ಮಣಿಪಾಲ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ಉಡುಪಿ ಜಿಲ್ಲಾ ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ (ಎನ್ಎಸ್‌ಯುಐ) ಹಾಗೂ ಯುವ ಕಾಂಗ್ರೆಸ್ ಸೋಮವಾರ ಮಣಿಪಾಲದ ಟೈಗರ್ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸಿತು.ಈ ವೇಳೆ ಮಾತನಾಡಿದ ಎನ್ಎಸ್‌ಯುಐ ಜಿಲ್ಲಾಧ್ಯಕ್ಷ ಸೌರಭ್ ಬಲ್ಲಾಳ್, ನ್ಯಾಯಯುತ, ಪಾರದರ್ಶಕ ರಾಷ್ಟ್ರೀಯ ಪರೀಕ್ಷೆ ನಡೆಸುವಲ್ಲಿ ಕೇಂದ್ರ ಸರ್ಕಾರದ ವೈಫಲ್ಯದಿಂದ ಅಮಾಯಕ ವಿದ್ಯಾರ್ಥಿಗಳು ಶಿಕ್ಷೆ ಅನುಭವಿಸುವಂತಾಗಿದೆ. ಎನ್‌ಟಿಎ ಪದೇ ಪದೆ ವಿಫಲವಾಗಿ ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ. ಕೋಚಿಂಗ್ ಮಾಫಿಯಾದ ಕೈಗೊಂಬೆಯಾಗಿರುವ ಎನ್‌ಟಿಎಯನ್ನು ತಕ್ಷಣ ವಿಸರ್ಜಿಸಬೇಕು ಎಂದು ಆಗ್ರಹಿಸಿದರು.

ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು. ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ನ್ಯಾಯಾಂಗ ತನಿಖೆ ನಡೆಸಿ ಕೋಚಿಂಗ್ ಮಾಫಿಯಾ- ಎನ್‌ಟಿಎ ನಂಟನ್ನು ಬಯಲಿಗೆಳೆದು ಕಠಿಣ ಶಿಕ್ಷೆ ನೀಡಬೇಕು. ಇಡೀ ಹಗರಣದ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಬೇಕು. ಕರ್ನಾಟಕಕ್ಕೆ ಪ್ರತ್ಯೇಕ ವೈದ್ಯಕೀಯ ಪ್ರವೇಶ ಪರೀಕ್ಷೆ ನಡೆಸಲು ಅವಕಾಶ ನೀಡಬೇಕು ಎಂದ ಬಲ್ಲಾಳ್, ರಾಜ್ಯದಲ್ಲಿ ನೀಟ್ ಪರೀಕ್ಷೆಯನ್ನು ಸಿಇಟಿ ಮೂಲಕ ನಡೆಸುವಂತೆ ಆಗ್ರಹಿಸಿದರು.

ಬಳಿಕ ಪ್ರತಿಭಟನಕಾರರು ರಸ್ತೆ ನಡೆಸಲು ಯತ್ನಿಸಿದರು. ಆದರೆ ಪೊಲೀಸರು ತಡೆದು ವಶಕ್ಕೆ ಪಡೆದುಕೊಂಡರು. ಪ್ರತಿಭಟನೆಯಲ್ಲಿ ಕಾಂಗ್ರೆಸ್ ಜಿಲ್ಲಾ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು, ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಅರ್ಜುನ್ ನಾಯರಿ, ಎನ್ಎಸ್‌ಯುಐ ಉಪಾಧ್ಯಕ್ಷ ಶರತ್ ಕುಂದರ್, ರಾಜ್ಯ ಕಾರ್ಯದರ್ಶಿ ಅನೀಶ್ ಕುಮಾರ್, ಪ್ರಮುಖರಾದ ಸಜ್ಜನ್ ಶೆಟ್ಟಿ, ಸುದೇಶ್ ಶೆಟ್ಟಿ, ಸೂರಜ್ ಶೆಟ್ಟಿ, ಮಲ್ಲಿಕ್ ಅತ್ತೂರು, ಸೃಜನ್ ಶೆಟ್ಟಿ, ಸುಮಂತ್ ಶೆಟ್ಟಿ, ಪ್ರಮೋದ್ ಪೂಜಾರಿ, ಮಂಜುನಾಥ್ ಜೋಗಿ, ಗೌರಿಶ್ ಕೋಟ್ಯಾನ್, ಮಹಮ್ಮದ್ ನಿಯಾಜ್, ಸಿರಾಝ್ ಶೇಖ್ ಮತ್ತಿತರರು ಉಪಸ್ಥಿತರಿದ್ದರು.