ರಾಷ್ಟ್ರೀಯ ಹೆದ್ದಾರಿ-೭೫ ಜಿಲ್ಲೆಯಲ್ಲೇ ಅತ್ಯಂತ ಅಪಾಯಕಾರಿ ರಸ್ತೆಯಾಗಿ ಗುರುತಿಸಲ್ಪಟ್ಟಿದ್ದು, ಇಲ್ಲಿ ೨೦೪ ಮಾರಣಾಂತಿಕ ಅಪಘಾತಗಳು ಸಂಭವಿಸಿವೆ. ಅಪಘಾತ ಸ್ಥಳಗಳ ಪತ್ತೆ ಮತ್ತು ಸುಧಾರಣೆ, ಹೆದ್ದಾರಿಯಲ್ಲಿ ಅಪಘಾತಗಳು ಮರುಕಳಿಸುತ್ತಿರುವ ೭ ಪ್ರಮುಖ ಸ್ಥಳಗಳನ್ನು ಬ್ಲ್ಯಾಕ್ ಸ್ಪಾಟ್ ಗಳೆಂದು ಗುರುತಿಸಲಾಗಿದೆ. ಆದರೂ ಅಪಘಾತ ಪ್ರಕರಣಗಳನ್ನು ತಡೆಯಲು ಸೂಕ್ತ ಯೋಜನೆ ರೂಪಿಸಬೇಕಿದೆ.
ಕನ್ನಡಪ್ರಭ ವಾರ್ತೆ ಕೋಲಾರಜಿಲ್ಲೆಯಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳನ್ನು ತಡೆಗಟ್ಟಲು ಮತ್ತು ಸಂಚಾರ ವ್ಯವಸ್ಥೆ ಸುಗಮಗೊಳಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅಧಿಕಾರಿಗಳಿಗೆ ಸೂಚಿಸಿದರು.ನಗರದ ಜಿಲ್ಲಾಧಿಕಾರಿ ಕೆಸ್ವಾನ್ ಸಭಾಂಗಣದಲ್ಲಿ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಮಾತನಾಡಿ, ಜಿಲ್ಲೆಯ ರಸ್ತೆ ಸುರಕ್ಷತೆಯ ಕುರಿತು ಕಳವಳ ವ್ಯಕ್ತಪಡಿಸಿದ ಅವರು, ೨೦೨೩ ರಿಂದ ೨೦೨೫ರ ಅವಧಿಯಲ್ಲಿ ಜಿಲ್ಲೆಯಲ್ಲಿ ಒಟ್ಟು ೪,೧೭೩ ಅಪಘಾತಗಳು ಸಂಭವಿಸಿದ್ದು, ಇದರಲ್ಲಿ ೧,೨೭೨ ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದರು. ಹೆದ್ದಾರಿ-೭೫ ರಲ್ಲೇ ಹೆಚ್ಚು ಅಪಘಾತ
ಪ್ರಮುಖವಾಗಿ ರಾಷ್ಟ್ರೀಯ ಹೆದ್ದಾರಿ-೭೫ ಜಿಲ್ಲೆಯಲ್ಲೇ ಅತ್ಯಂತ ಅಪಾಯಕಾರಿ ರಸ್ತೆಯಾಗಿ ಗುರುತಿಸಲ್ಪಟ್ಟಿದ್ದು, ಇಲ್ಲಿ ೨೦೪ ಮಾರಣಾಂತಿಕ ಅಪಘಾತಗಳು ಸಂಭವಿಸಿವೆ. ಅಪಘಾತ ಸ್ಥಳಗಳ ಪತ್ತೆ ಮತ್ತು ಸುಧಾರಣೆ, ಹೆದ್ದಾರಿಯಲ್ಲಿ ಅಪಘಾತಗಳು ಮರುಕಳಿಸುತ್ತಿರುವ ೭ ಪ್ರಮುಖ ಸ್ಥಳಗಳನ್ನು ಬ್ಲ್ಯಾಕ್ ಸ್ಪಾಟ್ ಗಳೆಂದು ಗುರುತಿಸಲಾಗಿದೆ. ಆದರೂ ಅಪಘಾತ ಪ್ರಕರಣಗಳನ್ನು ತಡೆಯಲು ಸೂಕ್ತ ಯೋಜನೆ ರೂಪಿಸಬೇಕು ಎಂದರು.ಅರಾಬಿಕೊತ್ತನೂರು, ಚುಂಚದೇನಹಳ್ಳಿ, ಮದೇರಹಳ್ಳಿ, ಕಾಳಹಸ್ತಿಪುರ, ಅಜ್ಜಪ್ಪನಹಳ್ಳಿ, ಕಾಂತರಾಜ್ ಸರ್ಕಲ್ ಮತ್ತು ಕಪ್ಪಲಮಡಗು ಈ ಸ್ಥಳಗಳಲ್ಲಿ ತಕ್ಷಣವೇ ಎಂಜಿನಿಯರಿಂಗ್ ಸುಧಾರಣೆಗಳನ್ನು ಕೈಗೊಳ್ಳುವಂತೆ ಮತ್ತು ನಾಗಲಾಪುರ ಹಾಗೂ ಅರಾಬಿಕೊತ್ತನೂರು ಭಾಗಗಳಲ್ಲಿ ಬೀದಿ ದೀಪಗಳ ವ್ಯವಸ್ಥೆ ಮಾಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಜಿಲ್ಲಾಧಿಕಾರಿ ತಾಕೀತು ಮಾಡಿದರು. ಎಕ್ಸ್‌ಪ್ರೆಸ್‌ವೇನಲ್ಲಿ ಕ್ಯಾಮೆರಾ
ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇನಲ್ಲಿ ವೇಗ ನಿಯಂತ್ರಣಕ್ಕಾಗಿ ಸ್ಪೀಡ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಭಾರಿ ವಾಹನಗಳಾದ ಲಾರಿ ಟ್ರಕ್‌ಗಳು ತಮ್ಮ ನಿಗದಿತ ಸಮಯದಲ್ಲಿ ಸಂಚಾರ ನಡೆಸಬೇಕು. ನಿಯಮ ಉಲ್ಲಂಘಿಸಿದರು ದಂಡ ವಿಧಿ ಸಂಚಾರ ಕಟ್ಟುನಿಟ್ಟಾಗಿ ನಿ?ಧಿಸಲಾಗಿದೆ, ಆದರೂ ದ್ವಿಚಕ್ರ ವಾಹನಗಳು ಓಡಾಡುತ್ತಿರುವುದು ಕಂಡುಬರುತ್ತಿದೆ. ನಿಯಮ ಉಲ್ಲಂಘನೆ ಮಾಡುವವರಿಗೆ ದಂಡ ವಿಧಿಸಬೇಕು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.ಸಭೆಯಲ್ಲಿ ಕೆ.ಜಿ.ಎಫ್ ಎಸ್‌ಪಿ ಹಿಮಾಂಶು ರಜಪೂತ್, ಕೋಲಾರ ಅಪರ ಪೊಲೀಸ್ ವರಿಷ್ಠಾಧಿಕಾರಿ ಜಗದೀಶ್, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ರಾಮಮೂರ್ತಿ, ಜಿಲ್ಲಾ ಸರ್ಜನ್ ಡಾ.ಜಗದೀಶ್, ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ ವೇಣುಗೋಪಾಲ ರೆಡ್ಡಿ ಇದ್ದರು.