ಹೆದ್ದಾರಿ ನಿರ್ವಹಣೆ ನಿರ್ಲಕ್ಷ್ಯ: ಜಾಗೃತಿ ಸಮಿತಿಯಿಂದ ಬೃಹತ್ ಪ್ರತಿಭಟನೆ

| Published : Nov 29 2024, 01:03 AM IST

ಹೆದ್ದಾರಿ ನಿರ್ವಹಣೆ ನಿರ್ಲಕ್ಷ್ಯ: ಜಾಗೃತಿ ಸಮಿತಿಯಿಂದ ಬೃಹತ್ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಕುಂದಾಪುರದಿಂದ ಹೆಜಮಾಡಿ ವರೆಗಿನ ರಾಷ್ಟ್ರೀಯ ಹೆದ್ದಾರಿ ಅಸರ್ಮಕ ನಿರ್ವಹಣೆ ವಿರುದ್ಧ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ಗುರುವಾರ ಚಿತ್ರಪಾಡಿ ಮಾರಿಗುಡಿ ಬಳಿ ಬೃಹತ್ ಪ್ರತಿಭಟನೆ ನಡೆಸಿತು.

ಕನ್ನಡಪ್ರಭ ವಾರ್ತೆ ಕೋಟ

ಕುಂದಾಪುರದಿಂದ ಹೆಜಮಾಡಿ ವರೆಗಿನ ರಾಷ್ಟ್ರೀಯ ಹೆದ್ದಾರಿ ಅಸರ್ಮಕ ನಿರ್ವಹಣೆ ವಿರುದ್ಧ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ಗುರುವಾರ ಚಿತ್ರಪಾಡಿ ಮಾರಿಗುಡಿ ಬಳಿ ಬೃಹತ್ ಪ್ರತಿಭಟನೆ ನಡೆಸಿತು.ಈ ಸಂದರ್ಭ ಮಾತನಾಡಿದ ಸಮಿತಿ ಅಧ್ಯಕ್ಷ ಶ್ಯಾಮಸುಂದರ್ ನಾಯರಿ, ಬಹಳ ಸಮಯದಿಂದ ಇಲ್ಲಿನ ಟೋಲ್‌ನಲ್ಲಿ ಸ್ಥಳೀಯರಿಗೆ ವಿನಾಯಿತಿಗಾಗಿ ಮತ್ತು ಅವ್ಯವಸ್ಥೆ ವಿರುದ್ಧ ಪ್ರತಿಭಟಿಸುತ್ತಿದ್ದೇವೆ. ಆದರೆ ಹೆದ್ದಾರಿ ನಿರ್ವಹಣೆ ಗುತ್ತಿಗೆ ಪಡೆದ ಕೆ.ಕೆ.ಆರ್. ಕಂಪನಿ ತೀವ್ರ ನಿರ್ಲಕ್ಷ್ಯವಹಿಸಿದೆ. ಕೇಳಿದರೆ ಉಡಾಫೆ ಉತ್ತರ ಸಿಗುತ್ತಿದೆ. ಇಲ್ಲಿ ಹೊಂಡಗುಂಡಿಗಳಿಂದಾಗಿ ಸಾವು ನೋವು ಸಂಭವಿಸಿದೆ. ಸರ್ವಿಸ್ ರಸ್ತೆ, ದಾರಿದೀಪ, ಚರಂಡಿ ಇಲ್ಲ. ಇದು ಕೊನೆಯ ಪ್ರತಿಭಟನೆ, ಇದೇ ನಿರ್ಲಕ್ಷ್ಯ ಮುಂದುವರಿಸಿದರೆ ಟೋಲ್‌ಗೆ ಸಂಚಕಾರ ತಂದ್ದೊಡ್ಡಲಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಮಿತಿಯ ಮಾಜಿ ಅಧ್ಯಕ್ಷ ಪ್ರತಾಪ್ ಶೆಟ್ಟಿ ಮಾತನಾಡಿ, ಹೊಂಡಗುಂಡಿಗಳಿಗೆ ಮುಕ್ತಿ, ಇತರ ಸಮಸ್ಯೆಗಳನ್ನು ಒಂದು ತಿಂಗಳೊಳಗೆ ಸರಿಪಡಿಸಬೇಕು. ಇಲ್ಲವಾದಲ್ಲಿ ಮುಂದೆ ಟೋಲ್ ನೀಡದೇ ಸಂಚರಿಸುವ ಪ್ರತಿಭಟನೆಯಾಗಲಿದೆ ಎಂದು ಎಚ್ಚರಿಸಿದರು.ಮರಣ ಡೋಲು ಬಾರಿಸುವ ಮೂಲಕ ಪ್ರತಿಭಟನೆಗೆ ಚಾಲನೆ ನೀಡಲಾಯಿತು. ನಂತರ ಗುತ್ತಿಗೆ ಸಂಸ್ಥೆ, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಅಣಕು ಶವ ಸಂಸ್ಕಾರ ನಡೆಸಲಾಯಿತು.ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಶ್ರೀಕಾಂತ್ ಹೆಗ್ಡೆ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಈ ವೇಳೆ ತಹಸೀಲ್ದಾರ್ ತಿಂಗಳೊಳಗೆ ಸಮಸ್ಯೆಗಳಿಗೆ ಮುಕ್ತಿಗಾಣಿಸಲು ಕಂಪನಿಯ ಅಧಿಕಾರಿಗಳಿಗೆ ಸೂಚಿಸಿದರು. ಗುತ್ತಿಗೆ ಸಂಸ್ಥೆಯ ಉಸ್ತುವಾರಿ ತಿಮ್ಮಯ್ಯ, ಬ್ರಹ್ಮಾವರ ವೃತ್ತ ನಿರೀಕ್ಷಕ ದಿವಾಕರ್, ಠಾಣಾಧಿಕಾರಿ ತೇಜಸ್ವಿ, ಕೋಟ ಠಾಣಾಧಿಕಾರಿ ರಾಘವೇಂದ್ರ ಉಪಸ್ಥಿತರದ್ದರು.ಹೆದ್ದಾರಿ ಜಾಗೃತಿ ಸಮಿತಿಯ ಪ್ರಮುಖರಾದ ಐರೋಡಿ ವಿಠಲ ಪೂಜಾರಿ, ಪ್ರಶಾಂತ್ ಶೆಟ್ಟಿ, ಸತೀಶ್ ಪೂಜಾರಿ, ರಾಜೇಶ್ ಕಾವೇರಿ, ಭೋಜ ಪೂಜಾರಿ, ಋಶಿರಾಜ್ ಸಾಸ್ತಾನ, ಚಂದ್ರಶೇಖರ್ ಮೆಂಡನ್, ನಾಗರಾಜ್ ಗಾಣಿಗ, ರಾಜೇಂದ್ರ ಸುವರ್ಣ, ಮಹಾಬಲ ಪೂಜಾರಿ, ರಾಜೇಶ್ ಸಾಸ್ತಾನ, ಅಚ್ಯುತ ಪೂಜಾರಿ, ಸುಲತಾ ಹೆಗ್ಡೆ, ಗಣೇಶ್ ಪೂಜಾರಿ, ಲೀಲಾವತಿ ಗಂಗಾಧರ್, ರೆ.ಫಾ. ಡಿಸಿಲ್ವ ಮತ್ತಿತರರು ಇದ್ದರು. ಕಾರ್ಯದರ್ಶಿ ಅಲ್ವಿನ್ ಅಂದ್ರಾದೆ ಸಭೆಯನ್ನು ನಿರ್ವಹಿಸಿದರು.