ಕಾಂಗ್ರೆಸ್‌ನಿಂದ ಬಂಜಾರರ ಕಡೆಗಣನೆ

| Published : Apr 20 2024, 01:00 AM IST

ಸಾರಾಂಶ

ಬಂಜಾರ ಸಮಾಜವನ್ನು ಕಡೆಗಣಿಸಿ ರಾಜಕೀಯವಾಗಿ ಪ್ರಾತಿನಿಧ್ಯ ನೀಡದ ಕಾಂಗ್ರೆಸ್ ಸರ್ಕಾರಕ್ಕೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತಕ್ಕಪಾಠ ಕಲಿಸಲಾಗುವುದೆಂದು ಜಿಲ್ಲಾ ಬಂಜಾರ ಲಂಬಾಣಿ ಸಂಘದ ಅಧ್ಯಕ್ಷ ಎಂ.ಸತೀಶ್‍ ಕುಮಾರ್ ಎಚ್ಚರಿಸಿದರು.

ಚಿತ್ರದುರ್ಗ: ಬಂಜಾರ ಸಮಾಜವನ್ನು ಕಡೆಗಣಿಸಿ ರಾಜಕೀಯವಾಗಿ ಪ್ರಾತಿನಿಧ್ಯ ನೀಡದ ಕಾಂಗ್ರೆಸ್ ಸರ್ಕಾರಕ್ಕೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತಕ್ಕಪಾಠ ಕಲಿಸಲಾಗುವುದೆಂದು ಜಿಲ್ಲಾ ಬಂಜಾರ ಲಂಬಾಣಿ ಸಂಘದ ಅಧ್ಯಕ್ಷ ಎಂ.ಸತೀಶ್‍ ಕುಮಾರ್ ಎಚ್ಚರಿಸಿದರು.

ಲೋಕಸಭೆ ಚುನಾವಣೆ ಹಿನ್ನಲೆ ಬಂಜಾರ ಭವನದಲ್ಲಿ ಸಭೆ ನಡೆಸಿ ಮಾತನಾಡಿದ ಅವರು, ದೊಡ್ಡ ಸಮಾಜಕ್ಕೆ ವಿಧಾನ ಸಭೆಯಲ್ಲಿ ಸಚಿವ ಸ್ಥಾನ ಕೂಡ ಕೊಟ್ಟಿಲ್ಲ. ರಾಜ್ಯದ 28 ಕ್ಷೇತ್ರಗಳಲ್ಲಿ ಎಲ್ಲಿಯೂ ಬಂಜಾರಾ ಜನಾಂಗದವರು ಸ್ಪರ್ಧಿಸಲು ಟಿಕೆಟ್ ಕೊಡದೆ ದ್ರೋಹವೆಸಗಿರುವ ಕಾಂಗ್ರೆಸ್‍ಗೆ ನಮ್ಮ ಮತವಿಲ್ಲ. ಬದಲಿಗೆ ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಗೋವಿಂದ ಕಾರಜೋಳ ಅವರನ್ನು ಗೆಲ್ಲಿಸುವುದು ನಮ್ಮ ಗುರಿ ಎಂದು ಹೇಳಿದರು.

ಕರ್ನಾಟಕ ರಾಜ್ಯ ತಾಂಡ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕ ಗಿರೀಶ್ ಮಾತನಾಡಿ, ಕಾಂಗ್ರೆಸ್ ಹಠಾವೋ ಬಂಜಾರ ಬಚಾವೋ ಎಂಬುದು ನಮ್ಮ ಘೋಷಣೆ. ನಮ್ಮ ಜನಾಂಗದ ಮತ ಪಡೆದು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ತಾಂಡ ಅಭಿವೃದ್ಧಿ ನಿಗಮಕ್ಕೆ ಅನುದಾನ ನೀಡಿಲ್ಲ. ನಿಗಮಕ್ಕೆ ಅಧ್ಯಕ್ಷರನ್ನು ನೇಮಕ ಮಾಡದೆ ಕಡೆಗಣಿಸುತ್ತಿದೆ. ನಮ್ಮ ಜನಾಂಗಕ್ಕೆ ಸಚಿವ ಸ್ಥಾನವಿಲ್ಲ. ಲೋಕಸಭೆ ಚುನಾವಣೆಯಲ್ಲಿಯೂ ಸ್ಪರ್ಧಿಸಲು ಅವಕಾಶವಿಲ್ಲ. ಸದಾಶಿವ ಆಯೋಗದ ವರದಿ ಜಾರಿಗೆ ಕೇಂದ್ರಕ್ಕೆ ಶಿಫಾರಸ್ಸು ಮಾಡಿರುವ ಕಾಂಗ್ರೆಸ್‍ನ್ನು ಈ ಚುನಾವಣೆಯಲ್ಲಿ ಸೋಲಿಸಿ ಬಿಜೆಪಿಯ ಗೋವಿಂದ ಕಾರಜೋಳರನ್ನು ಗೆಲ್ಲಿಸುತ್ತೇವೆಂದರು.

ಶಂಕರನಾಯ್ಕ, ಉಮಾಪತಿ, ತಣಿಗೆಹಳ್ಳಿ ಕುಮಾರನಾಯ್ಕ, ಪರಮೇಶ್ವರನಾಯ್ಕ, ಮದನ್, ಬೇವಿನಹಳ್ಳಿ ಮಂಜುನಾಥ್, ಓಂಕಾರ ನಾಯ್ಕ ಸೇರಿದಂತೆ ಸಭೆಯಲ್ಲಿ ಹಲವರು ಹಾಜರಿದ್ದರು.