ಶನಿವಾರಸಂತೆ: ಸಮಿಪದ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ನೀರುಗುಂದ ಗ್ರಾಮದ ಹೇಮಾವತಿ ನದಿ ಹಿನ್ನೀರಿನಲ್ಲಿ ಮೀನು ಹಿಡಿಯಲು ತೆರಳಿದ ಸ್ಥಳೀಯ ಗ್ರಾಮದ ಇಬ್ಬರು ನಾಪತ್ತೆಯಾಗಿರುವ ಘಟನೆ ಶುಕ್ರವಾರ ನಡೆದಿದೆ.

ಶನಿವಾರಸಂತೆ: ಸಮಿಪದ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ನೀರುಗುಂದ ಗ್ರಾಮದ ಹೇಮಾವತಿ ನದಿ ಹಿನ್ನೀರಿನಲ್ಲಿ ಮೀನು ಹಿಡಿಯಲು ತೆರಳಿದ ಸ್ಥಳೀಯ ಗ್ರಾಮದ ಇಬ್ಬರು ನಾಪತ್ತೆಯಾಗಿರುವ ಘಟನೆ ಶುಕ್ರವಾರ ನಡೆದಿದೆ. ವಿವರ: ನೀರುಗುಂದ ಗ್ರಾಮದ ನಿವಾಸಿಗಳಾದ ಚನ್ನವೀರಯ್ಯ ಅವರ ಪುತ್ರ ಶಿವರಾಜ್ (೫೧) ಮತ್ತು ಬಸವರಾಜು ಅವರ ಪುತ್ರ ನಾಗರಾಜು (೪೫) ಇಬ್ಬರು ಗುರುವಾರ ರಾತ್ರಿ ವೇಳೆಯಲ್ಲಿ ಮೀನು ಹಿಡಿಯಲು ತೆರಳಿದ್ದರು. ಆದರೆ ರಾತ್ರಿ ಕಳೆದು ಮರು ದಿನ ಬೆಳಗಾದರೂ ಇಬ್ಬರು ಮನೆಗೆ ಬಾರದ ಹಿನ್ನೆಲೆಯಲ್ಲಿ ಅನುಮಾನಗೊಂಡ ಇಬ್ಬರ ಮನೆಯ ಪೋಷಕರು ಶುಕ್ರವಾರ ಬೆಳಗ್ಗೆ ಹೇಮಾವತಿ ನದಿ ಹತ್ತಿರ ಹೋಗಿ ಗಮನಿಸಿದಾಗ ಮೀನು ಹಿಡಿಯಲು ಬಳಸಿದ ಬಲೆ ಮತ್ತು ಶಿವರಾಜ್ ಅವರ ಚಪ್ಪಲಿಯೊಂದು ದಡದಲ್ಲಿ ಪತ್ತೆಯಾಗಿದೆ. ಈ ಕುರಿತು ಮಾಹಿತಿ ತಿಳಿದುಕೊಂಡ ಸ್ಥಳೀಯರು ನದಿ ದಡದಲ್ಲಿ ಹುಡುಕಾಟ ನಡೆಸಿದ್ದಾರೆ ಯಾವುದೇ ಸುಳಿವು ಸಿಗದ ಹಿನ್ನೆಲೆಯಲ್ಲಿ ಇಬ್ಬರು ನಾಪತ್ತೆಯಾಗಿರುವ ಕುರಿತು ಶನಿವಾರಸಂತೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಧ್ಯಾಹ್ನದಿಂದ ಪೋಲಿಸರು, ಅಗ್ನಿಶಾಮಕ ದಳದ ಸಿಬ್ಬಂದಿ ನದಿಯಲ್ಲಿ ಶೋಧ ಕಾರ್ಯನಡೆಸುತ್ತಿದ್ದಾರೆ. ಸ್ಥಳಕ್ಕೆ ಶನಿವಾರಸಂತೆ ಪೋಲಿಸ್ ಠಾಣಾಧಿಕಾರಿ ಚಂದ್ರು ಮತ್ತು ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಶೋಧ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ. ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.