ಮಹಾರಾಷ್ಟ್ರದಲ್ಲಿ ಕನ್ನಡ ಮಾಧ್ಯಮ ಶಾಲೆ ಕಡೆಗಣನೆ ಖಂಡನೀಯ: ಶಾಂತಲಿಂಗ ಶ್ರೀಗಳು

| Published : Jun 20 2024, 01:01 AM IST

ಮಹಾರಾಷ್ಟ್ರದಲ್ಲಿ ಕನ್ನಡ ಮಾಧ್ಯಮ ಶಾಲೆ ಕಡೆಗಣನೆ ಖಂಡನೀಯ: ಶಾಂತಲಿಂಗ ಶ್ರೀಗಳು
Share this Article
  • FB
  • TW
  • Linkdin
  • Email

ಸಾರಾಂಶ

ನರಗುಂದ ತಾಲೂಕಿನ ಭೈರನಹಟ್ಟಿ ಗ್ರಾಮದ ದೊರೆಸ್ವಾಮಿ ವಿರಕ್ತಮಠದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 2002-03ನೇ ಸಾಲಿನ ವಿದ್ಯಾರ್ಥಿಗಳು ಬುಧವಾರ ಗುರುವಂದನೆ ಸಲ್ಲಿಸಿದರು.

ನರಗುಂದ: ಮಹಾರಾಷ್ಟ್ರದಲ್ಲಿರುವ ಕನ್ನಡ ಶಾಲೆಗಳಿಗೆ ಮರಾಠಿ ಭಾಷೆಯ ಶಿಕ್ಷಕರ ನೇಮಕ ಖಂಡನೀಯ ಎಂದು ಭೈರನಹಟ್ಟಿ-ಶಿರೋಳ ಮಠದ ಶಾಂತಲಿಂಗ ಶ್ರೀಗಳು ಹೇಳಿದರು.

ತಾಲೂಕಿನ ಭೈರನಹಟ್ಟಿ ಗ್ರಾಮದ ದೊರೆಸ್ವಾಮಿ ವಿರಕ್ತಮಠದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 2002-03ನೇ ಸಾಲಿನ ವಿದ್ಯಾರ್ಥಿಗಳು ಬುಧವಾರ ಹಮ್ಮಿಕೊಂಡಿದ್ದ ಗುರುವಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಗಡಿಭಾಗದ ಕನ್ನಡ ಮಾಧ್ಯಮ ಶಾಲೆಗಳನ್ನು ಮೂಲೆಗುಂಪು ಮಾಡುವ ಹುನ್ನಾರ ಮಾಡುತ್ತಿರುವ ಮಹಾರಾಷ್ಟ್ರ ಸರ್ಕಾರ ಮತ್ತೆ ತನ್ನ ಕುಹಕ ಬುದ್ಧಿ ತೋರಿಸುತ್ತಿದೆ. ಅದರ ವಿರುದ್ಧ ಕರ್ನಾಟಕ ಸರ್ಕಾರ ಕಾನೂನು ಹೋರಾಟ ನಡೆಸಬೇಕು, ಕನ್ನಡಿಗರ ಹಿತ ಕಾಪಾಡಬೇಕಿದೆ. ಕನ್ನಡವನ್ನೇ ಅಧಿಕವಾಗಿ ಮಾತನಾಡುವ ಸಾಂಗ್ಲಿ, ಸೊಲ್ಲಾಪುರ ಜಿಲ್ಲೆಗಳ ೨೫೦ಕ್ಕೂ ಹೆಚ್ಚು ಗ್ರಾಮಗಳ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮರಾಠಿ ಭಾಷೆಯ ಶಿಕ್ಷಕರನ್ನು ನೇಮಿಸುತ್ತಿರುವ ಮಾಹಾರಾಷ್ಟ್ರ ಸರ್ಕಾರ ನಡೆ ಖಂಡನೀಯ ಎಂದು ಹೇಳಿದರು.

ಪ್ರತಿ ವಿಷಯದಲ್ಲಿಯೂ ಕನ್ನಡಿಗರನ್ನು ಕೆಣಕುತ್ತಿರುವ ಮಹಾರಾಷ್ಟ್ರ, ಈಗ ಮತ್ತೆ ಕನ್ನಡ ಮಕ್ಕಳಿರುವ ಶಾಲೆಗಳ ಮೇಲೆ ಸವಾರಿ ಮಾಡುತ್ತಿದೆ. ಇದಕ್ಕೆ ಪ್ರತಿಯಾಗಿ ನಮ್ಮ ಮುಖ್ಯಮಂತ್ರಿ, ಕನ್ನಡಿಗರಿಗೆ ಬೆನ್ನೆಲುಬಾಗಿ ನಿಂತು ಗಡಿಭಾಗದ ಕನ್ನಡ ಶಾಲೆಗಳನ್ನು ಕಾಪಾಡಬೇಕು. ಇಲ್ಲವಾದಲ್ಲಿ ಕನ್ನಡ ಶಾಲೆಗಳು ನಶಿಸಿ ಹೋಗಲಿವೆ ಎಂದು ಆತಂಕ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳ ಸನ್ಮಾನ ಸ್ವೀಕರಿಸಿ ಆನಂತರ ಶಿಕ್ಷಕ ಆರ್.ಆರ್. ಕಟ್ಟಿ ಮಾತನಾಡಿ, ವಿದ್ಯೆಗೆ ವಿನಯವೇ ಭೂಷಣ ಎಂಬಂತೆ ನಾವು ಏನು ಓದಿದ್ದೇವೆ ಎನ್ನುವುದಕ್ಕಿಂತ ನಮ್ಮಲ್ಲಿ ಸಂಸ್ಕಾರ-ಸಂಸ್ಕೃತಿ ಎಷ್ಟಿದೆ ಎನ್ನುವುದು ಅತಿಮುಖ್ಯವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಎಲ್ಲ ವೃತ್ತಿಗಳಿಂತ ಶಿಕ್ಷಕ ವೃತ್ತಿಗೆ ಸಮಾಜದಲ್ಲಿ ಉತ್ತಮ ಗೌರವವಿದೆ. ಹೀಗಾಗಿ ಶಿಕ್ಷಕರಾದವರು ತಮ್ಮ ವೃತ್ತಿಗೆ ತಕ್ಕಂತೆ ವ್ಯಕ್ತಿತ್ವ ಮೈಗೂಡಿಸಿಕೊಳ್ಳಬೇಕು. ತಾವು ಪಾಠ ಮಾಡಿದ ಮಕ್ಕಳು ಉತ್ತಮ ನಾಗರಿಕರಾದಾಗ ಅದುವೇ ಶಿಷ್ಯರು ತಮ್ಮ ಗುರುಗಳಿಗೆ ನೀಡುವ ಅತಿ ದೊಡ್ಡ ಉಡುಗೊರೆ ಎಂದು ಹೇಳಿದರು.

ಶಿಕ್ಷಕರಾದ ಎಸ್.ಎ. ಭಜಂತ್ರಿ, ಸಿ.ಎಸ್. ಜಗಾಪುರ, ಎನ್.ವೈ. ಪಾಟೀಲ, ವೈ.ಆರ್. ಬಸಿಡೋಣಿ, ಆರ್.ಆರ್. ಕಟ್ಟಿ ಅವರಿಗೆ ವಿದ್ಯಾರ್ಥಿಗಳು ಗುರುವಂದನೆ ಸಲ್ಲಿಸಿದರು.ನಿವೃತ್ತ ಶಿಕ್ಷಕ ವೀರಯ್ಯ ಸಾಲಿಮಠ, ಶರಣಯ್ಯ ಕೊಣ್ಣೂರಮಠ, ದ್ಯಾಮನಗೌಡ ಪಾಟೀಲ, ಸುರೇಶ ಐನಾಪುರ, ಈಶ್ವರ ಕೀಲಿಕೈ, ಕವಿತಾ ಬಡಿಗೇರ, ನಿಂಗಮ್ಮ ಐನಾಪುರ, ಸುನೀತಾ ತೆಗ್ಗಿನಮನಿ, ಭೀಮವ್ವ ಈರನಗೌಡ್ರ ನೀಲಪ್ಪ ದಂಡಿನ, ಶಿವಾನಂದ ಬೆನ್ನೂರ, ರಾಘವೇಂದ್ರ ಬಡಿಗೇರ, ಪ್ರೇಮಾ ಮುನೇನಕೊಪ್ಪ ಉಪಸ್ಥಿತರಿದ್ದರು.