ಲವ್ ಜಿಹಾದ್ ಹೆಸರಲ್ಲಿ ನೇಹಾ ಕಗ್ಗೊಲೆ: ಆರ್‌. ಅಶೋಕ್

| Published : Apr 23 2024, 12:47 AM IST

ಸಾರಾಂಶ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲದಂತಾಗಿದೆ. ಹುಬ್ಬಳ್ಳಿಯ ನೇಹಾ ಹಿರೇಮಠ ಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್ ಅಪರಾಧಿ ಸ್ಥಾನದಲ್ಲಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹೇಳಿದರು.

ಕನ್ನಡಪ್ರಭ ವಾರ್ತೆ ತುಮಕೂರು

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲದಂತಾಗಿದೆ. ಹುಬ್ಬಳ್ಳಿಯ ನೇಹಾ ಹಿರೇಮಠ ಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್ ಅಪರಾಧಿ ಸ್ಥಾನದಲ್ಲಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹೇಳಿದರು.

ನಗರದ ಟೌನ್‌ಹಾಲ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಹುಬ್ಬಳ್ಳಿಯ ನೇಹಾ ಹಿರೇಮಠ್ ಹತ್ಯೆ ಖಂಡಿಸಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಮಾತನಾಡಿದರು. ಕಾಂಗ್ರೆಸ್‌ ಮುಸ್ಲಿಂ ಯುವಕರಿಗೆ ಹಣ ಕೊಟ್ಟು ತರಬೇತಿ ನೀಡಿ ಕಳುಹಿಸುತ್ತಿರುವುದು ಲವ್ ಜಿಹಾದ್ ಅಲ್ಲದೇ ಬೇರೇನು. ಈ ಪ್ರಕರಣವನ್ನು ಕಾಂಗ್ರೆಸ್‌ ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದೆ. ಇದರಲ್ಲಿ ರಾಜಕಾರಣ ತರುವ ಪ್ರಯತ್ನವನ್ನು ನಡೆಸುತ್ತಿದ್ದಾರೆ ಎಂದು ದೂರಿದರು.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ನಕ್ಸಲಿಸಂ, ಭಯೋತ್ಪಾದನೆ, ಲವ್ ಜಿಹಾದ್ ಬಂತು. ಲವ್ ಜಿಹಾದ್ ಹೆಸರಲ್ಲಿ ನೇಹಾ ಕಗ್ಗೊಲೆಯಾಗಿದೆ. ಇದನ್ನು ಇಡೀ ದೇಶವೇ ನೋಡುತ್ತಿದೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಇದನ್ನು ಲವ್ ಕೇಸು ಎನ್ನುತ್ತಾರೆ. ಇವರಿಗೆ ಲವ್ ಮತ್ತು ಲವ್ ಜಿಹಾದ್ ಎಂದರೇನು ಎಂಬ ಬಗ್ಗೆ ಸಾಮಾನ್ಯ ಜ್ಞಾನ ಇಲ್ಲ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದೂಗಳ ವಿರೋಧ ಮಾಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಮುಸ್ಲಿಂರು ಬೆಂಕಿ ಹಚ್ಚಿದ್ದರು. ಆಗ ಕಾಂಗ್ರೆಸ್‌ ಬಾಯಿ ಮುಚ್ಚಿಕೊಂಡು ಸುಮ್ಮನಾಗಿದ್ದರು. ಮುಸ್ಲಿಂರ ವಿಚಾರ ಬಂದಾಗ ಯಾರಿಗೆ ತೊಂದರೆಯಾದರೂ ಸುಮ್ಮನಾಗುತ್ತಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮೌನ ರಾಮಯ್ಯ ಆಗುತ್ತಾರೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮುಸ್ಲಿಂ ಯುವಕರನ್ನು ಬ್ರದರ್ಸ್ ಎಂದು ಹೇಳುತ್ತಾರೆ. ಶಿವಕುಮಾರ್ ಅವರೇ ಸಿಸ್ಟರ್ ರಕ್ಷಣೆಗೂ ಗಮನಹರಿಸಿ ಎಂದು ಹೇಳಿದರು.

ದೇಶವನ್ನು ಇಬ್ಭಾಗ ಮಾಡಲು ಕಾಂಗ್ರೆಸ್ ನಾಯಕರು ಹೊರಟಿದ್ದಾರೆ. ನೇಹಾ ಕೊಲೆ ವಿಚಾರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನಾಚಿಕೆ, ಮಾನ ಮರ್ಯಾದೆ ಏನೂ ಇಲ್ಲದಂತಾಗಿದೆ. ಬೇರೆಯವರು ಮುಖ್ಯಮಂತ್ರಿಯಾಗಿದ್ದರೆ ನೈತಿಕೆ ಹೊಣೆ ಹೊತ್ತು ರಾಜೀನಾಮೆ ಕೊಡುತ್ತಿದ್ದರು. ಸಿದ್ದರಾಮಯ್ಯಗೆ ಮಾನ ಮರ್ಯಾದೆ ಏನೂ ಇಲ್ಲ ಎಂದು ವಾಗ್ದಾಳಿ ನಡೆಸಿದರು. ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲ: ಇಡೀ ರಾಜ್ಯದಲ್ಲಿ ಒಂದು ರೀತಿ ಭಯೋತ್ಪಾದನಾ ಚಟುವಟಿಕೆ ನಡೆಯುತ್ತಿದೆ. ಹುಬ್ಬಳ್ಳಿಯಲ್ಲಿ ನಡೆದಿರುವ ಘಟನೆ ಕುರಿತು ನೇಹಾ ತಂದೆ-ತಾಯಿ ಇದೇ ರೀತಿ ಮುಸ್ಲಿರನ್ನು ಓಲೈಕೆ ಮಾಡಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ. ಈ ನಾಡಿನ ಹೆಣ್ಣು ಮಕ್ಕಳಿಗೆ ರಕ್ಷಣೆಯೇ ಇಲ್ಲದಂತಾಗಿದೆ. ಇಂದು ಕಾಂಗ್ರೆಸ್ ಪಕ್ಷ ನಕ್ಸಲರನ್ನು, ಭಯೋತ್ಪಾದಕರನ್ನು ಬೆಂಬಲಿಸುವುದು, ವೋಟಿಗೋಸ್ಕರ ಏನು ಬೇಕಾದರೂ ಮಾಡುತ್ತೇವೆ ಎಂದು ಹೇಳುತ್ತಿರುವುದು ಆತಂಕಕಾರಿಯಾಗಿದೆ ಎಂದರು.

ಕಾಂಗ್ರೆಸ್ ಕರ್ನಾಟಕವನ್ನು ಗೂಂಡಾ ರಾಜ್ಯವನ್ನಾಗಿ ಮಾಡಿದೆ. ಇಲ್ಲಿ ತೊಘಲಕ್ ದರ್ಬಾರ್ ನಡೆಸುತ್ತಿದೆ. ಇದು ತಾಲಿಬಾನ್ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮುಸ್ಲಿಮರಿಗೆ ನೀವು ಏನು ಬೇಕಾದರೂ ಮಾಡಿ, ನಿಮ್ಮನ್ನು ರಕ್ಷಣೆ ಮಾಡುತ್ತೇವೆ ಎಂದು ಹೇಳುತ್ತಾರೆ. ಕೇಸುಗಳನ್ನು ವಾಪಸ್ ತೆಗೆಯುತ್ತಾರೆ ಎಂದು ಗುಡುಗಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಅಪರಾಧ ಮಾಡಿದವರಿಗೆ ಗುಂಡು ಹಾಕಲು ಇವರಿಗೆ ಧಮ್ ಇಲ್ಲ, ತಾಕತ್ತಿದ್ದರೆ ಗುಂಡು ಹಾಕಲಿ. ನಮ್ಮ ದೇಶದ ಸಂಪತ್ತನ್ನು ಬೇರೆಯವರಿಗೆ ಕೊಡುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಇಂತಹ ದುರುಳ ಸರ್ಕಾರವನ್ನು ಕಿತ್ತೊಗೆಯ್ಯಬೇಕು. ಲೋಕಸಭಾ ಚುನಾವಣೆ ಮುಗಿದ ಬಳಿಕ ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿಗೆ ನಾವೇ ಒಂದು ಒಳ್ಳೆಯ ಚೊಂಬನ್ನು ಕೊಟ್ಟು ಫಾರಿನ್‌ಗೆ ಫಲಾಯನ ಮಾಡಿಸುತ್ತೇವೆ ಎಂದು ಹೇಳಿದರು.

ಚೊಂಬು ಜಾಹೀರಾತಿನಲ್ಲಿ ಹಿಂದೂಗಳ ರಕ್ತ ತುಂಬಿ ಚೆಲ್ಲುತ್ತಿರುವುದು ಕಾಂಗ್ರೆಸ್‌ ಪ್ರತೀಕವಾಗಿದೆ. ನಾವು ಸಹ ಕಾಂಗ್ರೆಸ್ ವಿರುದ್ದ ಡೇಂಜರ್ ಎಂಬ ರೀತಿಯಲ್ಲಿ ಜಾಹೀರಾತನ್ನು ನೀಡಿದ್ದೇವೆ. ರಾಮೇಶ್ವರ ಕೆಫೆ ಸ್ಫೋಟ, ಜೈಶ್ರೀರಾಮ್ ಘೋಷಣೆ ಕೂಗಿದವರ ಮೇಲೆ ಹಲ್ಲೆ ಮಾಡಿದಾಗಲೂ ಹೋರಾಟ ಮಾಡಿದ್ದೇವೆ ಎಂದರು.

ಎನ್‌ಡಿಎ ಅಭ್ಯರ್ಥಿ ವಿ. ಸೋಮಣ್ಣ ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರ್ಕಾರ ಅರಾಜತೆಯ ಕೂಪವಾಗಿದೆ. ಈ ಸರ್ಕಾರ ನಡೆಸುವವರು ಯಾವುದಕ್ಕೂ ಇನ್ಯಾವೂದನ್ನೋ ಲಿಂಕ್ ಮಾಡುತ್ತಾರೆ. ಕಾನೂನು ಎಲ್ಲರಿಗೂ ಒಂದೇ. ಕಾನೂನು ಪರಿಪಾಲನೆ ಮಾಡಬೇಕಾದ್ದು ನಾಗರಿಕ ಸರ್ಕಾರದ ಕರ್ತವ್ಯ. ಈ ಸರ್ಕಾರ ಸತ್ತಂತಾಗಿದೆ ಎಂದು ಆಕ್ರೋಶ ಹೊರ ಹಾಕಿದರು. ಕಾಲೇಜಿನ ಪ್ರಾಚಾರ್ಯರ ಚೇಂಬರ್ 9 ಬಾರಿ ಹೆಣ್ಣು ಮಗಳಿಗೆ ಇರಿದಿದ್ದಾನೆ, ಎಂದರೆ ರಾಜ್ಯದಲ್ಲಿ ಹಿಂದೂ ಹೆಣ್ಣು ಮಕ್ಕಳಿಗೆ ಎಷ್ಟರ ಮಟ್ಟಿಗೆ ರಕ್ಷಣೆ ಇದೆ ಎಂಬುದನ್ನು ನಾವು ಕೊಂಚೆ ಯೋಚಿಸಬೇಕಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಇತಿ ಮಿತಿಯನ್ನು, ದೂರದೃಷ್ಠಿಯ ಚಿಂತನೆಯನ್ನು ಕಳೆದುಕೊಂಡಿದ್ದಾರೆ. ಈ ಸರ್ಕಾರ ಮುಸ್ಲಿಂರ ಓಲೈಕೆ ಮಾಡುತ್ತಿದೆ. ಆರೋಪಿಯನ್ನು ಗಲ್ಲಿಗೇರಿಸಬೇಕು ಎಂದು ಒತ್ತಾಯಿಸಿದರು.

ಶಾಸಕರಾದ ಸುರೇಶ್‌ ಗೌಡ, ಜ್ಯೋತಿ ಗಣೇಶ್, ಮಾಜಿ ಶಾಸಕ ಬಂಡೆಪ್ಪ ಕಾಶಂಪೂರ್, ಬಿಜೆಪಿ ಜಿಲ್ಲಾಧ್ಯಕ್ಷ ರವಿಶಂಕರ್, ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ. ಆಂಜಿನಪ್ಪ ಇದ್ದರು.