ಬಾಗೇಪಲ್ಲಿ ವಿಧಾನ ಸಭಾ ಕ್ಷೇತ್ರದ ಬಾಗೇಪಲ್ಲಿ, ಗುಡಿಬಂಡೆ ಮತ್ತು ಚೇಳೂರು ತಾಲೂಕುಗಳಲ್ಲಿ ಶಾಸಕರು ತಮಗೆ ಬೇಕಾಗಿರುವಂತಹ ಅನುಯಾಯಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಮೀಸಲಾತಿ ಮಾಡಿಕೊಂಡಿದ್ದರು.
ಜಿಪಂ, ತಾಪಂ ಚುನಾವಣೆಗೆ ಮೀಸಲಾತಿ । ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ವಿರುದ್ಧ ಬಿಜೆಪಿ ರಾಜ್ಯ ಕಾರ್ಯದರ್ಶಿ ಸಿ.ಮುನಿರಾಜು ಆರೋಪ
ಕನ್ನಡಪ್ರಭ ವಾರ್ತೆ ಬಾಗೇಪಲ್ಲಿಕ್ಷೇತ್ರದಲ್ಲಿ ದಲಿತರು ರಾಜಕೀಯವಾಗಿ ಬೆಳೆಯಬಾರದು ಎನ್ನುವ ಉದ್ದೇಶದಿಂದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಜಿ.ಪಂ ಮತ್ತು ತಾ.ಪಂ ಮೀಸಲಾಯಿತಿಯಲ್ಲಿ ಅವಕಾಶ ನೀಡದೆ ದಲಿತರನ್ನು ಕಡೆಗಣಿಸಿದ್ದಾರೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಸಿ.ಮುನಿರಾಜು ಆರೋಪಿಸಿದರು.
ಪಟ್ಟಣದ ಹೊರವಲಯದ ಟಿ.ಬಿ.ಕ್ರಾಸ್ ಬಳಿ ಇರುವ ಸಿ.ಮುನಿರಾಜು ರವರ ಗೃಹ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯ ಸರ್ಕಾರ ಜಿ.ಪಂ ಮತ್ತು ತಾ.ಪಂ ಚುನಾವಣೆಗೆ ಮೀಸಲಾತಿ ಪ್ರಕಟಗೊಳಿಸಲಾಗಿದೆ. ಬಾಗೇಪಲ್ಲಿ ವಿಧಾನ ಸಭಾ ಕ್ಷೇತ್ರದ ಬಾಗೇಪಲ್ಲಿ, ಗುಡಿಬಂಡೆ ಮತ್ತು ಚೇಳೂರು ತಾಲೂಕುಗಳಲ್ಲಿ ಶಾಸಕರು ತಮಗೆ ಬೇಕಾಗಿರುವಂತಹ ಅನುಯಾಯಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಮೀಸಲಾತಿ ಮಾಡಿಕೊಂಡಿದ್ದರು.ಈ ಮೊದಲು ಬಾಗೇಪಲ್ಲಿ ತಾಲೂಕಿನ ಜಿ.ಪಂ ಕ್ಷೇತ್ರಕ್ಕೆ ಕಸಬಾ ಎಸ್.ಟಿ, ಗೂಳೂರು ಸಾಮಾನ್ಯ, ಮಿಟ್ಟೇಮರಿ ಸಾಮಾನ್ಯ, ಚಾಕವೇಲು ಎಸ್.ಸಿ, ಚೇಳೂರು ಸಾಮಾನ್ಯ ಮಹಿಳೆ, ಸೋಮೇನಹಳ್ಳಿ ಸಾಮಾನ್ಯ, ಗುಡಿಬಂಡೆ ಕಸಬಾ ಎಸ್.ಸಿ ಮಹಿಳೆ, ತಾ.ಪಂ ಗೂಳೂರು ಎಸ್.ಸಿ, ಪರಗೋಡು ಎಸ್.ಟಿ, ಚಾಕವೇಲು ಎಸ್.ಸಿ, ಬಿಳ್ಳೂರು ಎಸ್.ಟಿ ಮೀಸಲಾತಿ ಇತ್ತು ಆದರೆ ಶಾಸಕರೇ ಮಾಡಿಕೊಂಡು ಬಂದಿರುವಂತಹ ಮೀಸಲಾತಿಗಳನ್ನು ಏಕಾಏಕಿಯಾಗಿ ಚಾಕವೇಲು ಎಸ್.ಸಿ ಇದ್ದ ಮೀಸಲಾತಿಯನ್ನ ಚೇಳೂರಿಗೆ ಬದಲಿಸಿ ಚೇಳೂರುನಲ್ಲಿದ್ದ ಸಾಮಾನ್ಯ ಮಹಿಳೆ ಮೀಸಲಾತಿಯನ್ನ ಚಾಕವೇಲುಗೆ ಬದಲಿಸುವಂತಹ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದರು.
ಅಲ್ಲಿ ನಿಮ್ಮ ಪಕ್ಷದ ಕಾರ್ಯಕರ್ತರು ಯಾರು ಇಲ್ಲವೇ? ಅಲ್ಲಿ ಎಸ್.ಸಿಗಳಿಗೆ ನಿಲ್ಲಲು ಅವಕಾಶ ಬೇಡವಾ? ಕ್ಷೇತ್ರದಲ್ಲಿ ರಾಜಕೀಯವಾಗಿ ದಲಿತರು ಮುಂದೆ ಬರಬಾರದು ಎನ್ನುವ ಉದ್ದೇಶದಿಂದಲ್ಲೇ ಈ ರೀತಿಯ ಮೀಸಲಾತಿಗಳನ್ನು ತಂದಿದ್ದಾರೆ ಎಂದು ಶಾಸಕರ ವಿರುದ್ದ ವಾಗ್ದಾಳಿ ನಡೆಸಿದರು.ನಿಮ್ಮ ಪಕ್ಷದಲ್ಲಿರುವ ಹಾಗೂ ನಿಮ್ಮನ್ನೇ ನಂಭಿರುವ ದಲಿತರಿಗೆ ಈ ರೀತಿಯಲ್ಲಿ ವಂಚನೆ ಮಾಡಿರುವುದು ಎಷ್ಟು ಸರಿ, ಎಸ್.ಸಿ ಅಭ್ಯರ್ಥಿಗಳನ್ನು ಚುನಾವಣಾ ಕಣಕ್ಕೆ ಇಳಿಸುವ ಶಕ್ತಿ ತಾಕ್ಕತ್ತು ನಿಮಗೆ ಇಲ್ಲವಾ ಇದಕ್ಕೆ ನಿಮ್ಮ ಪಕ್ಷದಲ್ಲಿರುವ ದಲಿತರಿಗೆ ಉತ್ತರ ನೀಡಬೇಕಾಗಿದೆ ಎಂದರು.
ಜಿ.ಪಂ ಮತ್ತು ತಾ.ಪಂ ಚುನಾವಣೆಯಲ್ಲಿ ಶಾಸಕರು ಯಾವುದೇ ಮೀಸಲಾತಿ ತಂದರೂ ಸಹ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಚುನಾವಣೆ ಎದುರಿಸಲು ಸಿದ್ದವಾಗಿದ್ದೇವೆ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಸವಾಲು ಹಾಕಿದರಲ್ಲದೆ ನೀವೇ ಮಾಡಿಸಿಕೊಂಡು ಬಂದಿದ್ದ ಈ ಹಿಂದಿನ ಮೀಸಲಾತಿಯನ್ನೇ ಮುಂದುವರೆಸುವ ಮೂಲಕ ದಲಿತ ವಿರೋಧಿ ಶಾಸಕರು ಎನ್ನುವುದನ್ನ ಪಟ್ಟದಿಂದ ತೊಲಗಿಸುವ ಕೆಲಸಕ್ಕೆ ಮುಂದಾಗಿ ಇಲ್ಲದಿದ್ದರೆ ದಲಿತರು ಮುಂದಿನ ದಿನಗಳಲ್ಲಿ ನಿಮಗೆ ತಕ್ಕಪಾಠ ಕಲಿಸುತ್ತಾರೆ ಎಂದರು.ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ರವರು ನೂರಾರು ಎಕರೆ ಭೂ ಹಗರಣ ಈಗಾಗಲೇ ಬಯಲಿಗೆ ಬಂದಿದೆ. ಹೋರಾಟಗಾರ ಸಂದೇಶ್ ಹೋರಾಟದ ಮೂಲಕ ಆಕ್ರಮವಾಗಿ ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡಿದ್ದ ಸೋಮಲಾಪುರ ಮತ್ತು ಕೊತ್ತಕೋಟೆಯಲ್ಲಿನ ಜಮೀನು ತೆರವುಗೊಳಿಸಿದ್ದಾರೆ.ಆದರೆ ತಪ್ಪು ಮಾಡಿರುವ ಅಲ್ಲಿನ ಸಂಬಂಧಪಟ್ಟ ಅಧಿಕಾರಿಗಳ ವಿರುದ್ದ ಶಾಸಕರು ಏಕೆ ಕ್ರಮಕ್ಕೆ ಮುಂದಾಗಿಲ್ಲ ಎಂದು ಪ್ರಶ್ನಿಸಿದರು.
ಪೂವುಲವಾರಿಪಲ್ಲಿ ಗ್ರಾಮದ ಬಳಿ ಕೋಟ್ಯಾಂತರ ಬೆಲೆ ಬಾಳುವ ಭೂ ಹಗರಣದ ವಿಚಾರದಲ್ಲಿ ವಿರೋಧ ಪಕ್ಷಗಳ ಬಾಯಿಗೆ ತುತ್ತಾಗುವ ಮೊದಲೇ ಶಾಸಕರು ಕಂದಾಯ ಇಲಾಖೆ ಅಧಿಕಾರಿಗಳನ್ನ ಅಮಾನತ್ತು ಮಾಡಿದ್ದಾರೆ. ಆದರೆ ತಹಸೀಲ್ದಾರ್ ವಿರುದ್ದ ಏಕೆ ಇನ್ನೂ ಕ್ರಮಗೈಗೊಂಡಿಲ್ಲ, ಇದೇ ತಹಸೀಲ್ದಾರ್ ಮೂಲಕ ನೀವು ನಿಮ್ಮ ಬೇನಾಮಿ ಹೆಸರಿನಲ್ಲಿ ಎಷ್ಟು ಸರ್ಕಾರಿ ಜಮೀನು ಲೂಟಿ ಹೊಡೆದಿರುವ ಬಗ್ಗೆ ಹಾಗೂ ರೈತರ ಹಣ ಬಿಡುಗಡೆಗೆ 10 ಲಕ್ಷ ರು.ಗಳ ಲಂಚ ನೀಡಬೇಕು ಇದಕ್ಕೂ ನಮ್ಮ ಬಳಿ ದಾಖಲೆ ಇದೆ, ನಿಮ್ಮ ಹಗರಣಗಳ ಬಗ್ಗೆ ಮುಂದಿನ ದಿನಗಳಲ್ಲಿ ದಾಖಲೆಗಳ ಸಮೇತವಾಗಿ ಜನರ ಮುಂದೆ ಬಿಚ್ಚಿಡುತ್ತೇನೆ. ತಪ್ಪು ಮಾಡಿದ ಅಧಿಕಾರಿಗಳು ಯಾವುದೇ ಮುಲಾಜಿಲ್ಲದೆ ಜೈಲಿಗೆ ಹೋಗುವುದು ಗ್ಯಾರೆಂಟಿ ಎಂದರು.ಕ್ಷೇತ್ರದ ಅಭಿವೃದ್ಧಿ ಕಡೆ ಶಾಸಕರು ಕಾಳಜಿ ವಹಿಸುತ್ತಿಲ್ಲ ಆದರೆ ಬಾರ್ ಗಳಿಗೆ ರಾಜನಾಗಿರುವ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ರವರಿಗೆ ರಾಜ್ಯ ಸರ್ಕಾರ ಎಂ.ಎಸ್.ಐ.ಎಲ್ ಅಧ್ಯಕ್ಷ ಸ್ಥಾನ ನೀಡಿದೆ. ಮುಂದಿನ ದಿನಗಳಲ್ಲಿ ಈ ಕ್ಷೇತ್ರದಲ್ಲಿ ಊರಿಗೊಂದು ಬಾರ್ ಓಪನ್ ಮಾಡುತ್ತಾರೆ ಎಂದು ವ್ಯಂಗ್ಯವಾಡಿದರು.
ಈ ಹಿಂದೆ ದಿ. ಜಿ.ವಿ. ಶ್ರೀರಾಮರೆಡ್ಡಿ ಮತ್ತು ಎನ್.ಸಂಪಂಗಿ ರವರು ಶಾಸಕರಾಗಿದ್ದಾಗ ಒಂದೇ ಒಂದು ಕುಂಟೆ ಜಮೀನು ಮಾಡಿಲ್ಲ, ಅವರು ಬಡವರಿಗೆ ನಿವೇಶನ ಕೊಟ್ಟಿದ್ದಾರೆ, ಕ್ಷೇತ್ರದಲ್ಲಿ ಶಾಶ್ವತ ಅಭಿವೃದ್ದಿ ಕೆಲಸಗಳನ್ನು ಮಾಡಿದ್ದಾರೆ. ನಿಮ್ಮಂತೆ ಅವರೇನಾದರೂ ಲೂಟಿ ಮಾಡಿದ್ದಾರಾ ಎಂದು ಪ್ರಶ್ನಿಸಿದ ಅವರು ಪಟ್ಟಣದಲ್ಲಿ ಕೋಟ್ಯಾಂತರ ರೂ.ಗಳ ವೆಚ್ಚದಲ್ಲಿ ನಿರ್ಮಾಣವಾಗಿರುವ ಅಂಬೇಡ್ಕರ್ ಭವನ ಕಳಪೆ ಕಾಮಗಾರಿ ನಡೆಯುತ್ತಿದ್ದರೂ ಶಾಸಕರು ಮೌನಕ್ಕೆ ಶರಣಾಗಿದ್ದಾರೆ ಎಂದು ಆರೋಪಿಸಿದರು.ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಮಂಡಲಾಧ್ಯಕ್ಷ ಆರ್.ಪ್ರತಾಪ್ ಪಕ್ಷದ ಹಿರಿಯ ಮುಖಂಡ ಕೆ.ಆರ್.ಅಂಜಿನಪ್ಪ, ಜಿ.ವಿ.ಕೃಷ್ಣಯ್ಯ, ಕೆ.ಟಿ.ವೀರಾಜನೇಯಲು, ಚಿಕ್ಕಪೂಜಪ್ಪ, ರಾಮಪ್ಪ ಮತ್ತಿತರರು ಇದ್ದರು.
29ಬಿಜಿಪಿ-1: ಬಾಗೇಪಲ್ಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಕಾರ್ಯದರ್ಶಿ ಸಿ.ಮುನಿರಾಜು ಮಾತನಾಡಿದರು.