ನೇಹಾಳ ಹತ್ಯೆ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಲು ಒತ್ತಾಯ

| Published : Apr 21 2024, 02:15 AM IST

ನೇಹಾಳ ಹತ್ಯೆ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಲು ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ಹಾವೇರಿ ನಗರದ ಕಾಗಿನಲೆ ಸರ್ಕಲ್‌ನಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಪಿ.ಬಿ. ರೋಡ್ ಮೂಲಕ ಹೊಸಮನಿ ಸಿದ್ದಪ್ಪ ವೃತ್ತಕ್ಕೆ ಬಂದು ಸಮಾವೇಶಗೊಂಡಿತು. ನಂತರ ಘಟನೆಯನ್ನು ಖಂಡಿಸಿ, ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು.

ಕನ್ನಡಪ್ರಭ ವಾರ್ತೆ ಹಾವೇರಿ

ಹುಬ್ಬಳ್ಳಿಯ ಬಿವಿಬಿ ಕಾಲೇಜು ವಿದ್ಯಾರ್ಥಿನಿ ನೇಹಾಳ ಹತ್ಯೆ ಖಂಡಿಸಿ, ತಪ್ಪಿತಸ್ಥ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಲು ಒತ್ತಾಯಿಸಿ ಹಾಗೂ ವಿದ್ಯಾರ್ಥಿನಿಯರು-ಮಹಿಳೆಯರಿಗೆ ಸೂಕ್ತ ಭದ್ರತೆಗಾಗಿ ಒತ್ತಾಯಿಸಿ ಎಸ್‌ಎಫ್‌ಐ ಜಿಲ್ಲಾ ಸಮಿತಿ ನೇತೃತ್ವದಲ್ಲಿ ವಿದ್ಯಾರ್ಥಿನಿಯರು ಶನಿವಾರ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಕಾಗಿನಲೆ ಸರ್ಕಲ್‌ನಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಪಿ.ಬಿ. ರೋಡ್ ಮೂಲಕ ಹೊಸಮನಿ ಸಿದ್ದಪ್ಪ ವೃತ್ತಕ್ಕೆ ಬಂದು ಸಮಾವೇಶಗೊಂಡಿತು. ನಂತರ ಘಟನೆಯನ್ನು ಖಂಡಿಸಿ, ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು.

ಎಸ್‌ಎಫ್‌ಐ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಎಸ್., ಮಾತನಾಡಿ, ವಿದ್ಯಾರ್ಥಿನಿ ನೇಹಾ ಕೊಲೆ ಅಮಾನವೀಯ ಎಸ್‌ಎಫ್‌ಐ ತೀವ್ರವಾಗಿ ಖಂಡಿಸುತ್ತದೆ. ಇಂತಹ ಕೊಲೆಗಳನ್ನು ಮತೀಯ ಕನ್ನಡಕದ ಮೂಲಕ ನೋಡುವ, ರಾಜಕೀಯವಾಗಿ ಬಳಸಿಕೊಳ್ಳುವ ನೀಚತನ, ಷಡ್ಯಂತ್ರಕ್ಕೆ ಜನತೆ ಆಸ್ಪದ ಕೊಡಬಾರದು. ಒಂದಾಗಿ ನಿಂತು ಇಂತಹ ಸ್ಥಿತಿಯ ವಿರುದ್ಧ ಧ್ವನಿ ಎತ್ತಬೇಕು. ರಾಜ್ಯ ಸರ್ಕಾರ ಕೊಲೆ ಆರೋಪಿಗೆ ಕಠಿಣ ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕು.

ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರಿಗೆ, ಮಹಿಳೆಯರಿಗೆ ಸೂಕ್ತ ರಕ್ಷಣೆ ನೀಡಬೇಕು. ಆದರೆ ಇದನ್ನು ರಾಜ್ಯ ಸರ್ಕಾರ ಜಾರಿ ಮಾಡಿಲ್ಲ. ತಕ್ಷಣ ಇದನ್ನು ರಚನೆ ಮಾಡಬೇಕು. ಶಾಲಾ-ಕಾಲೇಜುಗಳಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆಗಳನ್ನು ನಡೆಸಬೇಕು. ಮಹಿಳೆಯರು ರಕ್ಷಣೆ ಹಾಗೂ ಭದ್ರತೆಗಾಗಿ ಮಹಿಳಾ ಕಾನೂನುಗಳನ್ನು ಸಮರ್ಪಕವಾಗಿ ಜಾರಿ ಮಾಡಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.

ವಿದ್ಯಾರ್ಥಿನಿ ರಾಧಿಕಾ ಕಾಟೆನಹಳ್ಳಿ ಮಾತನಾಡಿ, ಈ ಕ್ರೂರ ಘಟನೆ ಭಯದ ವಾತಾವರಣ ನಿರ್ಮಿಸಿದೆ. ವಿದ್ಯಾರ್ಥಿನಿ ನೇಹಾ ಸಾವಿನ ನ್ಯಾಯದ ಕೂಗು ಸೌಜನ್ಯ, ದಾನಮ್ಮ ಸೇರಿದಂತೆ ಸಾವಿರಾರು ಮಂದಿ ದೌರ್ಜನ್ಯಕ್ಕೆ ಒಳಗಾಗಿದ ಮಹಿಳೆಯರ ನ್ಯಾಯಕ್ಕಾಗಿ ಧ್ವನಿ ಎತ್ತಲಿ, ಶಾಲಾ-ಕಾಲೇಜುಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ ಭದ್ರತೆ ನೀಡಬೇಕು ಎಂದರು.

ಸಿಂಚನ ಕೇರಿಮತ್ತಿಹಳ್ಳಿ ಮಾತನಾಡಿ, ಮಹಿಳೆಯರ ಮೇಲೆ ದೌರ್ಜನ್ಯ, ಶೋಷಣೆ, ಕೊಲೆಗಳು ದಿನೇ ದಿನೇ ಹೆಚ್ಚುತ್ತಿದ್ದು ಮಹಿಳೆಯರಿಗೆ, ವಿದ್ಯಾರ್ಥಿನಿಯರಿಗೆ ಸೂಕ್ತ ಭದ್ರತೆ,ರಕ್ಷಣೆ ಇಲ್ಲದೆ ಇರುವುದು ಈ ಘಟನೆಗಳಿಗೆ ಕಾರಣವಾಗಿವೆ. ಆದರಿಂದ ಶಾಲಾ ಕಾಲೇಜು ಆವರಣದಲ್ಲಿ ಪೊಲೀಸ್ ಸಿಬ್ಬಂದಿ ನೇಮಿಸಬೇಕು ಎಂದು ಒತ್ತಾಯಿಸಿ ಉಪತಹಸೀಲ್ದಾರ್‌ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಎಸ್‌ಎಫ್‌ಐ ಜಿಲ್ಲಾ ಮುಖಂಡರಾದ ಪರುಶುರಾಮ ಕೊಪ್ಪಳದರ, ಮಹಾಂತೇಶ ದುರುಗಣ್ಣನವರ, ಅಫ್ಸಾನಾ, ಭೂಮಿಕಾ ಲಮಾಣಿ, ಲಕ್ಷ್ಮೀ ಕೆ.ಎಲ್., ಕಾವೇರಿ ಅಕ್ಕಿ, ರೇಖಾ ಬಣಕಾರ, ಪಿ.ಎಚ್.ಬಾನು, ಅಕ್ಷತಾ ಜಿ., ಸೇರಿದಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ಕೋಟ್..ರಕ್ಷಣೆ ನೀಡಲಿ

ವಿದ್ಯಾರ್ಥಿನಿ ಬರ್ಬರ ಹತ್ಯೆ ಅತ್ಯಂತ ನೋವುಂಟು ಮಾಡಿದೆ. ಈ ಘಟನೆಯನ್ನು ಬೇರೆ ಬೇರೆ ಕಣ್ಣುಗಳಿಂದ ನೋಡಬಾರದು. ಮಾನವೀಯತೆ ದೃಷ್ಟಿಯಿಂದ ಖಂಡನೀಯ. ಮಹಿಳೆಯರಿಗೆ ಸೂಕ್ತ ರಕ್ಷಣೆ ಒದಗಿಸಬೇಕು.

- ಸತೀಶ್ ಕುಲಕರ್ಣಿ, ಸಾಹಿತಿ