ಹುಟ್ಟಿದ ಮಣ್ಣಿಗೆ ಋಣಿಯಾಗಿ, ಭಾಷಾಭಿಮಾನ ಬೆಳೆಸಿಕೊಳ್ಳಬೇಕು

| Published : Nov 17 2025, 02:15 AM IST

ಹುಟ್ಟಿದ ಮಣ್ಣಿಗೆ ಋಣಿಯಾಗಿ, ಭಾಷಾಭಿಮಾನ ಬೆಳೆಸಿಕೊಳ್ಳಬೇಕು
Share this Article
  • FB
  • TW
  • Linkdin
  • Email

ಸಾರಾಂಶ

ನಾವು ಮೊದಲು ಕುವೆಂಪು ಅವರ ಕವಿವಾಣಿಯಂತೆ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ನಾವು ಹುಟ್ಟಿದ ಮಣ್ಣಿಗೆ ಋಣಿಯಾಗಿ, ಇಲ್ಲಿನ ಆಚಾರ ವಿಚಾರಗಳನ್ನು ಪಾಲಿಸಿ, ಭಾಷಾಭಿಮಾನ ಬೆಳೆಸಿಕೊಳ್ಳಬೇಕು ಎಂದು ರೈಲ್ವೆ ಕೋ- ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಹಾಗೂ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಎಂ.ಬಿ. ಮಂಜೇಗೌಡ ಹೇಳಿದರು.

ಜಯನಗರದ ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್, ನೇಗಿಲಯೋಗಿ ಮಹಿಳೆಯರ ಹಿತೈಷಿಗಳ ಸೇವಾ ಬಳಗದ ವತಿಯಿಂದ ಭಾನುವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆಯನ್ನು ಅವರು ಉದ್ಘಾಟಿಸಿ ಮಾತನಾಡಿದರು.

ನಾವು ಮೊದಲು ಕುವೆಂಪು ಅವರ ಕವಿವಾಣಿಯಂತೆ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು. ಹುಟ್ಟಿದ ಮಣ್ಣಿಗೆ ಋಣಿಯಾಗಿ ಇರಬೇಕು. ನಾವು ಇಂದು ಜಾಗತಿಕ ಸ್ಪರ್ಧಾ ಜಗತ್ತಿನಲ್ಲಿ ಇದ್ದೇವೆ. ಓದು, ವ್ಯವಹಾರಕ್ಕಾಗಿ ಇಂಗ್ಲಿಷ್ಕಲಿಸುವುದು ಮತ್ತು ಬಳಸುವುದು ಅನಿವಾರ್ಯವಾಗಿದೆ. ಆ ಸತ್ಯವನ್ನು ಒಪ್ಪಿಕೊಳ್ಳೋಣ. ಆದರೆ ನಮ್ಮ ತಾಯಿ ಭಾಷೆ, ಬದುಕಿನ ಭಾಷೆ ಕನ್ನಡ ಉಸಿರು ಹಾಗೂ ಬದುಕು ಆಗಬೇಕು ಎಂದರು.

ಮಕ್ಕಳಿಗಾಗಿ ಆಸ್ತಿ ಸಂಪಾದಿಸಿ ಅವರ ಬದುಕನ್ನು ಉತ್ತಮಪಡಿಸುವುದಕ್ಕಿಂತ ಉತ್ತಮ ಸಂಸ್ಕಾರವಂತ ಮಕ್ಕಳನ್ನಾಗಿ, ಉತ್ತಮ ಆರೋಗ್ಯವಂತ ಸತ್ಪ್ರಜೆಗಳನ್ನಾಗಿ ರೂಪಿಸಿ ಅವರನ್ನೇ ನಮ್ಮ ಆಸ್ತಿಯನ್ನಾಗಿಸಬೇಕು ಎಂದರು.

ರಾಜ್ಯೋತ್ಸವ ತಿಂಗಳಲ್ಲಿಯೇ ಮಕ್ಕಳ ದಿನಾಚರಣೆ ನಡೆಯುವುದರಿಂದ ಮಕ್ಕಳಲ್ಲಿ ಬಾಲ್ಯದಿಂದಲೇ ನಮ್ಮ ನೆಲ, ಜಲ ಮತ್ತು ಭಾಷೆಯ ಕುರಿತು ತಿಳಿಸಿಕೊಡಲು ಸಹಾಯವಾಗುತ್ತದೆ ಎಂದರು.

ಉಪನ್ಯಾಸಕ ಡಾ.ನಿ.ಗೂ. ರಮೇಶ್ ಮಾತನಾಡಿ, ಇಂಗ್ಲಿಷ್ ಗೆ ಒಬ್ಬರೇ ವಿಲಿಯಂ ಷೇಕ್ಸ್ ಪೀಯರ್, ಆದರೆ ಕನ್ನಡ ನಾಡಿನಲ್ಲಿ ಷೇಕ್ಸ್ ಪೀಯರ್ ಮೀರಿಸುವ ಅನೇಕ ಸಾಹಿತಿಗಳು ಇದ್ದಾರೆ. ದೇಶದಲ್ಲಿಯೇ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆ ಕನ್ನಡ ಮಾತ್ರ ಎಂದು ಹೇಳಿದರು.

ನೇಗಿಲಯೋಗಿ ಸಂಸ್ಥೆಯ ಮುಖ್ಯ ಸಂಚಾಲಕಿ ಜೆ. ಶೋಭಾ, ಸಾಹಿತಿ ಡಾ.ಕೆ. ಮಾಲತಿ, ಉಪನ್ಯಾಸಕ ಶ್ಯಾಮೇಶ್ ಅತ್ತಿಗುಪ್ಪೆ, ದಂತ ವೈದ್ಯೆ ಮೀನಾಕುವಾರಿ ಇದ್ದರು.