ಸರ್ಕಾರದಿಂದ ಕನಕದಾಸರ ಕರ್ಮಭೂಮಿ ಕಾಗಿನೆಲೆ ನಿರ್ಲಕ್ಷ್ಯ: ಆರೋಪ

| Published : Jan 17 2025, 12:45 AM IST

ಸಾರಾಂಶ

ಕನಕದಾಸರ ಕರ್ಮಭೂಮಿ ಕಾಗಿನೆಲೆಯನ್ನು ರಾಜ್ಯ ಸರ್ಕಾರ ನಿರ್ಲಕ್ಷಿಸಿದೆ. ಬಸ್ ನಿಲ್ದಾಣ ಸೇರಿದಂತೆ ಯಾವುದೇ ಮೂಲ ಸೌಕರ್ಯ ಇಲ್ಲದೆ ಸೊರಗಿದೆ. 8 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಕಾಗಿನೆಲೆಯಲ್ಲಿ ಒಂದೇ ಒಂದು ಕುಡಿಯುವ ನೀರಿನ ಘಟಕವಿದೆ ಎಂದು ಜೆಡಿಎಸ್ ಮುಖಂಡ ಮೋಹನ ಬಿನ್ನಾಳ ಆರೋಪಿಸಿದರು.

ಬ್ಯಾಡಗಿ: ಕನಕದಾಸರ ಕರ್ಮಭೂಮಿ ಕಾಗಿನೆಲೆಯನ್ನು ರಾಜ್ಯ ಸರ್ಕಾರ ನಿರ್ಲಕ್ಷಿಸಿದೆ ಎಂದು ಜೆಡಿಎಸ್ ಮುಖಂಡ ಮೋಹನ ಬಿನ್ನಾಳ ಆರೋಪಿಸಿದರು.

ಗುರುವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸ್ ನಿಲ್ದಾಣ ಸೇರಿದಂತೆ ಯಾವುದೇ ಮೂಲ ಸೌಕರ್ಯ ಇಲ್ಲದೆ ಸೊರಗಿದೆ. ಪಂಚ ಗ್ಯಾರಂಟಿ ನೀಡಿದ್ದೇವೆ ಎಂದು ಬೀಗುತ್ತಿರುವ ರಾಜ್ಯ ಸರ್ಕಾರ ಅಲ್ಲಿನ ಮತದಾರರಿಗೆ ಅಪ್ರತ್ಯಕ್ಷವಾಗಿ ಮೋಸವೆಸಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

8 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಕಾಗಿನೆಲೆಯಲ್ಲಿ ಯಾವುದೇ ಮೂಲ ಸೌಕರ್ಯಗಳಿಲ್ಲ. ಒಂದೇ ಒಂದು ಕುಡಿಯುವ ನೀರಿನ ಘಟಕವಿದೆ ಎಂದು ಹೇಳಿದರು.

ಶಾಸಕ ಬಸವರಾಜ ಶಿವಣ್ಣನವರ ಕಾಗಿನೆಲೆ ಗ್ರಾಮ ನಿರ್ಲಕ್ಷಿಸಿದ್ದಾರೆ. ಕೆರೆ ಒತ್ತುವರಿ ಇಂದಿಗೂ ತೆರವುಗೊಳಿಸಿಲ್ಲ. ಉಪ ತಹಸೀಲ್ದಾರ್‌ ಕಚೇರಿ ನಿರ್ಮಾಣವಾಗಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲ, ಚಿಕಿತ್ಸೆ ಸಿಗದೇ ಜನರು ಪರದಾಡುತ್ತಿದ್ದಾರೆ. ಆಸ್ಪತ್ರೆ ಮೇಲ್ದರ್ಜೆಗೇರಿಸುವ ಪ್ರಯತ್ನ ನಡೆದಿಲ್ಲ ಎಂದರು.

ಬಿಜೆಪಿ ಮ್ಯಾಚ್ ಫಿಕ್ಸಿಂಗ್: ಬ್ಯಾಡಗಿ ಮತಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ. ಸಮರ್ಥ ವಿರೋಧ ಪಕ್ಷವಾಗಿ ಕೆಲಸ ನಿರ್ವಹಿಸಬೇಕಾಗಿದ್ದ ಬಿಜೆಪಿ ಕಾಂಗ್ರೆಸ್‌ನೊಂದಿಗೆ ಹೊಂದಾಣಿಕೆ ಮಾಡಿಕೊಂಡ ಬಗ್ಗೆ ಅನುಮಾನಗಳಿವೆ. ರಾಜ್ಯ ಸರ್ಕಾರದ ವೈಫಲ್ಯದ ಕುರಿತು ಮನೆ ಮನೆಗೆ ಭಿತ್ತಿಪತ್ರಗಳನ್ನು ಅಂಟಿಸುವ ಮೂಲಕ ಜಾಗೃತಿ ಮೂಡಿಸಲಿದ್ದೇನೆ. ಬರುವ ದಿನಗಳಲ್ಲಿ ರಾಜ್ಯ ಸರ್ಕಾರದ ವೈಫಲ್ಯ ವಿರುದ್ಧ ಧರಣಿ ನಡೆಸಲಾಗುವುದು ಎಂದು ಜೆಡಿಎಸ್ ಮುಖಂಡ ಮೋಹನ ಬಿನ್ನಾಳ ಆರೋಪಿಸಿದರು.

ಮಹಬೂಬಲಿ ಯಲಿಗಾರ ಮಾತನಾಡಿ, ತಮ್ಮ ಕೈಹಿಡಿದ ಮತದಾರರಿಗೆ ಶಾಸಕ ಬಸವರಾಜ ಶಿವಣ್ಣನವರ ಮೋಸವೆಸಗುತ್ತಿದ್ದಾರೆ. ಇಂಗಳಗೊಂದಿ ಪ್ಲಾಟ್‌ನಲ್ಲಿ 500ಕ್ಕೂ ಹೆಚ್ಚು ಮನೆಗಳಿವೆ. ಅವುಗಳಿಗೆ ಇಂದಿಗೂ ಪಟ್ಟಾ ಸಿಕ್ಕಿಲ್ಲ. ಪಟ್ಟಾ ಕೊಡಿಸುವ ನೆಪದಲ್ಲಿ ಅಮಾಯಕರಿಂದ ಹಣ ವಸೂಲಿ ನಡೆದಿದೆ ಎಂದರು.

ಮೋಹಿನ್ ಮುಲ್ಲಾ ಮಾತನಾಡಿ, ಕಾಗಿನೆಲೆಯಲ್ಲಿರುವ ಮುಸ್ಲಿಂ ಸಮಾಜದ ಖಬರಸ್ಥಾನ ಗುರುಪೀಠದ ಬಳಿಯಿದೆ. ಆದರೆ ಇಂದಿಗೂ ಅದಕ್ಕೆ ಕಾಂಪೌಂಡ್‌ ನಿರ್ಮಾಣವಾಗಿಲ್ಲ. ಕೆಲವರು ಪವಿತ್ರ ಸ್ಥಳ ಮಲಿನಗೊಳಿಸುತ್ತಿದ್ದಾರೆ. ಮಳೆಗಾಲದಲ್ಲಿ ಅಲ್ಲಿ ನೀರು ನುಗ್ಗುತ್ತಿದೆ. ಕೂಡಲೇ ಅದನ್ನು ಸಂರಕ್ಷಿಸಿ ಅಭಿವೃದ್ಧಿಪಡಿಸುವ ಕೆಲಸ ಶಾಸಕರಿಂದ ಆಗಬೇಕು ಎಂದು ಆಗ್ರಹಿಸಿದರು.

ಆಸೀಫ್‌ ಅಲಿ ಮತ್ತಿಹಳ್ಳಿ ಮಾತನಾಡಿ, ಶಾದಿ ಮಹಲ್ ನಿರ್ಮಾಣ, ರಾಷ್ಟ್ರೀಕೃತ ಬ್ಯಾಂಕ್‌ ಸ್ಥಾಪನೆ, ಆಟದ ಮೈದಾನ, ಗೃಹ ಮಂಡಳಿ ವತಿಯಿಂದ ಮನೆ ನಿರ್ಮಾಣವಾಗಿಲ್ಲ. ಶಾಸಕ ಬಸವರಾಜ ಶಿವಣ್ಣನವರ 2 ಬಾರಿ ಶಾಸಕರಾಗಿ ಆಯ್ಕೆಯಾದರೂ ಯಾವುದೇ ಸಮಸ್ಯೆಗಳಿಗೆ ಪರಿಹಾರ ನೀಡಿಲ್ಲ ಎಂದರು.