ಶಂಕರ ಮಠಗಳಲ್ಲಿ ಅದ್ವೈತ ಅಗತ್ಯ: ರಾಘವೇಶ್ವರ ಶ್ರೀ

| Published : Sep 10 2024, 01:33 AM IST

ಸಾರಾಂಶ

ಜ್ಯೋತಿಷ ಎನ್ನುವುದು ಅದ್ಭುತ ವಿಜ್ಞಾನವನ್ನು ನಮ್ಮ ಪೂರ್ವಜರು ಕಂಡುಕೊಂಡಿದ್ದರು. ಉದಾಹರಣೆಗೆ ತಾಂಬೂಲ ಪ್ರಶ್ನದಿಂದ ಕೂಡಾ ಭವಿಷ್ಯ, ವರ್ತಮಾನಗಳನ್ನು ತಿಳಿಯುವ ಅಪೂರ್ವ ಸಾಧನವಾಗಿತ್ತು ಎಂದು ರಾಘವೇಶ್ವರ ಶ್ರೀಗಳು ಅಭಿಪ್ರಾಯಪಟ್ಟರು.

ಗೋಕರ್ಣ: ಅದ್ವೈತ ಸಾರುವ ಮಠಗಳು ಕೂಡಾ ದ್ವೈತವಾಗಿರಬಾರದು. ವಿದ್ಯಾರಣ್ಯರ ಹೃದಯ ವೈಶಾಲ್ಯ ಎಲ್ಲ ಗುರುಗಳಲ್ಲಿ ಬರಬೇಕಾದ್ದು ಸಮಾಜದ ಹಿತದೃಷ್ಟಿಯಿಂದ ಅಗತ್ಯ ಎಂದು ರಾಘವೇಶ್ವರ ಭಾರತೀ ಸ್ವಾಮೀಜಿ ತಿಳಿಸಿದರು.ಅಶೋಕೆಯ ಗುರುದೃಷ್ಟಿಯಲ್ಲಿ ಚಾತುರ್ಮಾಸ ವ್ರತ ಕೈಗೊಂಡಿರುವ ಶ್ರೀಗಳು 51ನೇ ದಿನವಾದ ಸೋಮವಾರ ವಿದ್ಯಾರಣ್ಯರು ನೀಡಿದ ವೈಭವತಾಮ್ರಶಾಸನದ ಅನಾವರಣ ನೆರವೇರಿಸಿ ಆಶೀರ್ವಚನ ನೀಡಿದರು.ನಮ್ಮದು ಸ್ವತಂತ್ರ ಅಸ್ತಿತ್ವದ, ರಾಜಮಾನ್ಯವಾದ, ರಾಜಪ್ರಭುತ್ವಕ್ಕೆ ಸಮಾನ ಸ್ಥಾನಮಾನ ಹೊಂದಿದ್ದ ಪೀಠ ಎನ್ನುವುದನ್ನು ತಿಳಿದುಕೊಳ್ಳಬೇಕು. ವಿದ್ಯಾರಣ್ಯರು ತೋರಿದ ಭಾವಾದ್ವೈತ ಮೆರೆಯುವುದು ಸಮಾಜದ ಹಿತದೃಷ್ಟಿಯಿಂದ ಅಗತ್ಯ. ಅದು ಶಂಕರರ ಮೂಲಸಂಕಲ್ಪಕ್ಕೆ, ಮೂಲ ಆಶಯಕ್ಕೆ ಅನುಸಾರವಾಗಿದೆ ಎಂದರು.ಈ ಅದ್ವೈತ ಭಾವ ಮುಂದುವರಿಯಬೇಕು. ವಿದ್ಯಾರಣ್ಯರು ಮೆರೆದ ಆದರ್ಶದಂತೆ ಎಲ್ಲ ಶಂಕರ ಪೀಠಗಳು ಏಕ ಮನಸ್ಸಿನಿಂದ ಇರಬೇಕು. ಈ ವೈಭವ ತಾಮ್ರಶಾಸನ ಎರಡೂ ಮಠಗಳ ಮಧ್ಯೆ ಎಂಥ ಅದ್ವೈತ ಇತ್ತು ಎನ್ನುವುದನ್ನು ಬಿಂಬಿಸುತ್ತದೆ. ದಕ್ಷಿಣಾಮ್ನಾಯದ ಪರಿಧಿಯ ಗೋಕರ್ಣ ಮಂಡಲದ ಆಚಾರ್ಯತ್ವವನ್ನು ವಿದ್ಯಾರಣ್ಯರು ಈ ಶಾಸನದ ಮೂಲಕ ಸ್ಥಿರೀಕರಿಸಿದರು. ಇದಾಗಿ 75 ವರ್ಷ ಕಳೆದ ಬಳಿಕ ಇಮ್ಮಡಿ ದೇವರಾಯ ಚಕ್ರವರ್ತಿ ಇದನ್ನು ದೃಢೀಕರಿಸಿದರು ಎಂದರು.ರಘೂತ್ತಮ ಮಠ ಹಾಗೂ ಶೃಂಗೇರಿ ಮಠ ಶಂಕರಾಚಾರ್ಯ ಪರಂಪರೆಗಳು ಎರಡು ಮಠಗಳು. ಗೋಕರ್ಣ ಮಹಾಬಲೇಶ್ವರ ಸಮ್ಮುಖದಲ್ಲಿ ಉಭಯ ಗುರುಗಳ ಸಮಾಯೋಗ ನೆರವೇರುತ್ತದೆ ಎಂದರು.ನಮ್ಮ ಮಠವನ್ನು ಶಂಕರಾಚಾರ್ಯ ಪೀಠವೇ ಅಲ್ಲ ಎಂಬ ಅಪಪ್ರಚಾರವೂ ನಡೆಯಿತು. ಹಾಗಿಲ್ಲದಿದ್ದರೆ ಈ ತಾಮ್ರಶಾಸನ ಹೇಗೆ ನೀಡಲಾಗಿದೆ? ಜತೆಗೆ ಸಿಂಹಾಸನ, ರಾಜಲಾಂಛನಗಳು ಹೇಗೆ ಬರುತ್ತವೆ ಎಂದು ಪ್ರಶ್ನಿಸಿದರು.

ರಘೂತ್ತಮ ಮಠ ಶಾಖಾ ಮಠ ಅಲ್ಲ ಎನ್ನುವುದನ್ನು ಆ ಶಾಸನವೇ ಸಾರುತ್ತದೆ. ಶಾಖಾ ಮಠಕ್ಕೆ ಸಿಂಹಾಸನ, ಕಿರೀಟ, ಮಂಡಲಾಚಾರ್ಯತ್ವವನ್ನು ಹೇಗೆ ನೀಡಲಾಗುತ್ತದೆ. ಇದು ಸ್ವತಂತ್ರ ಮಠ ಎನ್ನುವುದನ್ನು ಸೂರ್ಯಸ್ಪಷ್ಟವಾಗಿ ಶಾಸನ ಹೇಳುತ್ತದೆ ಎಂದು ಪ್ರತಿಪಾದಿಸಿದರು.ಇದಕ್ಕೂ ಮುನ್ನ ಶೃಂಗೇರಿ ಮಠದ 12ನೇ ಪೀಠಾಧಿಪತಿಗಳಾಗಿದ್ದ ವಿದ್ಯಾರಣ್ಯ ಶ್ರೀಪಾದಂಗಳವರು, ನಮ್ಮ ಪೂರ್ವಾಚಾರ್ಯರಾದ 10ನೇ ಪೀಠಾಧಿಪತಿಗಳಾದ ಚಿದ್ಭೋಧಭಾರತೀ ಸ್ವಾಮಿಗಳವರಿಗೆ ನೀಡಿದ್ದ ವೈಭವ ತಾಮ್ರಶಾಸನ ಹಾಗೂ ವಿಜಯ ನಗರದ ಅರಸ ಇಮ್ಮಡಿ ದೇವರಾಯರು ಇದನ್ನು ಸ್ಥಿರೀಕರಿಸಿ ಪ್ರಥಮ ರಾಘವೇಶ್ವರ ಭಾರತೀಸ್ವಾಮಿಗಳವರಿಗೆ ನೀಡಿದ ವೈಭವತಾಮ್ರಶಾಸನದ ಅನಾವರಣವನ್ನು ರಾಘವೇಶ್ವರ ಶ್ರೀಗಳು ನೆರವೇರಿಸಿದರು.

ಕಾಲ ಸರಣಿಯ ಪ್ರವಚನ ಮುಂದುವರಿಸಿದ ಶ್ರೀಗಳು, ಜ್ಯೋತಿಷ ಎನ್ನುವುದು ಅದ್ಭುತ ವಿಜ್ಞಾನವನ್ನು ನಮ್ಮ ಪೂರ್ವಜರು ಕಂಡುಕೊಂಡಿದ್ದರು. ಉದಾಹರಣೆಗೆ ತಾಂಬೂಲ ಪ್ರಶ್ನದಿಂದ ಕೂಡಾ ಭವಿಷ್ಯ, ವರ್ತಮಾನಗಳನ್ನು ತಿಳಿಯುವ ಅಪೂರ್ವ ಸಾಧನವಾಗಿತ್ತು ಎಂದು ಅಭಿಪ್ರಾಯಪಟ್ಟರು.ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಚಾತುಮಾಸ್ಯ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಪಂಡಿತ್, ಕೋಶಾಧ್ಯಕ್ಷ ಸುಧಾರಕ ಬಡಗಣಿ, ವಿವಿವಿ ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ. ಹೆಗಡೆ, ಜಿ.ವಿ. ಹೆಗಡೆ, ದೈವಜ್ಞರಾದ ಮಧು ಶರ್ಮಾ, ಮಿತ್ತೂರು ಕೇಶವ ಭಟ್, ಕಾರ್ಯದರ್ಶಿ ಜಿ.ಕೆ. ಮಧು, ಶ್ರೀಶ ಶಾಸ್ತ್ರಿ, ಅರವಿಂದ ಬಂಗಲಗಲ್ಲು ಮತ್ತಿತರರು ಉಪಸ್ಥಿತರಿದ್ದರು.