ಹರಪನಹಳ್ಳಿ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವರು ಕೂಡಲೇ ರಾಜೀನಾಮೆ ನೀಡಬೇಕು. ಪ್ರಕರಣದಲ್ಲಿ ಭಾಗಿಯಾದ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಎನ್‌ಎಸ್ ಯುಐ ತಾಲೂಕು ಘಟಕದಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು.
ಈ ವೇಳೆ ಎನ್‌ಎಸ್‌ಯುಐ ತಾಲೂಕು ಅಧ್ಯಕ್ಷ ಅಬುಸಾಲೇಹ್ ಮಾತನಾಡಿ, ದೇಶದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಧರಿಸುವ ನೀಟ್ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಂತಹ ಗಂಭೀರ ಘಟನೆಗಳು ಸಂಭವಿಸಿರುವುದು ಅತ್ಯಂತ ಆತಂಕಕಾರಿ ಸಂಗತಿ. ಇಂತಹ ಘಟನೆಗಳು ವಿದ್ಯಾರ್ಥಿಗಳ ಪರಿಶ್ರಮ, ಪ್ರಾಮಾಣಿಕತೆ ಮತ್ತು ಶಿಕ್ಷಣ ವ್ಯವಸ್ಥೆಯ ಮೇಲಿನ ಜನರ ನಂಬಿಕೆಯನ್ನು ಕುಗ್ಗಿಸುತ್ತವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ನೀಟ್ ಪ್ರಶ್ನೆಪತ್ರಿಕೆ ಸೋರಿಕೆಗೆ ಕಾರಣರಾದ ಎಲ್ಲ ವ್ಯಕ್ತಿಗಳು, ಅಧಿಕಾರಿಗಳು ಹಾಗೂ ಸಂಘಟಿತ ಜಾಲಗಳ ವಿರುದ್ಧ ತ್ವರಿತ ಹಾಗೂ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಪ್ರಕರಣದ ಕುರಿತು ಸ್ವತಂತ್ರ ಹಾಗೂ ಪಾರದರ್ಶಕ ತನಿಖೆ ನಡೆಸಿ ಸತ್ಯಾಂಶವನ್ನು ಸಾರ್ವಜನಿಕರ ಮುಂದೆ ತರಬೇಕು. ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಒತ್ತಾಯಿಸಿದರು.
ಪರೀಕ್ಷಾ ವ್ಯವಸ್ಥೆಯಲ್ಲಿ ನಿರಂತರ ವಿವಾದಗಳಿಗೆ ಕಾರಣವಾಗುತ್ತಿರುವ ಎನ್‌ಟಿಎ ಕಾರ್ಯವೈಖರಿಯನ್ನು ಸಂಪೂರ್ಣವಾಗಿ ಪರಿಶೀಲಿಸಿ, ಅಗತ್ಯವಿದ್ದಲ್ಲಿ ಅದನ್ನು ರದ್ದುಗೊಳಿಸುವುದು ಅಥವಾ ಮೂಲಭೂತ ಸುಧಾರಣೆಗಳನ್ನು ಜಾರಿಗೆ ತರುವುದು ಅಗತ್ಯವಾಗಿದೆ. ಶಿಕ್ಷಣದ ಹೆಸರಿನಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರಿಂದ ಅತಿಯಾದ ಶುಲ್ಕ ವಸೂಲಿ ಮಾಡುತ್ತಿರುವ ಕೋಚಿಂಗ್ ಕೇಂದ್ರಗಳ ಮೇಲೆ ಕಟ್ಟುನಿಟ್ಟಿನ ನಿಯಂತ್ರಣ ಹೇರಬೇಕು ಎಂದು ಆಗ್ರಹಿಸಿದರು.ಕೋಚಿಂಗ್ ಸಂಸ್ಥೆಗಳ ಶುಲ್ಕ, ಜಾಹೀರಾತು ಹಾಗೂ ಕಾರ್ಯನಿರ್ವಹಣೆಯ ಮೇಲೆ ಸೃಷ್ಟ ನಿಯಮಗಳನ್ನು ರೂಪಿಸಿ ಶೋಷಣೆಗೆ ಕಡಿವಾಣ ಹಾಕಬೇಕು, ಭವಿಷ್ಯದಲ್ಲಿ ಇಂತಹ ಸೋರಿಕೆಗಳು ಮರುಕಳಿಸದಂತೆ ಸುರಕ್ಷಿತ ಮತ್ತು ಪಾರದರ್ಶಕ ಪರೀಕ್ಷಾ ವ್ಯವಸ್ಥೆಯನ್ನು ರೂಪಿಸಬೇಕು ಎಂದರು.
ವಿದ್ಯಾರ್ಥಿಗಳ ಭವಿಷ್ಯ ಮತ್ತು ದೇಶದ ಶಿಕ್ಷಣ ವ್ಯವಸ್ಥೆಯ ಗೌರವವನ್ನು ಕಾಪಾಡುವ ನಿಟ್ಟಿನಲ್ಲಿ ಮೇಲ್ಕಂಡ ಬೇಡಿಕೆಗಳನ್ನು ತಕ್ಷಣ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ತಹಶೀಲ್ದಾರ್ ಮೂಲಕ ರಾಷ್ಟ್ರಪತಿಯವರಿಗೆ ಮನವಿ ಪತ್ರಸಲ್ಲಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ವೆಂಕಟೇಶ ನಾಯ್ಕ್, ರಾಜು, ಮೋಹನ್, ಗಣೇಶ, ಯಶವಂತ, ಬೀರೇಶ, ರಮೇಶ್, ಶಿವರಾಜ್, ಹನುಮಂತ ಫರ್ಜನ್, ಶಫೀವುಲ್ಲ ಸೇರಿದಂತೆ ವಿದ್ಯಾರ್ಥಿಗಳಿದಗದರು.