ಕನ್ನಡಪ್ರಭ ವಾರ್ತೆ ಹೊಸದುರ್ಗ
ತಾಲೂಕಿನ ಇತಿಹಾಸ ಪ್ರಸಿದ್ಧ ನೀರಗುಂದ ಗ್ರಾಮದ ಶ್ರೀ ಯಳಗಂಧೇಶ್ವರಿದೇವಿ ಮಹಾರಥೋತ್ಸವವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಶುಕ್ರವಾರ ಅದ್ಧೂರಿಯಾಗಿ ಜರುಗಿತು.ರಥೋತ್ಸವದ ಅಂಗವಾಗಿ ದೇಗುಲವನ್ನು ಹಸಿರು ತಳಿರು ತೋರಣ, ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಕಳೆದ ಸೋಮವಾರದಿಂದಲೂ ಮೀಸಲು ಸೇವೆ, ಪರೇವು ಸೇವೆ, ನೂರೊಂದು ಎಡೆಸೇವೆ, ಮಧುವಣಿಗೆ ಶಾಸ್ತ್ರ, ದೇವಾಂಗ, ಉಪವೀರ, ಲಿಂಗಾಯತ, ಗೊಲ್ಲರು, ಮಡಿವಾಳ, ಕುರುಬ, ಭೋವಿ, ಅಕ್ಕಸಾಲಿಗ, ಕೊರಮ ಸಮಾಜದವರಿಂದ ಬಾನೋತ್ಸವ, ಬೇವಿನ ಸಿೇರೆ ಮತ್ತು ಕಳಶೋತ್ಸವ ಕಾರ್ಯಕ್ರಮ ಗ್ರಾಮದ ಎಲ್ಲಾ ಜನಾಂಗದವರ ಸಾಮರಸ್ಯದೊಂದಿಗೆ ಶ್ರದ್ಧಾಭಕ್ತಿಯಿಂದ ನಡೆದವು.
ಗುರುವಾರ ರಾತ್ರಿ ಗ್ರಾಮದ ಕಾಲಭೈರವೇಶ್ವರ ಸ್ವಾಮಿ, ಹನುಮಂತ ದೇವರು ಹಾಗೂ ಯಳಗಂಧೇಶ್ವರಿದೇವಿಯ ಹೂವಿನ ಉತ್ಸವದ ಭವ್ಯ ಮೆರವಣಿಗೆ ಗ್ರಾಮದ ರಾಜಬೀದಿಯಲ್ಲಿ ಅದ್ಧೂರಿಯಾಗಿ ಜರುಗಿತು.ಶುಕ್ರವಾರ ದೇವಾಲಯದ ಮುಂಭಾಗದಲ್ಲಿ ಇರುವ ರಥಬೀದಿಯಲ್ಲಿ ನಿಲ್ಲಿಸಲಾಗಿದ್ದ ತೇರಿನಲ್ಲಿ ಹೂಗಳಿಂದ ಶೃಂಗಾರಗೊಳಿಸಿದ್ದ ದೇವಿಯನ್ನು ವಿವಿಧ ವಾದ್ಯಮೇಳದೊಂದಿಗೆ ಮೆರವಣಿಗೆಯಲ್ಲಿ ಕರೆತಂದು ಪ್ರತಿಷ್ಠಾಪಿಸಿ ಭಕ್ತರು ತೇರನ್ನು ದೇವಸ್ಥಾನದ ಆವರಣದಿಂದ ಐತಿಹಾಸಿಕ ಶ್ರೀ ಸಿದ್ದೇಶ್ವರ ದೇಗುಲದವರೆಗೂ ಎಳೆದು ಅಲ್ಲಿ ಮಹಾಮಂಗಳಾರತಿ ಆದ ನಂತರ ಅಲ್ಲಿಂದ ಪುನಃ ಮೂಲಸ್ಥಾನಕ್ಕೆ ಎಳೆ ತರಲಾಯಿತು.
ಭಕ್ತರು ತೇರಿಗೆ ಬಾಳೆಹಣ್ಣು ಎಸೆದು ತಮ್ಮ ಇಷ್ಟಾರ್ಥ ಈಡೇರಲೆಂದು ಪ್ರಾರ್ಥಿಸಿದರು. ರಥೋತ್ಸವದಲ್ಲಿ ಯುವತಿಯರ ಮಳ್ಳಾರಥಿ ಉತ್ಸವ, ಗುಂಡಿನ ಚಾಟಿ ಪವಾಡ, ಸೋಮದೇವರ ಕುಣಿತ, ವೀರಗಾಸೆ, ಉರುಮೆ, ತಮಟೆ ವಾದ್ಯಗಳು ಗಮನ ಸೆಳೆದವು. ಸಹಸ್ರಾರು ಭಕ್ತರು ಆಗಮಿಸಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ರಥೋತ್ಸವದ ನಂತರ ಪಾನಕ ಬಂಡಿ, ಪಂಚ ಪಲ್ಲಾರ, ಬೇವಿನ ಸೇರಿ ಹಾಗೂ ಗಟೋತ್ಸವ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆದವು. ಶನಿವಾರ ಬೆಳಿಗ್ಗೆ ಹಣ್ಣಿನರಾಶಿ ಪರಿಷೆ ನಡೆಯಲಿದೆ.