ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು, ಪ್ರಧಾನಿ ಮೋದಿ ಮಧ್ಯಪ್ರವೇಶಿಸಿ ತಮ್ಮ ಅಭಿಪ್ರಾಯ ತಿಳಿಸಬೇಕು. ಪ್ರಕರಣದ ಆರೋಪಗಳ ಮೇಲೆ ಕೂಡಲೇ ಕ್ರಮ ಆಗಬೇಕು ಎಂದು ಎಂಎಲ್ಸಿ ಎಂ.ಎಲ್. ಅನಿಲ್ ಕುಮಾರ್ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಕೋಲಾರ

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು, ಪ್ರಧಾನಿ ಮೋದಿ ಮಧ್ಯಪ್ರವೇಶಿಸಿ ತಮ್ಮ ಅಭಿಪ್ರಾಯ ತಿಳಿಸಬೇಕು. ಪ್ರಕರಣದ ಆರೋಪಗಳ ಮೇಲೆ ಕೂಡಲೇ ಕ್ರಮ ಆಗಬೇಕು ಎಂದು ಎಂಎಲ್ಸಿ ಎಂ.ಎಲ್. ಅನಿಲ್ ಕುಮಾರ್ ಆಗ್ರಹಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ೧೨ ವರ್ಷಗಳಲ್ಲಿ ಸತತವಾಗಿ ನೀಟ್ ಪಶ್ನೆ ಪತ್ರಿಕೆ ಸೋರಿಕೆ ಆಗುತ್ತಲೇ ಇದೆ. ಇಷ್ಟಾಗಿಯೂ ಕ್ರಮ ಆಗಿಲ್ಲ. ಹೀಗಾಗಿ, ಮತ್ತೆ ಮತ್ತೆ ಹಗರಣ ನಡೆಯುತ್ತಿದೆ. ಇದಕ್ಕೆ ಯಾರು ಹೊಣೆ? ಇದರಿಂದ ಎಷ್ಟೆಲ್ಲಾ ಅನಾಹುತ ಆಗುತ್ತಿದೆ. ಕೇಂದ್ರ ಸರ್ಕಾರ, ಶಿಕ್ಷಣ ಸಚಿವ, ಅಧಿಕಾರಿಗಳೇ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಯುದ್ಧದ ರೀತಿ ಮರು ಪರೀಕ್ಷೆ ನಡೆಸಿದ್ದಾರೆ. ಮಿಲಿಟರಿ ಬಳಸಿಕೊಂಡಿದ್ದು ಹಾಸ್ಯಾಸ್ಪದ. ೧೯೮೪ರಲ್ಲಿ ವೀರಪ್ಪ ಮೊಯ್ಲಿ ಅವರು ಸಿಇಟಿ ಜಾರಿ ಮಾಡಿದರು. ಜನಸಾಮಾನ್ಯರಿಗೆ ಸೀಟು ಸಿಗಬೇಕೆಂದು ಅವರ ಉದ್ದೇಶ ಆಗಿತ್ತು. ಅದನ್ನೇ ಮಾದರಿಯಾಗಿಟ್ಟುಕೊಂಡು ೨೦೧೩ರಲ್ಲಿ ಯುಪಿಎ ಸರ್ಕಾರ ದೇಶದಾದ್ಯಂತ ನೀಟ್ ಜಾರಿ ಮಾಡಿತು. ಆದರೆ, ಎನ್ ಡಿ ಎ ಸರ್ಕಾರ ಪಾರದರ್ಶಕವಾಗಿ ಪರೀಕ್ಷೆ ನಡೆಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.

ಪ್ರಕರಣದ ಬಗ್ಗೆ ಪ್ರಧಾನಿ ಮೋದಿ ಏಕೆ ಉತ್ತರಿಸುತ್ತಿಲ್ಲ? ಸಾರ್ವಜನಿಕರ ಸಮಸ್ಯೆಗೆ ಏಕೆ ಬಾಯಿ ಬಿಡುವುದಿಲ್ಲ. ಯಾವ ವಿಷಯಕ್ಕೂ ಮಾತನಾಡುವುದಿಲ್ಲ. ಇದು ಸರ್ವಾಧಿಕಾರಿ ಆಡಳಿತವೇ? ಮುಂದೆ ಮತ್ತೆ ಈ ರೀತಿ ಸೋರಿಕೆ ಆಗಲ್ಲ ಎನ್ನುವುದಕ್ಕೆ ಏನು ಗ್ಯಾರಂಟಿ ಎಂದು ಪ್ರಶ್ನಿಸಿದರು.

ಪರೀಕ್ಷೆಯ ವಿಧಾನ ಸರಿ ಇಲ್ಲ. ಕೆಲವೊಂದು ಮಾರ್ಪಾಡು ಮಾಡಬೇಕು. ನೀಟ್ ಪರೀಕ್ಷೆಯ ಶೇ ೫೦ ಅಂಕ ಹಾಗೂ ದ್ವಿತೀಯ ಪರೀಕ್ಷೆಯ ಶೇ. ೫೦ ಅಂಕವನ್ನು ಪರಿಗಣಿಸಿ ಸೀಟ್ ನೀಡಬೇಕು. ಈ ಸಂಬಂಧ ಸಮಿತಿ ರಚನೆ ಮಾಡಿ ಅಧ್ಯಯನ ಮಾಡಿ ಸರಿಪಡಿಸಿಕೊಳ್ಳಬೇಕು. ನಮ್ಮ ಮಕ್ಕಳಿಗೆ ಪದೇಪದೇ ಅನ್ಯಾಯ ಆಗಬಾರದು ಎಂದು ಸಲಹೆ ನೀಡಿದರು.

ಪ್ರದೀಪ್ ಈಶ್ವರ್ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿ, ಪ್ರಶ್ನಿಸುವ ಹಕ್ಕು ಎಲ್ಲರಿಗೂ ಇದೆ. ಯಾರೇ ಆಗಲಿ ಅನ್ಯ ಮಾರ್ಗದಲ್ಲಿ ಹೋಗಬಾರದು. ಅವರ ಮೇಲೆ ಚಪ್ಪಾಲಿ ಬಿಸಾಡಿದ್ದು ತಪ್ಪು ಎಂದರು.

ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಮ್ಯಾಕಲ್ ನಾರಾಯಣಸ್ವಾಮಿ ಮಾತನಾಡಿ, ನೀಟ್ ಪ್ರಕರಣ ಬರೀ ಪ್ರಶ್ನೆ ಪತ್ರಿಕೆ ಸೋರಿಕೆ ಮಾತಲ್ಲ. ಇದೊಂದು ಉದ್ದೇಶಪೂರ್ವಕವಾಗಿ ನಡೆಸಿರುವ ದೇಶದ ದೊಡ್ಡ ಹಗರಣ ಎಂದು ತಿಳಿಸಿದರು.

ಕಾಂಗ್ರೆಸ್ ವಿದ್ಯಾರ್ಥಿ ಸಂಘಟನೆಯ ಜಿಲ್ಲಾ ಅಧ್ಯಕ್ಷ ನಿಹಾಲ್ ತರೀನ್ ಮಾತನಾಡಿ, ವರ್ಷ ಪೂರ್ತಿ ಕಷ್ಟಪಟ್ಟು ಓದಿ ಪ್ರಶ್ನೆ ಪತ್ರಿಕೆ ಸೋರಿಕೆಯಾದರೆ ಎಷ್ಟು ಕಷ್ಟ? ಕೇಂದ್ರ ಸರ್ಕಾರದ ಕೈಯಲ್ಲಿ ಪರೀಕ್ಷೆ ನಡೆಸಲು ಆಗುತ್ತಿಲ್ಲ. ತಮಿಳುನಾಡು ನಿಟ್ ತೆಗೆಯುತ್ತಿದ್ದಾರೆ. ನಮ್ಮ ರಾಜ್ಯದಲ್ಲೂ ತೆಗೆಯಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕೋಮುಲ್ ನಿರ್ದೇಶಕ ಚಂಜಿಮಲೆ ರಮೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ, ಮುಖಂಡರಾದ ಬೆಳಗಾನಹಳ್ಳಿ ಮುನಿವೆಂಕಟಪ್ಪ, ಕುಡಾ ಅಧ್ಯಕ್ಷ ಮೊಹಮ್ಮದ್ ಹನೀಪ್, ಗ್ಯಾರಂಟಿ ಜಿಲ್ಲಾ ಅಧ್ಯಕ್ಷ ವೈ.ಶಿವಕುಮಾರ್, ಖಾದ್ರಿಪುರ ಬಾಬು ಇದ್ದರು.