತೆಯಿಂದ ಜಿಲ್ಲೆಯಲ್ಲಿ ಸುಮಾರು 2,71,094 ಹೆಕ್ಟೆರ್ ಪ್ರದೇಶದಲ್ಲಿ ಬೆಳೆ ಹಾನಿ ಆಗಿದೆ. ಇದಕ್ಕೆ ಪರಿಹಾರಕ್ಕಾಗಿ ಸರ್ಕಾರಕ್ಕೆ ₹257.08 ಕೋಟಿಗಳ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.ಕೃಷಿ ಇಲಾಖೆಯ ನಿರ್ದೇಶಕ ಡಾ. ಜಿ.ಟಿ.ಪುತ್ರ ನೇಗಿಲಯೋಗಿ ಯೋಜನೆ ಮತ್ತು ಕೃಷಿ ಇಲಾಖೆ ಕಾರ್ಯಕ್ರಮಗಳ ಕುರಿತು ಸಭೆಯಲ್ಲಿ ಮಾತನಾಡಿದರು.
ಬಳ್ಳಾರಿ ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಮಳೆಯ ತೀವ್ರ ಕೊರತೆಯಿಂದ ಕೃಷಿ ಚಟುವಟಿಕೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದ್ದು, ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಾದ್ಯಂತ ಒಟ್ಟು 67,235.9 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಸೋಮಸುಂದರ್ ಸಭೆಗೆ ಮಾಹಿತಿ ನೀಡಿದರು.ಸಭೆಯಲ್ಲಿ ಕೃಷಿ ಇಲಾಖೆಯ ಕಾರ್ಯಕ್ರಮಗಳ ಪ್ರಗತಿ ಕುರಿತು ವಿಜಯನಗರ ಜಿಲ್ಲೆಯ ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಡಿ.ಟಿ. ಮತ್ತು ಬಳ್ಳಾರಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಸೋಮಸುಂದರ ಕೆ.ಎಂ ವಿವರಿಸಿದರು.
ವಿಜಯನಗರ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಉಭಯ ಜಿಲ್ಲೆಗಳ ಉಪ ನಿರ್ದೇಶಕ ವಾಮದೇವ ಕೊಳ್ಳಿ ಮತ್ತು ಮಂಜುನಾಥ ಸೇರಿದಂತೆ ಉಭಯ ಜಿಲ್ಲೆಗಳ ಎಲ್ಲ ತಾಲೂಕುಗಳ ಸಹಾಯಕ ಕೃಷಿ ನಿರ್ದೇಶಕರು, ತಾಂತ್ರಿಕ ಸಿಬ್ಬಂದಿ ಭಾಗವಹಿಸಿದ್ದರು.ಕೃಷಿ ಇಲಾಖೆಯಿಂದ ಬೆಳೆ ವಿಮೆ ಯೋಜನೆ ಕುರಿತು ಮತ್ತು ಬರ ನಿರ್ವಹಣಾ ಕ್ರಮಗಳ ಕುರಿತು ರೈತರಲ್ಲಿ ಅರಿವು ಮೂಡಿಸಲು ಮತ್ತು ವ್ಯಾಪಕ ಪ್ರಚಾರ ಕೈಗೊಳ್ಳಲು ರೂಪಿಸಿದ್ದ ಕರಪತ್ರ ಹಾಗೂ ಪೊಸ್ಟರ್ ಸಭೆಯಲ್ಲಿ ಕೃಷಿ ಸಚಿವ ಪಿ.ಎಂ. ನರೇಂದ್ರಸ್ವಾಮಿ ಹಾಗೂ ಕೃಷಿ ಇಲಾಖೆ ನಿರ್ದೇಶಕ ಡಾ. ಜಿ.ಟಿ. ಪುತ್ರ, ಸಿಇಓ ಗರಿಮಾ ಪನ್ವಾರ ಬಿಡುಗಡೆ ಮಾಡಿದರು.