ಸಾರಾಂಶ
ಅಖಿಲ ಭಾರತ ವೀರಶೈವ ಮಹಾಸಭಾ ಗದಗ ಜಿಲ್ಲಾ ಘಟಕದ ಉದ್ದೇಶಿತ ಸಮುದಾಯ ಭವನ ನಿರ್ಮಾಣ ಕಾರ್ಯವನ್ನು ತೀವ್ರಗೊಳಿಸಲು ಸಂಪನ್ಮೂಲಗಳ ಕ್ರೂಢೀಕರಣಕ್ಕೆ ಅಗತ್ಯ ಕ್ರಮ ಜರುಗಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ಶರಣಬಸಪ್ಪ ಗುಡಿಮನಿ ಹೇಳಿದರು.
ಗದಗ: ಅಖಿಲ ಭಾರತ ವೀರಶೈವ ಮಹಾಸಭಾ ಗದಗ ಜಿಲ್ಲಾ ಘಟಕದ ಉದ್ದೇಶಿತ ಸಮುದಾಯ ಭವನ ನಿರ್ಮಾಣ ಕಾರ್ಯವನ್ನು ತೀವ್ರಗೊಳಿಸಲು ಸಂಪನ್ಮೂಲಗಳ ಕ್ರೂಢೀಕರಣಕ್ಕೆ ಅಗತ್ಯ ಕ್ರಮ ಜರುಗಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ಶರಣಬಸಪ್ಪ ಗುಡಿಮನಿ ಹೇಳಿದರು.
ನಗರದ ವೀರಶೈವ ಜನರಲ್ ಲೈಬ್ರರಿಯ ಮಹಾಸಭಾದ ಕಾರ್ಯಾಲಯದಲ್ಲಿ ಜರುಗಿದ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸಮುದಾಯ ಭವನ ನಿರ್ಮಾಣಕ್ಕೆ ಈಗಾಗಲೇ ಮಹಾಸಭಾಕ್ಕೆ, ಚುನಾಯಿತ ಜನಪ್ರತಿನಿಧಿಗಳಿಗೆ ಅನುದಾನದ ವಂತಿಗೆ ನೀಡುವಂತೆ ಮನವಿ ಮಾಡಿಕೊಳ್ಳಲಾಗಿದ್ದು ಜೊತೆಗೆ ದಾನಿಗಳೂ ಉದಾರ ದೇಣಿಗೆ ನೀಡುವಂತೆ ಮನವಿ ಮಾಡಿಕೊಳ್ಳಲಾಗಿದೆ. ಸಮುದಾಯ ಭವನದಲ್ಲಿ ಒಬ್ಬ ದಾನಿಯ ಫೋಟೋಕ್ಕೆ 25 ಸಾವಿರ ರು. ದಂಪತಿ ಫೋಟೋಕ್ಕೆ 40 ಸಾವಿರ ರು. ಕೊಠಡಿಗೆ ಹೆಸರಿಡಲು ಎರಡು ಲಕ್ಷ 50 ಸಾವಿರ ರು.ಗಳನ್ನು ನಿಗದಿ ಮಾಡಲು ಕಾರ್ಯಕಾರಿ ಮಂಡಳಿಯ ಸಭೆಯಲ್ಲಿ ನಿರ್ಣಯಿಸಲಾಗಿದೆ ಎಂದರು.ಅಖಿಲ ಭಾರತ ವೀರಶೈವ ಮಹಾಸಭಾ ಗದಗ ಜಿಲ್ಲಾ ಘಟಕದ ಸರ್ವ ಸದಸ್ಯರ ಸಾಮಾನ್ಯ ಸಭೆಯನ್ನು ನವೆಂಬರ್ ಅಥವಾ ಡಿಸೆಂಬರ್‌ದಲ್ಲಿ ಜರುಗಿಸಲು ಚಿಂತನೆ ನಡೆದಿದ್ದು, ಈ ಕುರಿತು ಮುಂದಿನ ಸಭೆಯಲ್ಲಿ ಅಂತಿಮ ನಿರ್ಣಯ ಕೈಗೊಳ್ಳಲಾಗುವದು ಎಂದರು.ಈ ಸಂದರ್ಭದಲ್ಲಿ ಮಹಾಸಭಾ ಗದಗ ಘಟಕದ ಉಪಾಧ್ಯಕ್ಷೆ ವಿಜಯಲಕ್ಷ್ಮೀ ಮಾನ್ವಿ ಅವರು ರಾಜ್ಯ ಸಮಿತಿಗೆ ನೇಮಕಗೊಂಡ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ಜಯಶ್ರೀ ಉಗಲಾಟ ಅವರು ನೇಮಕಗೊಂಡ ಹಿನ್ನೆಲೆಯಲ್ಲಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಸಭೆಯಲ್ಲಿ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಮಂಡಳಿ ಸದಸ್ಯರು ಪಾಲ್ಗೊಂಡು ಸಲಹೆ ಸೂಚನೆ ನೀಡಿದರು.