ಹುಬ್ಬಳ್ಳಿ:

ನೀಟ್‌ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದರ ಹೊಣೆ ಹೊತ್ತು ಕೇಂದ್ರ ಮಾನವ ಸಂಪನ್ಮೂಲ ಸಚಿವ ಧರ್ಮೇಂದ್ರ ಪ್ರಧಾನ ಮತ್ತು ಕೇಂದ್ರ ಸರ್ಕಾರದ ಕೈಗೊಂಬೆಯಾಗಿರುವ ಮುಖ್ಯ ಚುನಾವಣಾಧಿಕಾರಿ ಜ್ಞಾನೇಶಕುಮಾರ ರಾಜೀನಾಮೆ ನೀಡಬೇಕು ಎಂದು ಸಮಾಜ ಪರಿವರ್ತನ ಸಮುದಾಯದ ಮುಖ್ಯಸ್ಥ ಎಸ್‌.ಆರ್‌. ಹಿರೇಮಠ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಖಿಲ ಭಾರತ ಮಟ್ಟದ ನೀಟ್‌, ಸಿಬಿಎಸ್‌ಸಿ, ಸಿಯುಇಟಿ ಹಾಗೂ ಎಸ್‌ಎಸ್‌ಸಿ ಪರೀಕ್ಷೆಗಳನ್ನು ಗೊಂದಲ ಗೂಡಾಗಿ ಮಾಡಿದ್ದಾರೆ. ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆಯಿಂದಾಗಿ ಲಕ್ಷಾಂತರ ಮಕ್ಕಳ ಭವಿಷ್ಯದ ಜತೆ ಚೆಲ್ಲಾಟವಾಡಿದ್ದು, ಅವರ ಹಿತ ಕಾಪಾಡುವಲ್ಲಿ ವಿಫಲರಾಗಿದ್ದಾರೆ. ಪರೀಕ್ಷೆ ಪಾವಿತ್ರ್ಯ ಕಾಪಾಡುವಲ್ಲಿ ಸೋತಿದ್ದಾರೆ. ಇದೆಲ್ಲದರ ನೈತಿಕೆ ಹೊಣೆ ಹೊತ್ತು ಸಚಿವರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.2024ರಲ್ಲಿಯೂ ಪ್ರಶ್ನೆಪತ್ರಿಕೆ ಸೋರಿಕೆಯಾಗಿತ್ತು. ಆ ನಂತರವೂ ಕೇಂದ್ರ ಸರ್ಕಾರ ಎಚ್ಚೆತ್ತುಕೊಳ್ಳಲಿಲ್ಲ. ಈಗ ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆಯಿಂದಾಗಿ ದೇಶದ 22 ಲಕ್ಷ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ದುಷ್ಪರಿಣಾಮ ಉಂಟಾಗಿದೆ ಎಂದರು.

ಎಸ್‌ಐಆರ್‌ಗೆ ವಿರೋಧ: ಕೇಂದ್ರ ಸರ್ಕಾರ ಎಸ್‌ಐಆರ್‌ ಮೂಲಕ ಬಿಹಾರ, ಪಶ್ಚಿಮ ಬಂಗಾಳದಲ್ಲಿ ದೊಡ್ಡ ಪ್ರಮಾಣದಲ್ಲಿ ದಲಿತರು, ವಲಸೆ ಕಾರ್ಮಿಕರು, ಆದಿವಾಸಿಗಳ ಮತದಾನದ ಹಕ್ಕು ಕಿತ್ತುಕೊಂಡಿದೆ. ಕೇಂದ್ರವು ತನ್ನ ಹಿತಾಸಕ್ತಿಯನ್ನು ಎಸ್‌ಐಆರ್‌ ಮೂಲಕ ಕಾರ್ಯಾಚರಣೆಗೆ ತರಲು ಮುಂದಾಗಿದೆ. ಮುಖ್ಯ ಚುನಾವಣಾ ಆಯುಕ್ತರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿದ್ದು ಅವರು, ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸುವಲ್ಲಿ ವಿಫಲರಾಗಿದ್ದಾರೆ. ನಿಷ್ಪಕ್ಷಪಾತವಾಗಿ ಕೆಲಸ ಮಾಡಲು ವಿಫಲವಾದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಕಾಕ್ರೋಚ್‌ ಜನತಾ ಪಾರ್ಟಿ ವ್ಯವಸ್ಥೆಯ ವಿರುದ್ಧದ ಯುವಜನರ ಹೋರಾಟವಾಗಿದೆ. ಇದಕ್ಕೆ ಇನ್ನಷ್ಟು ಸ್ಪಷ್ಟತೆ ಬೇಕಿದೆ. ಈ ಹೋರಾಟವನ್ನು ಎಲ್ಲರೂ ಬೆಂಬಲಿಸಬೇಕು ಎಂದು ಹಿರೇಮಠ ಕರೆನೀಡಿದರು. ಸುದ್ದಿಗೋಷ್ಠಿಯಲ್ಲಿ ಲಕ್ಷ್ಮಣ ಬಕ್ಕಾಯಿ, ಶಮೀಮ್‌ ಮುಲ್ಲಾ, ಕಲೀಂ ಇದ್ದರು.