ಸರ್ಕಾರಿ ವೈದ್ಯಾಧಿಕಾರಿಗಳು, ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯ ವಿವಿಧ ಬೇಡಿಕೆ ಈಡೇರಿಕೆಗೆ ಸರ್ಕಾರ ಒಪ್ಪಿಗೆ ಸೂಚಿಸಿರುವ ಹಿನ್ನೆಲೆಯಲ್ಲಿ ಮಾ.11 ಬುಧವಾರದಿಂದ ಕರೆ ನೀಡಿದ್ದ ಓಪಿಡಿ ಬಂದ್‌ ಹಾಗೂ ಮುಷ್ಕರವನ್ನು ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಹಿಂಪಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಸರ್ಕಾರಿ ವೈದ್ಯಾಧಿಕಾರಿಗಳು, ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯ ವಿವಿಧ ಬೇಡಿಕೆ ಈಡೇರಿಕೆಗೆ ಸರ್ಕಾರ ಒಪ್ಪಿಗೆ ಸೂಚಿಸಿರುವ ಹಿನ್ನೆಲೆಯಲ್ಲಿ ಮಾ.11 ಬುಧವಾರದಿಂದ ಕರೆ ನೀಡಿದ್ದ ಓಪಿಡಿ ಬಂದ್‌ ಹಾಗೂ ಮುಷ್ಕರವನ್ನು ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಹಿಂಪಡೆದಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ ಸೇರಿ ಇತರರು ವೈದ್ಯಾಧಿಕಾರಿಗಳ ಸಂಘದ ಜತೆ ಮಂಗಳವಾರ ಸಂಜೆ ಸಭೆ ನಡೆಸಿದರು. ಸಭೆಯಲ್ಲಿ ನಡೆದ ಸಂಧಾನ ಮಾತುಕತೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಮುಷ್ಕರ ವಾಪಸ್‌ ಪಡೆದಿರುವುದಾಗಿ ತಿಳಿದುಬಂದಿದೆ.

ಸಮರ್ಪಕ ಔಷಧ ಪೂರೈಕೆ, ಜ್ಯೇಷ್ಠತಾ ಪಟ್ಟಿ ಪರಿಷ್ಕರಣೆ, ವರ್ಗಾವಣೆ ನೀತಿ, ಖಾಲಿ ಹುದ್ದೆ ಭರ್ತಿ, ವೈದ್ಯರ ಮೇಲಿನ ದೌರ್ಜನ್ಯ ತಪ್ಪಿಸುವುದು ಸೇರಿ ವಿವಿಧ ಬೇಡಿಕೆ ಇತ್ಯರ್ಥಕ್ಕೆ ಆಗ್ರಹಿಸಿ ಸಂಘವು ಮಾ.11 ರಿಂದ ಮಾ.15ರವರೆಗೆ ಓಪಿಡಿ ಸೇವೆ ಬಂದ್ ಮಾಡಿ ಮುಷ್ಕರ ನಡೆಸುವುದಾಗಿ ಎಚ್ಚರಿಕೆ ನೀಡಿತ್ತು.

ಒಂದೊಮ್ಮೆ ಮಾ.15ರ ಒಳಗಾಗಿಯೂ ಸ್ಪಂದಿಸದಿದ್ದರೆ ಮಾ.16 ರಿಂದ ತುರ್ತು ಸೇವೆಯನ್ನೂ ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರವು ತರಾತುರಿಯಲ್ಲಿ ಸಂಧಾನಕ್ಕೆ ತೆರಳಿದೆ.

ಬಹುತೇಕ ಬೇಡಿಕೆಗೆ ಒಪ್ಪಿಗೆ:

ಸಂಧಾನಸಭೆ ಕುರಿತು ಮಾಹಿತಿ ನೀಡಿದ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ ಡಾ.ರವೀಂದ್ರನಾಥ್‌ ಎಂ.ಮೇಟಿ ಅವರು, ನಮ್ಮ ಬಹುತೇಕ ಬೇಡಿಕೆಗಳನ್ನು ಕಾಲಮಿತಿಯಲ್ಲಿ ಈಡೇರಿಸಲು ಆರೋಗ್ಯ ಇಲಾಖೆ ಒಪ್ಪಿಗೆ ನೀಡಿದೆ.

ಇನ್ನು ಕರ್ತವ್ಯದ ಬಳಿಕ ಖಾಸಗಿ ಆಸ್ಪತ್ರೆಗಳಲ್ಲಿ ಪ್ರಾಕ್ಟಿಸ್‌ ಮಾಡುವ ವೇಳೆ ಒಳ ರೋಗಿಗೆ ಚಿಕಿತ್ಸೆ ನೀಡಲು ಹಾಕಿರುವ ನಿರ್ಬಂಧ ಹಿಂಪಡೆಯಲು ಸದ್ಯಕ್ಕೆ ಒಪ್ಪಿಲ್ಲ. ಅದನ್ನು ಪರಿಶೀಲನೆ ನಡೆಸುತ್ತೇವೆ ಎಂದು ಹೇಳಿದ್ದಾರೆ.

ಇನ್ನು ಆರೋಗ್ಯ ಇಲಾಖೆ ಮಟ್ಟದಲ್ಲಿ ಪ್ರಮುಖ ನಿರ್ಧಾರ ಮಾಡುವಾಗ ತಾಂತ್ರಿಕ ನೈಪುಣ್ಯತೆ ಹಾಗೂ ವಿಷಯ ಜ್ಞಾನ ಇರುವವರು ಬೇಕು. ಹೀಗಾಗಿ ಲೋಕೋಪಯೋಗಿ ಇಲಾಖೆ ಮಾದರಿಯಲ್ಲಿ ತಾಂತ್ರಿಕ ನೈಪುಣ್ಯವಿರುವ ವೈದ್ಯಾಧಿಕಾರಿ ಒಬ್ಬರನ್ನು ಕಾರ್ಯದರ್ಶಿ ಸ್ಥಾನಕ್ಕೆ ನೇಮಿಸುವ ಭರವಸೆ ಸಿಕ್ಕಿದೆ ಎಂದು ಹೇಳಿದರು.

ಈ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಪಷ್ಟತೆ ನೀಡಲು ನಿರಾಕರಿಸಿದ್ದು, ಆರೋಗ್ಯ ಇಲಾಖೆ ಕಾರ್ಯದರ್ಶಿ ಸ್ಥಾನಕ್ಕೆ ಹಿರಿಯ ವೈದ್ಯಾಧಿಕಾರಿ ನೇಮಕಕ್ಕೆ ತೀರ್ಮಾನಿಸಿಲ್ಲ. ಬದಲಿಗೆ ಆರೋಗ್ಯ ಇಲಾಖೆ ಕಾರ್ಯದರ್ಶಿಯ ಸಲಹೆಗಾರ ಸ್ಥಾನಕ್ಕೆ ವೈದ್ಯಾಧಿಕಾರಿ ಅಥವಾ ನಿವೃತ್ತ ವೈದ್ಯಾಧಿಕಾರಿ ನೇಮಿಸಲು ಒಪ್ಪಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಬಗ್ಗೆ ಸ್ಪಷ್ಟತೆ ದೊರೆತಿಲ್ಲ.

ಜ್ಯೇಷ್ಟತಾ ಪಟ್ಟಿ ಪರಿಷ್ಕರಣೆ, ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿಗಳನ್ನು ಸಮರ್ಕವಾಗಿ ಪೂರೈಸುವುದು, ವೃಂದ ಮತ್ತು ನೇಮಕಾತಿ ನಿಮಯ ತಿದ್ದುಪಡಿ ಮಾಡುವುದು, ಇಲಾಖೆಯ ಎಲ್ಲ ವೃಂದಗಳ ಜೇಷ್ಠತಾ ಪಟ್ಟಿಯನ್ನು ಕಾಲ ಕಾಲಕ್ಕೆ ಪ್ರಕಟಿಸುವುದು, ವೈದ್ಯಕೀಯ ಶಿಕ್ಷಣ ಇಲಾಖೆಯ ಸ್ವಾಯತ್ತ ಸಂಸ್ಥೆಗಳಲ್ಲಿ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ, ಮಹಾನಗರ ಪಾಲಿಕೆ, ನಗರ ಪಾಲಿಕೆಗಳಲ್ಲಿ ಮಂಜೂರಾಗಿರುವ ಆರೋಗ್ಯ ಇಲಾಖೆಯ ಎನ್‌-ಕೇಡರ್‌ ಹುದ್ದೆಗಳಿಗೆ ನೇಮಕಾತಿ, ಮುಂಬಡ್ತಿ ಮತ್ತು ವರ್ಗಾವಣೆಗಳಿಗೆ ಆರೋಗ್ಯ ಇಲಾಖೆಯ ವೈದ್ಯರು, ಅಧಿಕಾರಿ, ನೌಕರರನ್ನೇ ನಿಯೋಜಿಸಬೇಕು.

ಜತೆಗೆ ಖಾಲಿಯಿರುವ ವೈದ್ಯರು, ಅರೆ ವೈದ್ಯಕೀಯ ಹಾಗೂ ಇತರೆ ವೃಂದದ ಹುದ್ದೆಗಳನ್ನು ಕಾಲಮಿತಿಯಲ್ಲಿ ಹಂತ-ಹಂತವಾಗಿ ಭರ್ತಿ ಮಾಡಬೇಕು, ಗುತ್ತಿಗೆ ವೈದ್ಯರು, ನೌಕರರು ಹಾಗೂ ಎನ್‌ಎಚ್‌ಎಂ ಗುತ್ತಿಗೆ ನೌಕರರಿಗೆ ಸೇವಾ ಭದ್ರತೆ ಹಾಗೂ ಕಾಲಕಾಲಕ್ಕೆ ಸೂಕ್ತ ವೇತನ ಹೆಚ್ಚಳ ಮಾಡುವ ಬೇಡಿಕೆಗೂ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ತಿಳಿದುಬಂದಿದೆ.

-ಕೋಟ್-

ನಮ್ಮ ಸಂಘದ ಬೇಡಿಕೆಗಳಿಗೆ ಸರ್ಕಾರ ಬಹುತೇಕ ಒಪ್ಪಿಗೆ ಸೂಚಿಸಿದೆ. ಹೀಗಾಗಿ ಮಾ.11 ರಿಂದ ಕರೆ ನೀಡಿದ್ದ ಓಪಿಡಿ ಸೇವ್‌ ಬಂದ್‌ ಹಾಗೂ ಮುಷ್ಕರವನ್ನು ಕೂಡಲೇ ಹಿಂಪಡೆಯುತ್ತಿದ್ದೇವೆ.

- ಡಾ.ರವೀಂದ್ರನಾಥ್‌ ಮೇಟಿ, ಅಧ್ಯಕ್ಷರು, ಕರ್ನಾಟಕ ರಾಜ್ಯ ವೈದ್ಯಾಧಿಕಾರಿಗಳ ಸಂಘ