ಜಗಳೂರು ತಾಲೂಕಿನ ದಿದ್ದಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉರ್ಲುಕಟ್ಟೆ ಗ್ರಾಮದಲ್ಲಿ ಕುಡಿಯುವ ನೀರಿನ ಅಭಾವ ತೀವ್ರಗೊಂಡಿದೆ. ಇದಕ್ಕೆ ಕಾರಣವಾದ ನೀರಗಂಟಿ ಬಸವರಾಜ್ ನಿರ್ಲಕ್ಷ್ಯ ಧೋರಣೆ ವಿರುದ್ಧ ಆಕ್ರೋಶಗೊಂಡ ನೂರಾರು ಮಹಿಳೆಯರು ಖಾಲಿ ಕೊಡಪಾನಗಳೊಂದಿಗೆ ದಿದ್ದಿಗೆ ಗ್ರಾಮ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ನಡೆಸಿದರು.

- ನೀರಿದ್ದರೂ ಪೂರೈಸದ ನೀರಗಂಟೆ ವಜಾಕ್ಕೆ ಉರ್ಲುಕಟ್ಟೆ ಮಹಿಳೆಯರ ಆಗ್ರಹ ।

- ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸುವುದಾಗಿ ಪಿಡಿಒ ರಾಘವೇಂದ್ರ ಭರವಸೆ

- - -

ಕನ್ನಡಪ್ರಭ ವಾರ್ತೆ ಜಗಳೂರು

ತಾಲೂಕಿನ ದಿದ್ದಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉರ್ಲುಕಟ್ಟೆ ಗ್ರಾಮದಲ್ಲಿ ಕುಡಿಯುವ ನೀರಿನ ಅಭಾವ ತೀವ್ರಗೊಂಡಿದೆ. ಇದಕ್ಕೆ ಕಾರಣವಾದ ನೀರಗಂಟಿ ಬಸವರಾಜ್ ನಿರ್ಲಕ್ಷ್ಯ ಧೋರಣೆ ವಿರುದ್ಧ ಆಕ್ರೋಶಗೊಂಡ ನೂರಾರು ಮಹಿಳೆಯರು ಖಾಲಿ ಕೊಡಪಾನಗಳೊಂದಿಗೆ ದಿದ್ದಿಗೆ ಗ್ರಾಮ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ನಡೆಸಿದರು.

ಪಂಚಾಯಿತಿ ಆವರಣದಲ್ಲಿ ಜಮಾಯಿಸಿದ ನೂರಾರು ಮಹಿಳೆಯರು ಖಾಲಿ ಕೊಡಪಾನಗಳನ್ನು ಪ್ರದರ್ಶಿಸುತ್ತಾ, "ನೀರು ಕೊಡಿ... ನೀರು ಕೊಡಿ... " ಎಂದು ಗಟ್ಟಿಯಾಗಿ ಘೋಷಣೆಗಳ ಮೊಳಗಿಸಿದರು. ಅಲ್ಲದೆ, ಗ್ರಾಮದಲ್ಲಿ ನೀರು ಪೂರೈಕೆಗೆ ಅಗತ್ಯ ಸೌಲಭ್ಯಗಳಿದ್ದರೂ ನೀರಗಂಟಿ ಸರಿಯಾಗಿ ಕುಡಿಯುವ ನೀರು ಸರಬರಾಜು ಮಾಡುತ್ತಿಲ್ಲ. ಕರ್ತವ್ಯದಲ್ಲಿ ಬೇಜವಾಬ್ದಾರಿ ತೋರುತ್ತಿರುವ ನೀರಗಂಟಿಯನ್ನು ತಕ್ಷಣವೇ ಕೆಲಸದಿಂದ ತೆಗೆದುಹಾಕಿ, ಆ ಜಾಗಕ್ಕೆ ಹೊಸಬರನ್ನು ನೇಮಕ ಮಾಡಬೇಕೆಂದು ಪಟ್ಟುಹಿಡಿದರು. ಪಂಚಾಯತಿ ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ಅವರಿಗೆ ಮನವಿ ಸಲ್ಲಿಸಿ, ಸಮಸ್ಯೆ ಶೀಘ್ರ ಬಗೆಹರಿಸಲು ಆಗ್ರಹಿಸಿದರು.

​ಪಿಡಿಒ ರಾಘವೇಂದ್ರ ಭರವಸೆ:

ಮನವಿ ಸ್ವೀಕರಿಸಿದ ಪಿಡಿಒ ರಾಘವೇಂದ್ರ ಮಾತನಾಡಿ, "ಉರ್ಲುಕಟ್ಟೆ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವುದು ಗಮನಕ್ಕೆ ಬಂದಿದೆ. ಗ್ರಾಮದ ಪ್ರತಿಯೊಂದು ಬೀದಿ ಹಾಗೂ ಏರಿಯಾಗಳಿಗೆ ಸರಿಯಾಗಿ ನೀರು ತಲುಪಲು ಅಗತ್ಯವಿರುವ ಕಡೆ ವಾಲ್ವ್‌ಗಳನ್ನು ಅಳವಡಿಸಿ, ತಕ್ಷಣವೇ ನೀರು ಪೂರೈಸುವಂತೆ ನೀರಗಂಟಿ ಬಸವರಾಜಪ್ಪಗೆ ಸ್ಪಷ್ಟ ಸೂಚನೆ ನೀಡಲಾಗಿದೆ. ಇದಲ್ಲದೇ, ಗ್ರಾಮದ ಮತ್ತೊಂದು ಕೊಳವೆಬಾವಿಗೆ (ಬೋರ್‌ವೆಲ್) ಶೀಘ್ರದಲ್ಲೇ ಮೋಟಾರ್ ಅಳವಡಿಸಿ ಸಮರ್ಪಕ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಎಲ್ಲ ವ್ಯವಸ್ಥೆಗಳನ್ನು ಮಾಡಿದ ಮೇಲೆಯೂ ನೀರಗಂಟಿ ಸರಿಯಾಗಿ ನೀರು ಪೂರೈಸದಿದ್ದರೆ ಆತನ ವಿರುದ್ಧ ಕಾನೂನು ಹಾಗೂ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ನಾನೇ ಖುದ್ದಾಗಿ ಉರ್ಲುಕಟ್ಟೆ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಕುಡಿಯುವ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಇತ್ಯರ್ಥಪಡಿಸುತ್ತೇನೆ ಎಂದು ಪ್ರತಿಭಟನಾಕಾರರಿಗೆ ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಉರ್ಲುಕಟ್ಟೆ ಗ್ರಾಮದ ಮುಖಂಡ ಲಿಂಗನಗೌಡ, ಬಸವರಾಜ್‌, ನಾಗರಾಜ್‌ ಸೇರಿದಂತೆ ನೂರಾರು ಮಹಿಳೆಯರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.

- - -

-26 ಜೆ.ಜಿ.ಎಲ್.1:

ಜಗಳೂರು ತಾಲೂಕಿನ ದಿದ್ದಿಗೆ ಗ್ರಾಪಂ ವ್ಯಾಪ್ತಿಯ ಉರ್ಲುಕಟ್ಟೆಯಲ್ಲಿ ಸಮರ್ಪಕ ಕುಡಿಯುವ ನೀರು ಪೂರೈಕೆ ಹಾಗೂ ಬೇಜವಾಬ್ದಾರಿ ನೀರಗಂಟಿ ಬಸವರಾಜ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ನೂರಾರು ಮಹಿಳೆಯರು ಖಾಲಿ ಕೊಡಗಳೊಂದಿಗೆ ದಿದ್ದಿಗಿ ಗ್ರಾಪಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.