ಸಾರಾಂಶ
ಬಳ್ಳಾರಿ: ಹೋಟೆಲ್ ಮ್ಯಾನೇಜ್‍ಮೆಂಟ್ ವಲಯದಲ್ಲಿ ತೊಡಗಿಸಿಕೊಳ್ಳುವವರಿಗೆ ತರಬೇತಿ ಅವಶ್ಯವಾಗಿದ್ದು, ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ಹೋಟೆಲ್ ಮ್ಯಾನೇಜ್‍ಮೆಂಟ್ ತರಬೇತಿಯು ಅಭ್ಯರ್ಥಿಗಳಿಗೆ ಉಪಯೋಗವಾಗಲಿದೆ ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ ಕೌಶಲ್ಯಾಬಿವೃದ್ಧಿ ಇಲಾಖೆ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಆಶ್ರಯದಲ್ಲಿ ಬಳ್ಳಾರಿ ಚೇಂಬರ್ ಕೌಶಲ್ಯಾಭಿವೃದ್ಧಿ ಕೇಂದ್ರದಲ್ಲಿ ಹಮ್ಮಿಕೊಂಡಿರುವ 45 ದಿನಗಳ ಹೋಟೆಲ್ ಮ್ಯಾನೇಜ್‍ಮೆಂಟ್ ತರಬೇತಿಗೆ ಇತ್ತೀಚೆಗೆ ಚಾಲನೆ ನೀಡಿ ಮಾತನಾಡಿದರು.ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು ಅತ್ಯಲ್ಪಾವಧಿಯಲ್ಲಿ ಅಚ್ಚುಕಟ್ಟಾಗಿ ತರಬೇತಿಗೆ ಅಗತ್ಯವಾದ ಕಿಚನ್, ರೆಸ್ಟೋರೆಂಟ್, ಬೆಡ್, ಹೌಸ್ ಕೀಪಿಂಗ್, ಕಂಪ್ಯೂಟರ್ ಬಿಲ್ಲಿಂಗ್ ವ್ಯವಸ್ಥೆ ತರಬೇತಿಗೆ ಸ್ಟಾರ್ ಹೋಟೆಲ್ ಮಾದರಿಯಲ್ಲಿ ಎಲ್ಲವನ್ನೂ ಕೌಶಲ್ಯ ಕೇಂದ್ರದಲ್ಲಿ ಕಲ್ಪಿಸಿರುವುದು ತರಬೇತುದಾರರಿಗೆ ಅನುಕೂಲವಾಗಲಿದೆ ಎಂದರು.
ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ ಮಾತನಾಡಿ, ಯುವಪೀಳಿಗೆಯು ಪದವಿಯ ನಂತರ, ಕೌಶಲ್ಯದ ಕೊರತೆಯ ಕಾರಣ ಸೂಕ್ತ ಉದ್ಯೋಗಗಳು, ಸೂಕ್ತವಾದ ವೇತನ ಸಿಗದೇ ಪರದಾಡುತ್ತಿದ್ದಾರೆ. ಅನೇಕ ಯುವಕರಿಗೆ ಹೋಟೆಲ್ ಮ್ಯಾನೇಜ್‍ಮೆಂಟ್ ತರಬೇತಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಅನುಕೂಲವಾಗಲಿದೆ ಎಂದರು.ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಯಶವಂತರಾಜ್ ನಾಗಿರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಬಳ್ಳಾರಿ ಚೇಂಬರ್ಸ್ ಕೌಶಲ್ಯಾಭಿವೃದ್ಧಿ ಕೇಂದ್ರದಲ್ಲಿ ಸಿಗುವ ಹೋಟೆಲ್ ಮ್ಯಾನೇಜ್‍ಮೆಂಟ್ ತರಬೇತಿಯು ಗುಣಮಟ್ಟದಿಂದ ಕೂಡಿದೆ. ಇಲ್ಲಿ ತರಬೇತಿ ಪಡೆದವರಿಗೆ ತ್ವರಿತವಾಗಿ ಉದ್ಯೋಗ ಸಿಗಲಿದೆ ಎಂದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಜಂಟಿ ಕಾರ್ಯದರ್ಶಿ ಡಾ. ಮರ್ಚೇಡ್ ಮಲ್ಲಿಕಾರ್ಜುನ ಗೌಡ ಮಾತನಾಡಿ, ಹೋಟೆಲ್ ಮ್ಯಾನೇಜ್‍ಮೆಂಟ್ ಕೌಶಲ್ಯಾಭಿವೃದ್ಧಿ ತರಬೇತಿ ಕುರಿತು ವೃತ್ತಿಯ ಅರ್ಹತೆಗಳು ಮತ್ತು ಅಗತ್ಯತೆಗಳು, ನೈಪುಣ್ಯತೆ, ಶಿಸ್ತು- ಸಂಯಮಗಳ ಕುರಿತು ತಿಳಿಸಿದರು.ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಗೌರವಾಧ್ಯಕ್ಷ ಸಿ. ಶ್ರೀನಿವಾಸ್, ಜಿಲ್ಲಾ ಉದ್ಯೋಗಾಧಿಕಾರಿ ಹಾಗೂ ಕೌಶಲ್ಯಾಭಿವೃದ್ಧಿ ಅಧಿಕಾರಿ ಪಿ.ಎಸ್. ಹಟ್ಟಪ್ಪ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಉಪಾಧ್ಯಕ್ಷ ಎ. ಮಂಜುನಾಥ್, ಎಸ್. ದೊಡ್ಡನಗೌಡ, ಸೊಂತಾ ಗಿರಿಧರ್, ಜಂಟಿ ಕಾರ್ಯದರ್ಶಿ ವಿ. ರಾಮಚಂದ್ರ, ಕೌಶಲ್ಯಾಭಿವೃದ್ಧಿ ಕೇಂದ್ರದ ಚೇರ್‍ಮನ್ ನಾಗಳ್ಳಿ ರಮೇಶ್, ಕಮಿಟಿ ಚೇರ್‍ಮನ್ ಟಿ. ಶ್ರೀನಿವಾಸರಾವ್ ಉಪಸ್ಥಿತರಿದ್ದರು. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಬಿ. ಮಹಾರುದ್ರಗೌಡ ಹಾಗೂ ಗೌರವ ಕಾರ್ಯದರ್ಶಿ ಕೆ.ಸಿ. ಸುರೇಶಬಾಬು ಕಾರ್ಯಕ್ರಮ ನಿರ್ವಹಿಸಿದರು.