ಪಠ್ಯದಲ್ಲಿ ಸಹಕಾರ ವಿಷಯ ಸೇರ್ಪಡೆ ಅಗತ್ಯ: ಮಸನಾಯಕ

| Published : Sep 05 2025, 01:00 AM IST

ಸಾರಾಂಶ

ಶಾಲಾ-ಕಾಲೇಜು ಪಠ್ಯದಲ್ಲಿ ಸಹಕಾರ ವಿಷಯ ಸೇರ್ಪಡೆ ಹಾಗೂ ಸಹಕಾರ ವಿಶ್ವವಿದ್ಯಾಲಯಗಳ ಸ್ಥಾಪನೆಯಿಂದ ಸಹಕಾರಿ ವ್ಯವಸ್ಥೆ ಸದೃಢಗೊಳ್ಳಲು ಅನುಕೂಲವಾಗುತ್ತದೆ ಎಂದು ಪಪೂ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿದ್ದಲಿಂಗ ಬಂಡು ಮಸನಾಯಕ ಹೇಳಿದರು.

ಗದಗ: ಶಾಲಾ-ಕಾಲೇಜು ಪಠ್ಯದಲ್ಲಿ ಸಹಕಾರ ವಿಷಯ ಸೇರ್ಪಡೆ ಹಾಗೂ ಸಹಕಾರ ವಿಶ್ವವಿದ್ಯಾಲಯಗಳ ಸ್ಥಾಪನೆಯಿಂದ ಸಹಕಾರಿ ವ್ಯವಸ್ಥೆ ಸದೃಢಗೊಳ್ಳಲು ಅನುಕೂಲವಾಗುತ್ತದೆ ಎಂದು ಪಪೂ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿದ್ದಲಿಂಗ ಬಂಡು ಮಸನಾಯಕ ಹೇಳಿದರು.

ನಗರದ ಜಗದ್ಗುರು ತೋಂಟದಾರ್ಯ ಮಹಾವಿದ್ಯಾಲಯದ ಆಡಿಟೋರಿಯಂ ಹಾಲ್‌ದಲ್ಲಿ ಸಹಕಾರ ಇಲಾಖೆ, ರಾಜ್ಯ ಸಹಕಾರ ಮಹಾಮಂಡಳ ನಿ. ಬೆಂಗಳೂರು, ಜಿಲ್ಲಾ ಸಹಕಾರ ಯೂನಿಯನ್ ನಿ, ಜ. ತೋಂಟದಾರ್ಯ ಮಹಾವಿದ್ಯಾಲಯ ಸಹಯೋಗದೊಂದಿಗೆ ಆಯ್ದ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ನಡೆದ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆ ಹಾಗೂ ಚರ್ಚಾ ಸ್ಪರ್ಧೆಯ ಪ್ರಶಸ್ತಿ ಪತ್ರ ವಿತರಣಾ ಸಮಾರಂಭದ ಉದ್ಘಾಟಿಸಿ ಅವರು ಮಾತನಾಡಿದರು.

ಸಹಕಾರ ಕ್ಷೇತ್ರದ ಅಭಿವೃದ್ಧಿ ವಿಚಾರವು ಬಂದಾಗಲೆಲ್ಲ ಯುವಕರ ಪಾತ್ರ ಬಹಳ ಮುಖ್ಯ ಎನ್ನುವುದು ಸ್ವಾತಂತ್ರ್ಯ ಹೋರಾಟದಲ್ಲೂ ನೋಡಬಹುದು. ಅದೇ ರೀತಿ ಈ ಅಭಿವೃದ್ಧಿಗೆ ಯುವಜನರು ಕಾರ್ಯೊನ್ಮುಖರಾಗಬೇಕು ಎಂದರು.

ಜಿಲ್ಲಾ ಸಹಕಾರ ಯೂನಿಯನ್‌ ನಿರ್ದೇಶಕ ಎಸ್.ಎಸ್. ಪಟ್ಟಣಶೆಟ್ಟಿ ಮಾತನಾಡಿ, ವಿಶೇಷವಾಗಿ ಕೇಂದ್ರ ಸರ್ಕಾರವು ಸಹಕಾರ ಸಚಿವಾಲಯ ಪ್ರಾರಂಭ ಮಾಡುವುದರ ಜೊತೆಗೆ ವಿಶಿಷ್ಟ ಯೋಜನೆಗಳನ್ನು ಹಾಕಿಕೊಂಡು ಅದಕ್ಕನುಗುಣವಾಗಿ ಹಣ ಬಿಡುಗಡೆ ಮಾಡಿ ಈ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದೆ ಹಾಗೂ ರಾಜ್ಯ ಸರ್ಕಾರದ ಹಲವಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಯೋಜನೆಗಳನ್ನು ಪ್ರಕಟಿಸಿದ್ದು ಇದರಿಂದ ಸಹಕಾರ ವಲಯವು ಅಭಿವೃದ್ಧಿಯತ್ತ ಸಾಗಲು ಯುವಕರ ಪಾತ್ರ ಬಹಳ ಪ್ರಮುಖ. ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿ ವಹಿಸಿ ಸಹಕಾರ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದರು.ಜ. ತೋಂಟದಾರ್ಯ ಮಹಾವಿದ್ಯಾಲಯದ ಪ್ರಾಂಶುಪಾಲ ಪಿ.ಜಿ. ಪಾಟೀಲ ಮಾತನಾಡಿ, ಸಹಕಾರ ಎಂಬ ಪದವು ಎಲ್ಲರ ನರನಾಡಿಯಲ್ಲಿ ಒಳಗೊಂಡಿರುವ ಪದವಾಗಿದ್ದು ಕಣಗಿನಹಾಳದಲ್ಲಿ ಹುಟ್ಟಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಇಡೀ ಏಷ್ಯಾ ಖಂಡದಲ್ಲಿ ಪ್ರಥಮ ಸಹಕಾರ ಸಂಘ ಎಂಬ ಹೆಗ್ಗಳಿಕೆ ಪಾತ್ರವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಹಕಾರ ಯೂನಿಯನ್‌ ವೈ.ಎಫ್. ಪಾಟೀಲ ಮಾತನಾಡಿದರು.

ಈ ವೇಳೆ ಪ್ರಬಂಧ ಹಾಗೂ ಚರ್ಚಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.

ಸಹಕಾರ ಸಂಘಗಳ ಉಪನಿಬಂಧಕಿ ಎಸ್.ಎಸ್. ಕಬಾಡೆ, ಪುಷ್ಪಾ ಕೆ. ಕಡಿವಾಳರ , ಪ್ರಶಾಂತ ಮುಧೋಳ, ಎಂ.ಸಿ. ಉಪ್ಪಿನ, ಎಂ.ಬಿ. ಮಡಿವಾಳರ, ಡಿ.ಆರ್. ವೆಂಕಟರಾಮ, ಬಸವರಾಜ ನಾಯಕವಾಡಿ ಸೇರಿದಂತೆ ಇತರರು ಇದ್ದರು. ಕಾವೇರಿ ಹೂಗಾರ ಹಾಗೂ ಶಿವಗಂಗಾ ಚವಡಿ ಪ್ರಾರ್ಥಿಸಿದರು. ಚಂದ್ರಶೇಖರ ಎಸ್. ಕರಿಯಪ್ಪನವರ ಸ್ವಾಗತಿಸಿ, ನಿರೂಪಿಸಿದರು. ರಶೀದಾಬಾನು ಸಿ. ಯಲಿಗಾರ ವಂದಿಸಿದರು.