ಕನ್ನಡಪ್ರಭ ವಾರ್ತೆ ಭಟ್ಕಳ
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ ಬಜೆಟ್ ಉತ್ತರ ಕನ್ನಡಕ್ಕೆ ವರದಾನವಾಗಿದ್ದು, ಜನಸಾಮಾನ್ಯರು, ಮೀನುಗಾರರು, ಬಡವರಿಗೆ ಅನುಕೂಲಕರವಾದ ಬಜೆಟ್ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಉತ್ತರ ಕನ್ನಡ ಜಿಲ್ಲೆ ಪ್ರವಾಸೋದ್ಯಮ ಜಿಲ್ಲೆಯಾಗಿದ್ದು, ಇಲ್ಲಿ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ಹಾಗೂ ಪ್ರಾಶಸ್ತ್ಯ ನೀಡುವಲ್ಲಿ ಮುಖ್ಯಮಂತ್ರಿಗಳು ಕ್ರಮ ಕೈಗೊಂಡಿದ್ದಾರೆ. ಜಿಲ್ಲೆಯ ಪ್ರವಾಸೋಧ್ಯಮಕ್ಕೆ ಹೊಸ ಆಯಾಮ ನೀಡಲು ಚಿಂತನೆ ನಡೆಸಿದ್ದು, ಜಿಲ್ಲೆಯಲ್ಲಿ ಒಂದು ಪ್ರವಾಸೋಧ್ಯಮ ಕೇಂದ್ರವನ್ನು ತೆರೆದು ಆ ನಿಟ್ಟಿನಲ್ಲಿ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು. ಉತ್ತರ ಕನ್ನಡ ಜಿಲ್ಲೆಯ ಬಹು ವರ್ಷಗಳ ಬೇಡಿಕೆಯಾದ ಸುಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಬಜೆಟ್‌ನಲ್ಲಿ ₹೧೦೦ ಕೋಟಿ ಘೋಷಣೆ ಮಾಡುವ ಮೂಲಕ ಮುಖ್ಯಮಂತ್ರಿಗಳು ಜಿಲ್ಲೆಯ ಜನತೆಯ ಬೇಡಿಕೆ ಈಡೇರಿಸಿದ್ದಾರೆ. ಸೂಪರ್ ಸ್ಪೆಷಾಲಿಟಿ ಅಸ್ಪತ್ರೆಗೆ ಬೇಕಾದ ಹೆಚ್ಚುವರಿ ಬಜೆಟ್ ಮುಂದಿನ ದಿನಗಳಲ್ಲಿ ಮಂಜೂರಿ ಮಾಡುವವರಿದ್ದು, ಪ್ರಸ್ತುತ ಕಾಮಗಾರಿಯನ್ನು ಆರಂಭಿಸಲು ಯಾವುದೇ ತೊಂದರೆಯಾಗದು. ಜಿಲ್ಲೆಯ ಜನತೆಗೆ ಬಹುದೊಡ್ಡ ಕೊಡುಗೆಯನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ ಎಂದರು. ಮೀನುಗಾರಿಕಾ ಇಲಾಖೆಯಿಂದ ಮಂಗಳೂರು ಮೀನುಗಾರಿಕಾ ಕಾಲೇಜಿನಲ್ಲಿ ಒಂದು ಕೇಂದ್ರ ತೆರೆಯಲು ಬಜೆಟ್‌ನಲ್ಲಿ ಹಣ ಮೀಸಲಿಟ್ಟಿದ್ದು ಇನ್ನು ಮುಂದೆ ಇದೇ ಕೇಂದ್ರದ ಮೂಲಕ ಮೀನುಗಾರಿಕಾ ಅಭಿವೃದ್ಧಿ, ಮೀನುಗಾರರ ಸಂಕಷ್ಟದ ಕುರಿತು ಚಿಂತನೆ, ಮೀನು ಉತ್ಪಾದನೆ, ಮೀನುಗಾರಿಕೆಯಲ್ಲಿ ಬರುವ ತೊಂದರೆಯ ಕುರಿತು ಚರ್ಚಿಸಲು ಹಾಗೂ ಸಮಗ್ರ ಮೀನುಗಾರಿಕಾ ಅಭಿವೃದ್ಧಿಗೆ ಈ ಕೇಂದ್ರ ಸಹಕಾರಿಯಾಗಲಿದೆ ಒಟ್ಟಾರೆ ಜಿಲ್ಲೆಯ ಜನತೆಗೆ ಇದೊಂದು ಉತ್ತಮ ಬಜೆಟ್ ಆಗಿದೆ ಎಂದೂ ಮಂಕಾಳ ವೈದ್ಯ ಹೇಳಿದ್ದಾರೆ.