ಸಾರಾಂಶ
ಕನ್ನಡಪ್ರಭ ವಾರ್ತೆ ಬ್ಯಾಡಗಿ
ಕೃಷಿ ಅಭಿವೃದ್ಧಿಗೆ ಬ್ಯಾಂಕ್‌ಗಳು ನೀಡುವಂತಹ ಸಾಲವನ್ನು ಸದ್ಭಳಕೆ ಮಾಡಿಕೊಂಡು ದೇಶ ಅಭಿವೃದ್ಧಿ ಪಥದತ್ತ ಸಾಗುವಂತೆ ಮಾಡುವ ಶಕ್ತಿ ಕೃಷಿಕರಿಗಿದೆ. ಆದ್ದರಿಂದ ಕೃಷಿ ವಲಯದ ಆರ್ಥಿಕ ಸುಧಾರಣೆಗೆ ಅಗತ್ಯ ಕ್ರಮಗಳಾಗಬೇಕು. ಇಲ್ಲದಿದ್ದರೇ ದೇಶವು ಇನ್ನಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿದೆ ಎಂದು ಕೆಸಿಸಿ ಬ್ಯಾಂಕ್ ನಿರ್ದೇಶಕ ಚನ್ನಬಸಪ್ಪ ಹುಲ್ಲತ್ತಿ ಅಭಿಪ್ರಾಯಿಸಿದರು.ಪಟ್ಟಣದ ಕೆಸಿಸಿ ಬ್ಯಾಂಕ್ ಶಾಖೆಯಲ್ಲಿ ನಬಾರ್ಡ್ ಬ್ಯಾಂಕ್ ಸಹಕಾರದೊಂದಿಗೆ ಆರ್ಥಿಕ ಸಾಕ್ಷರತೆ ಕ್ಯಾಲೆಂಡರ್ ಬಿಡುಗಡೆ ಹಾಗೂ ಹೊಸಬೆಳಕು ಕಾರ್ಯಕ್ರಮದಡಿ ಕೃಷಿಯೇತರ ಬಳಕೆ ಸಾಲ ಮತ್ತು ಮಾಧ್ಯಮಿಕ ಸಾಲ ಪಡೆದ ಫಲಾನುಭವಿಗಳಿಗೆ ಚೆಕ್ ಹಾಗೂ ಟ್ರ‍್ಯಾಕ್ಟರ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತ ದೇಶದ ಮೂಲ ಅದಾಯವು ಕೃಷಿಯಾಗಿದ್ದು, ಕೃಷಿ ಆಧಾರಿತ ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಮೂಲಕ ಜಿಡಿಪಿಗೆ ಅವಶ್ಯವಿರುವ ಉದ್ಯೋಗ ಸೃಷ್ಟಿ ಮಾಡಬೇಕಿದೆ. ಅತ್ಯಂತ ಸುಭದ್ರ ಸ್ಥಿತಿಯಲ್ಲಿದ್ದ ನಮ್ಮ ಕೃಷಿ ಚಟುವಟಿಕೆಗಳು ಕಳೆದೆರಡು ದಶಕದಿಂದ ಹತ್ತು ಹಲವು ಕಾರಣಕ್ಕೆ ಆರ್ಥಿಕ ಸಂಕಷ್ಟಗಳಿಗೆ ಸಿಲುಕುತ್ತಿದ್ದು, ಇದರಿಂದ ಬ್ಯಾಂಕ್ ನೀಡಿದ ಸಾಲಗಳ ಮರುಪಾವತಿ ಸೇರಿದಂತೆ ಹೊಸ ಸಾಲಸೌಲಭ್ಯಕ್ಕೆ ಅಡ್ಡಿಯುಂಟಾಗುತ್ತಿದೆ ಎಂದರು.ರೈತರ ಆದಾಯದಿಂದಲೇ ಬ್ಯಾಂಕ್‌ಗಳು ನಡೆಯುತ್ತಿವೆ, ಆದರೆ ಪಡೆದಂತಹ ಸಾಲವನ್ನು ಯಾವುದೇ ಕಾರಣಕ್ಕೂ ಮನ್ನಾ ಮಾಡುವಂತೆ ಕೇಳುವಂತಹ ಪರಿಪಾಠಗಳು ನಿಲ್ಲಬೇಕು, ನಿಮ್ಮ ಸಂಕಷ್ಟಕ್ಕೆ ಬ್ಯಾಂಕ್ ಸಹಕರಿಸಬೇಕಾದಲ್ಲಿ ರೈತರ ಆರ್ಥಿಕ ಚಟುವಟಿಕೆಗಳು ಸಮರ್ಪಕವಾಗಿರಬೇಕು, ನಿಮ್ಮ ಸಹಕಾರಕ್ಕೆ ಬ್ಯಾಂಕ್‌ಗಳು ಎದುರು ನೋಡುತ್ತಿವೆ ಎಂದರು.
2024 ರಲ್ಲಿ ₹25 ಕೋಟಿ ಲಾಭದ ಗುರಿ: ಸರ್ಕಾರದ ಯೋಜನೆಯಡಿಯಲ್ಲಿ ರೈತರಿಗೆ ಶೂನ್ಯ ಬಡ್ಡಿ ಸಾಲ ಹಾಗೂ ಮಾಧ್ಯಮಿಕ ಸಾಲವನ್ನು ಶೇ.3 ರಷ್ಟು ಬಡ್ಡಿದರದಲ್ಲಿ ನೀಡಲಾಗುವುದು, ₹69.72 ಲಕ್ಷ ಠೇವಣಿ ಸಂಗ್ರಹಣೆ ಮಾಡಲಾಗಿದ್ದು ₹29.50 ಲಕ್ಷ ಸಾಲ ನೀಡಲಾಗಿದೆ. ಪ್ರಸಕ್ತ ವರ್ಷ ಕೆಸಿಸಿ ಬ್ಯಾಂಕ್ ₹25 ಕೋಟಿ ಲಾಭ ಪಡೆಯುವ ಗುರಿ ಹೊಂದಿದ್ದು ರೇಷ್ಮೆ, ಟ್ರ‍್ಯಾಕ್ಟರ್, ಕುರಿ ಸಾಕಾಣಿಕೆ, ಹೈನುಗಾರಿಕೆ ಇತರರ ಉದ್ದೇಶಗಳಿಗೆ ₹10 ಲಕ್ಷದವರೆಗೂ ಸಾಲ ನೀಡಲಾಗುವುದು ಎಂದರು.ಇದೇ ವೇಳೆ ಕೆಸಿಸಿ ಬ್ಯಾಂಕ್‌ನ ಕ್ಯಾಲೆಂಡರ್ ಮಾಡಲಾಯಿತು, ಟ್ರ್ಯಾಕ್ಟರ್ ಸಾಲ ಪಡೆದ ರೈತರಿಗೆ ವಾಹನ ವಿತರಿಸಲಾಯಿತು. ವೇದಿಕೆಯಲ್ಲಿ ದಾನಪ್ಪ ತೋಟದ, ಶಂಕರಗೌಡ ಪಾಟೀಲ, ಚಿಕ್ಕಪ್ಪ ಛತ್ರದ, ಜಯಪ್ಪ ಎಲಿ, ಕೆಸಿಸಿ ಬ್ಯಾಂಕ್ ಶಾಖಾ ವ್ಯವಸ್ಥಾಪಕ ಬಿ.ಎಸ್. ಮೋಟೆಬೆನ್ನೂರ, ಸಿಡಿಓ ಎಂ.ಎಸ್. ರೇಣುಕಾ, ಗಜಾನನ ಬ್ಯಾಂಕ್ ಮ್ಯಾನೇಜರ್ ನಾಗೇಶ ಬ್ಯಾಡಗಿ ಸೇರಿದಂತೆ ತಾಲೂಕಿನ ವಿಎಸ್‌ಎಸ್ ಬ್ಯಾಂಕ್ ಅಧ್ಯಕ್ಷರು, ಸದಸ್ಯರು ಹಾಗೂ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.