ಸಾರಾಂಶ
ಧಾರವಾಡ: ಪ್ರಪಂಚದ ಬಹುತೇಕ ಧರ್ಮಗಳ ಸಾರ ಮಾನವೀಯತೆಯೇ ಶ್ರೇಷ್ಠ ಎಂದು ಸಾರಿವೆ. ಆದರೆ, ಇಂದು ಮನುಷ್ಯರು ಮಾನವೀಯ ಮೌಲ್ಯಗಳಿಂದ ವಿಮುಖರಾಗುತ್ತಿದ್ದು, ಮಾನವೀಯ ಮೌಲ್ಯಗಳ ಪುನರುತ್ಥಾನದ ಅಗತ್ಯವಿದೆ ಎಂದು ಧಾರವಾಡ ಹೈಕೋರ್ಟ್ ನ್ಯಾಯಮೂರ್ತಿ ವಿ.ಶ್ರೀಶಾನಂದ ಹೇಳಿದರು.
ಕರ್ನಾಟಕ ಥಿಂಕರ್ಸ್ ಫೋರಂ ಹಾಗೂ ಸಮೃದ್ಧ ಕರ್ನಾಟಕ ಅಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ಇಲ್ಲಿಯ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಗುರುವಾರ ಸಾಧಕರಿಗೆ ಸನ್ಮಾನ ಮತ್ತು ವಿಶೇಷ ಉಪನ್ಯಾಸ ಉದ್ಘಾಟಿಸಿದ ಅವರು, ಅಪಘಾತದ ಗಾಯಾಳು ಆಸ್ಪತ್ರೆಗೆ ಸೇರಿಸುವ ಬದಲು ಮೊಬೈಲ್ ನಲ್ಲಿ ಚಿತ್ರೀಕರಣ ಮಾಡುವುದು, ಶಾಲಾ ಶಿಕ್ಷಕಿ 13 ವರ್ಷದ ಬಾಲಕನ ಜತೆ ಮದುವೆ ಆಗುವುದು, ಆಸ್ತಿಗೆ ತಂದೆ-ತಾಯಿ ಮೇಲೆ ಹಲ್ಲೆ ಮಾಡುವ ಮಕ್ಕಳಿರುವ ಇಂದಿನ ಸಮಾಜದಲ್ಲಿ ಮಾನವೀಯ ಮೌಲ್ಯ ಹುಡುಕುವಂತ ಸ್ಥಿತಿ ಇದೆ ಎಂದು ಬೇಸರ ವ್ಯಕ್ತಪಡಿಸಿದರು.ಸಾಮಾಜಿಕ ಪ್ರಜ್ಞೆ ಬೆಳೆಸುವಲ್ಲಿ ನಮ್ಮ ನೈತಿಕ ಶಿಕ್ಷಣ ಸೋಲುತ್ತಿದೆ. ಹೆಣ್ಣು ಭ್ರೂಣ ಹತ್ಯೆ ಕಾನೂನು ಮಾಡಿದರೂ ನಿಂತಿಲ್ಲ. ಇದುವೇ ಲಿಂಗಾನುಪಾತ ಮತ್ತು ಮದುವೆಗೆ ಹೆಣ್ಣು ಸಿಗದಿರುವುದೇ ಕಾರಣ. ಅಲ್ಲದೇ, ಮನುಷ್ಯ ಎನಿಸಿಕೊಂಡು ನಾಗರಿಕರು ಪ್ರಾಣಿಗಿಂತಲೂ ಕಡೆಯಾಗಿ ವರ್ತಿಸುವುದು ಸಲ್ಲ ಎಂದು ಹೇಳಿದರು.
ಮಾನವೀಯ ಮೌಲ್ಯಗಳು ಸತ್ತಿಲ್ಲ. ಆದರೆ, ಸಮಾಜದಿಂದ ನಿಧಾನವಾಗಿ ಮರೆ ಆಗುತ್ತಿವೆ. ಭಗವಂತ ನಮಗೆಲ್ಲರಿಗೆ ಬದುಕಲು ಎರಡನೇ ಅವಕಾಶ ನೀಡಿದ್ದು, ಕೋವಿಡ್ ನಂತರವೂ ಮನುಷ್ಯ ಬುದ್ಧಿ ಕಲಿಯದಿದ್ದರೇ, ಮತ್ತೊಂದು ಕೋವಿಡ್ ಬಂದರೂ ಆಶ್ಚರ್ಯವಿಲ್ಲ ಎಂದು ಎಚ್ಚರಿಸಿದ ಅವರು, ಸಮಾಜದಲ್ಲಿ ಸಂಘರ್ಷಗಳು ಉಂಟಾದಾಗ, ಮಾನವೀಯ ಮೌಲ್ಯಗಳು ಮರೆಯಾದಾಗ ಬುದ್ಧ, ಬಸವ, ಅಂಬೇಡ್ಕರ್ ಹೀಗೆ ಅನೇಕ ಮಹಾಪುರುಷರು ಅವತರಿಸುವುದರ ಮೂಲಕ ಸಮಾಜದ ಜನರಲ್ಲಿ ಮಾನವೀಯ ಮೌಲ್ಯಗಳು ಬಿತ್ತುವ ಕೆಲಸ ಮಾಡಿದರು ಎಂದರು.ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಥಿಂಕರ್ಸ್ ಫೋರಂ ಅಧ್ಯಕ್ಷ ಪಿ.ಎಚ್. ನೀರಲಕೇರಿ, ಮನುಷ್ಯ ತನ್ನತನ ಹಾಗೂ ಮಾನವೀಯ ಮೌಲ್ಯಗಳು ಮರೆತು ಬದುಕುವ ಸಂದಿಗ್ಧ ಪರಿಸ್ಥಿತಿಯಲ್ಲಿ ಇದ್ದಾನೆ. ಯುವ ಜನರಲ್ಲಿ ಈ ಮಾನವೀಯ ಮೌಲ್ಯಗಳು ಬಿತ್ತಲು ಕಾರ್ಯಕ್ರಮ ಏರ್ಪಡಿಸಿದ್ದಾಗಿ ತಿಳಿಸಿದರು.
ಸಾಹಿತಿ ಡಾ.ಸಂಗಮನಾಥ ಲೋಕಾಪೂರ, ನ್ಯಾಯವಾದಿ ಪ್ರಫುಲ್ಲಾ ನಾಯಕ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅಕ್ಷರ ತಾಯಿ ಲೂಸಿ ಸಾಲ್ಡಾನ್, ಇಮಾಮಸಾಬ್ ವಲ್ಲೆಪ್ಪನರವರ, ಪಾರ್ವತೆವ್ವ ಹೊಂಗಲ, ಜಾನಪದ ಕರ್ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ. ಪ್ರಭು ಕುಂದರಗಿ, ಡಾ.ರಾಮು ಮೂಲಗಿ ಅವರನ್ನು ಸನ್ಮಾನಿಸಲಾಯಿತು.ಉಪ್ಪಿನ ಬೆಟಗೇರಿ ಮೂರಸಾವಿರ ಮಠದ ವಿರೂಪಾಕ್ಷ ಸ್ವಾಮೀಜಿ ಸಾನ್ನಿಧ್ಯ ವಹಿಸಿದರು. ಜಿಲ್ಲಾ ನ್ಯಾಯಾಧೀಶರಾದ ರಮಾ, ಪೂರ್ಣಿಮಾ ಪೈ, ಗಿರೀಶ ಆರ್.ಡಿ, ಪಿ.ಎಂ.ದೊಡ್ಡಮನಿ, ರಾಜೇಶ್ವರಿ ನೀರಲಕೇರಿ, ಬಸವಪ್ರಭು ಹೊಸಕೇರಿ ಇದ್ದರು. ಸಮೃದ್ಧ ಕರ್ನಾಟಕ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷ ಸಿದ್ದಣ್ಣ ಕಂಬಾರ ಸ್ವಾಗತಿಸಿದರು. ಪ್ರಮೀಳಾ ಜಕ್ಕಣ್ಣವರ ನಿರೂಪಿಸಿದರು.