ಸಾರಾಂಶ
ಧಾರವಾಡ:
ನೀಟ್ ಪ್ರವೇಶ ಪರೀಕ್ಷೆಯಲ್ಲಿ ನಡೆದ ಭ್ರಷ್ಟಾಚಾರ ವಿರೋಧಿಸಿ ಹಾಗೂ ನ್ಯಾಯಾಂಗ ತನಿಖೆಗೆ ಒತ್ತಾಯಿಸಿ ಬುಧವಾರ ನಗರದ ಕಲಾಭವನ ಮೈದಾನದಿಂದ ವಿವೇಕಾನಂದ ವೃತ್ತದ ವರೆಗೆ ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ ಆರ್ಗ ನೈಸೇಷನ್ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ಪ್ರತಿಭಟನಾ ಮೆರವಣಿಗೆ ನಡೆಸಿದರು.ಈ ವೇಳೆ ಎಐಡಿಎಸ್‌ಒ ರಾಜ್ಯ ಸೆಕ್ರೆಟರಿಯಟ್ ಸದಸ್ಯರಾದ ಹಯ್ಯಾಳಪ್ಪ ಮಾತನಾಡಿ, ಜೂನ್ 4ರಂದು ಪ್ರಕಟಗೊಂಡ ಪರೀಕ್ಷಾ ಫಲಿತಾಂಶದ ಪಾರದರ್ಶಕತೆಯ ಕುರಿತು ದೇಶವ್ಯಾಪಿ ವಿದ್ಯಾರ್ಥಿಗಳು ಹಾಗೂ ಪಾಲಕರು ಹಲವಾರು ಪ್ರಶ್ನೆಗಳನ್ನು ಎತ್ತಿದ್ದಾರೆ. ಯುಜಿಸಿ ಪರೀಕ್ಷಾ ಮಾರ್ಗಸೂಚಿ ಅನ್ವಯ ಅಂಕ ನೀಡಿದ್ದಲ್ಲಿ ವಿದ್ಯಾರ್ಥಿಗಳು ಪಡೆಯಬಹುದಾದ ಅಂಕಗಳೊಂದಿಗೆ, ಪ್ರಸ್ತುತ ಒಂದಿಷ್ಟು ವಿದ್ಯಾರ್ಥಿಗಳು ಪಡೆದಿರುವ ಅಂಕಗಳು ಹೊಂದಿಕೆಯಾಗುತ್ತಿಲ್ಲ. ಕೆಲವು ವಿದ್ಯಾರ್ಥಿಗಳಿಗೆ ಹೆಚ್ಚುವರಿ ಅಂಕ ನೀಡಿರುವುದಾಗಿ ಎನ್‌ಟಿಎ ಸಮಜಾಯಿಸಿ ನೀಡಿದೆ. ಆದರೆ ಹೆಚ್ಚುವರಿ ಅಂಕ ನೀಡಿರುವ ಮಾನದಂಡವು ಸಂಪೂರ್ಣವಾಗಿ ಪಕ್ಷಪಾತಿಯಾಗಿದೆ ಎಂದು ಆರೋಪಿಸಿದರು.ಈ ವರ್ಷ ಪ್ರಕಟಿಸಲಾಗಿದ್ದ ಮಾರ್ಗಸೂಚಿ ಅನ್ವಯ ಹೆಚ್ಚುವರಿ ಅಂಕ ನೀಡಲು ಅವಕಾಶವಿಲ್ಲ. ಆಶ್ಚರ್ಯಕರವೆಂಬಂತೆ, ಒಂದೇ ಕೇಂದ್ರದಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಸಮಾನ ಅಂಕ ಗಳಿಸಿದ್ದಾರೆ. ಇದರೊಂದಿಗೆ, ಪರೀಕ್ಷೆಗೂ ಮುನ್ನವೇ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿದ್ದವು. ಈ ಕುರಿತು ಸಮರ್ಪಕ ತನಿಖೆ ನಡೆಸಲಾಗಿಲ್ಲ ಎಂಬ ಆರೋಪಿಸಿದರು. ನೀಟ್ ಪರೀಕ್ಷೆ ಫಲಿತಾಂಶದಲ್ಲಿನ ಪಾರದರ್ಶಕತೆ ಕೊರತೆ ಮತ್ತು ಭ್ರಷ್ಟಾಚಾರದ ಕುರಿತು ಸಾಕಷ್ಟು ಆರೋಪಗಳು ಕೇಳಿ ಬಂದಿವೆ. ಇದರ ಕುರಿತು ಸೂಕ್ತ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.
ಸಂಘಟನೆಯ ಜಿಲ್ಲಾಧ್ಯಕ್ಷರಾದ ಸಿಂಧೂ ಕೌದಿ ಮಾತನಾಡಿದರು. ಜಿಲ್ಲಾ ಕಾರ್ಯದರ್ಶಿ ಶಶಿಕಲಾ ಮೇಟಿ ಮತ್ತಿತರರು ಇದ್ದರು.;Resize=(128,128))
;Resize=(128,128))
;Resize=(128,128))
;Resize=(128,128))