ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಕನ್ನಡ ಭಾಷೆ, ಕನ್ನಡಿಗರ ಅಸ್ತಿತ್ವ, ಕನ್ನಡ ಅಸ್ಮಿತೆಗೆ ಧಕ್ಕೆ ತಂದು ಬೆಂಗಳೂರು ನಗರದ ಅಧಿಕಾರವನ್ನು ಕನ್ನಡಿಗರ ಕೈಯಿಂದ ಬಿಡಿಸಿ, ಅನ್ಯರಿಗೆ ಹಸ್ತಾಂತರಿಸಲು ಸಿದ್ಧಪಡಿಸಿ ಸದನದಲ್ಲಿ ಮಂಡಿಸಿರುವ ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ (ಜಿಬಿಎ) ಅನುಷ್ಠಾನಕ್ಕೆ ನಮ್ಮ ವಿರೋಧವಿದೆ. ಇದರ ವಿರುದ್ಧ ಜನಾಂದೋಲನ ರೂಪಿಸುತ್ತೇವೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿದ್ದಾರೆ.ನಗರದ ಭಾರತೀಯ ವಿದ್ಯಾಭವನದಲ್ಲಿ ಸೋಮವಾರ ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ-2024’ ವಿಧೇಯಕದ ಸಾಧಕ-ಬಾಧಕಗಳ ಕುರಿತು ಚರ್ಚಿಸಲು ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡಿಗರ ಹಿತಾಸಕ್ತಿಯ ವಿರುದ್ಧ ಇರುವ ಈ ಬಿಲ್‌ಗೆ ಬಿಜೆಪಿ ಮತ್ತು ಜೆಡಿಎಸ್ ಜೊತೆಗೆ ಕಾಂಗ್ರೆಸ್‌ನವರು ಕೂಡ ವಿರೋಧಿಸುತ್ತಾರೆ ಎಂದರು.
ಸಂಸದರು, ಶಾಸಕರಿಗೆ ಮತದಾನದ ಅಧಿಕಾರ ತೆಗೆಯಲಾಗಿದೆ. ಪಾಲಿಕೆ ಸದಸ್ಯರ ಹಕ್ಕುಗಳನ್ನು ಮೊಟಕುಗೊಳಿಸಲಾಗಿದೆ. ಆದರೆ, ಮುಖ್ಯಮಂತ್ರಿ, ಬೆಂಗಳೂರಿನ ಸಚಿವರೆಲ್ಲರೂ ಪ್ರಾಧಿಕಾರದ ಅಧ್ಯಕ್ಷರು ಮತ್ತು ಮೇಲ್ವಿಚಾರಕರಾಗಿ ಇರಬಹುದು ಎಂದು ಹೇಳಲಾಗಿದೆ. ಇದು ಯಾವ ರೀತಿಯ ಅಧಿಕಾರ ವಿಕೇಂದ್ರೀಕರಣ ಎಂದು ಪ್ರಶ್ನಿಸಿದ ಅವರು, ವಿಧೇಯಕದಲ್ಲಿ ಬದಲಾವಣೆ ಆಗಲೇಬೇಕು ಎಂದು ಆಗ್ರಹಿಸಿದರು.ದಿಲ್ಲಿ, ಹೈದರಾಬಾದ್, ಮುಂಬೈ ಸೇರಿದಂತೆ ಅನೇಕ ನಗರಗಳಲ್ಲಿ ನಗರ ವಿಭಜನೆ ಯೋಜನೆಗಳು ವಿಫಲವಾಗಿರುವ ಕಾರಣ ಬೆಂಗಳೂರು ವಿಭಜನೆ ಬೇಡ. ಆದರೆ, ಬಿಬಿಎಂಪಿಯ ಆಡಳಿತಾತ್ಮಕ ವಿಭಜನೆ ಆಗಲಿ. ವಲಯವಾರು ಉನ್ನತ ಅಧಿಕಾರಿಗಳನ್ನು ನೇಮಿಸಿ ಕಮೀಷನರ್ ಹೊಂದಿರುವ ಅಧಿಕಾರಗಳನ್ನು ಅವರಿಗೆ ಹಂಚಿಕೆ ಮಾಡಲಿ ಎಂದು ಅಶೋಕ್ ಹೇಳಿದರು.
ವ್ಯವಸ್ಥಿತ ಯೋಜನೆಗಳನ್ನು ರೂಪಿಸಲು ಬಿಎಂಟಿಸಿ, ಜಲಮಂಡಳಿ, ಕೊಳೆಗೇರಿ ಅಭಿವೃದ್ಧಿ ಮಂಡಳಿ ಸೇರಿದಂತೆ ಬಿಬಿಎಂಪಿ ಸಂಬಂಧಿಸಿದ ಸಂಸ್ಥೆಗಳು ಬಿಬಿಎಂಪಿ ವ್ಯಾಪ್ತಿಗೆ ತರಲಿ. ಜನರ ಪಾಲ್ಗೊಳ್ಳುವಿಕೆ ಹೆಚ್ಚಿಸಲಿ. ಮೇಯರ್ ಅವಧಿ ಕನಿಷ್ಠ 2.5 ವರ್ಷ ಇರಲಿ ಎನ್ನುವ ಸಲಹೆಗಳನ್ನು ಸಂವಾದದಲ್ಲಿ ಹಾಜರಿದ್ದ ಶಾಸಕ ಡಾ। ಸಿ.ಎನ್.ಅಶ್ವತ್ಥನಾರಾಯಣ ಸೇರಿದಂತೆ ಬಿಜೆಪಿ, ಜೆಡಿಎಸ್‌ನ ಶಾಸಕರು, ಮಾಜಿ ಮೇಯರ್‌ಗಳು, ಮಾಜಿ ಪಾಲಿಕೆ ಸದಸ್ಯರು ನೀಡಿದರು.ನಮ್ಮ ವರದಿ ಕಸದ ಬುಟ್ಟಿಗೆ,
ಬೆಂಗಳೂರಿನ 1 ಭಾಗ ಅನ್ಯರಿಗೆ!ಜಿಬಿಎ ಸ್ವರೂಪದ ಕುರಿತು ಪ್ರಾತ್ಯಕ್ಷಿಕೆ ನೀಡಿದ, ಜಿಬಿಎ ರಚನಾ ಸಮಿತಿ ಸದಸ್ಯ ರವಿಚಂದರ್ ಅವರು, ನಾವು ನೀಡಿದ ಮೂಲ ವರದಿಯನ್ನು ಡಸ್ಟ್‌ಬಿನ್‌ಗೆ ಹಾಕಲಾಗಿದೆ. ಸರ್ಕಾರ ಸದನದಲ್ಲಿ ಮಂಡಿಸಿರುವ ವರದಿಯನ್ನು ಗಮನಿಸಿದರೆ ಶೇ.20ರಷ್ಟು ಮಾತ್ರ ನಾವು ನೀಡಿರುವ ಅಂಶ ಉಳಿದುಕೊಂಡಿದೆ. ಬೆಂಗಳೂರನ್ನು 5 ಭಾಗ ಮಾಡಿದರೆ, ಅದರಲ್ಲಿ ಒಂದು ಭಾಗ ಕನ್ನಡಿಗರ ಕೈತಪ್ಪಲಿದೆ. ಆದರೆ, ರಾಜಕೀಯ ವಿಚಾರಗಳಿಗೆ ನಾನು ಟಿಪ್ಪಣಿ ಮಾಡುವುದಿಲ್ಲ ಎಂದರು.ಶಾಸಕ ಮುನಿರತ್ನ ಕಿಡಿ
ಸರ್ಕಾರ ಡಸ್ಟ್‌ಬಿನ್ ಹಾಕಿರುವ ವರದಿ ಕುರಿತು ನಾವು ಚರ್ಚೆ ಮಾಡಬೇಕಾ ಎಂದು ಇದೇ ವೇಳೆ ಶಾಸಕ ಮುನಿರತ್ನ ಅಸಮಾಧಾನ ವ್ಯಕ್ತಪಡಿಸಿದರು.ಬೆಂಗಳೂರಿನಲ್ಲಿ ₹10 ಸಾವಿರ ಕೋಟಿ ಆದಾಯ ಸಂಗ್ರಹಿಸಲು ಅವಕಾಶಗಳಿವೆ. ಬಿಬಿಎಂಪಿ ಚುನಾವಣೆ ನಡೆದು ನಾಲ್ಕು ವರ್ಷಗಳಾಗಿವೆ. ಇಂತಹ ಅಗತ್ಯ ವಿಷಯಗಳನ್ನು ಬಿಟ್ಟು ₹12 ಸಾವಿರ ಕೋಟಿ ವೆಚ್ಚದ ಸುರಂಗ ಮಾರ್ಗ, ಗ್ರೇಟರ್ ಬೆಂಗಳೂರು ಮಾಡಲು ಹೊರಟಿರುವುದು ಏಕೆ ಎಂದು ಪ್ರಶ್ನಿಸಿದರು.ಜನಾಂದೋಲನಕ್ಕೆ ತೇಜಸ್ವಿ ಸೂರ್ಯ ಕರೆ
ಜಿಬಿಎ ವಿರುದ್ಧ ನಾಗರಿಕ ಸಂಘಟನೆಗಳ ಮೂಲಕ ಸರ್ಕಾರದ ವಿರುದ್ಧ ಜನಾಂದೋಲನ ರೂಪಿಸಬೇಕು. ನಗರದ ಅಭಿವೃದ್ಧಿಗೆ ಪೂರಕವಲ್ಲದ ಬಿಲ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಚುನಾವಣೆ ಮುಂದೂಡಲು ಮಾಡಿರುವ ಪ್ಲಾನ್ ಇದು ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದರು.ಬಿಬಿಎಂಪಿಯನ್ನು ಆರ್ಥಿಕವಾಗಿ ಬಲಗೊಳಿಸಿವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಮಾತನಾಡಿ, ಬಿಬಿಎಂಪಿ ಬಜೆಟ್‌ನ ₹10,000 ಕೋಟಿ ಪೈಕಿ, ಸರ್ಕಾರವೇ ₹7,000 ಕೋಟಿ ನೀಡುತ್ತದೆ. ನಗರದ ಅಭಿವೃದ್ಧಿಗೆ ಆದಾಯ ಅತಿಮುಖ್ಯ. ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಆಗಬೇಕು. ದೇಶದ ಬೇರೆ ನಗರದಲ್ಲಿ ವಿಫಲವಾಗಿರುವ ನಗರ ವಿಭಜನೆ ಯೋಜನೆಯನ್ನು ಕೈ ಬಿಡಬೇಕು ಎಂದರು.ಯಾರೋ ತಲೆ ಕೆಟ್ಟವರು ಬೆಂಗಳೂರು ವಿಭಜನೆ ಮಾಡಿ ಹೊಸ ಹೆಸರು ನೀಡುವ ಸಲಹೆ ನೀಡಿದ್ದಾರೆ. ಆದರೆ, ಇದರಿಂದ ಕನ್ನಡತನಕ್ಕೆ ಧಕ್ಕೆ ಆಗುತ್ತದೆ. ಬೆಂಗಳೂರು ಕನ್ನಡಿಗರಿಗೆ ಉಳಿಯಬೇಕು. ಕನ್ನಡಿಗರೇ ಮೇಯರ್ ಆಗಬೇಕು. ಅದಕ್ಕಾಗಿ ಜನಾಂದೋಲನ ರೂಪಿಸುತ್ತೇವೆ.
ಆರ್.ಅಶೋಕ್, ವಿಧಾನಸಭೆ ವಿರೋಧ ಪಕ್ಷದ ನಾಯಕ.