ನೇಹಾ ಹತ್ಯೆ; ಸುಧಾರಿಸಿಕೊಂಡ ಕಾಂಗ್ರೆಸ್‌

| Published : Apr 24 2024, 02:20 AM IST

ಸಾರಾಂಶ

ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ನಡೆದ ಹಿಂದೂ ಯುವತಿ ನೇಹಾ ಹಿರೇಮಠ ಹತ್ಯೆ ರಾಜಕೀಯದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿತ್ತು.

ಶಿವಾನಂದ ಗೊಂಬಿ

ಹುಬ್ಬಳ್ಳಿ

ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ನಡೆದ ಹಿಂದೂ ಯುವತಿ ನೇಹಾ ಹಿರೇಮಠ ಹತ್ಯೆ ರಾಜಕೀಯದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿತ್ತು. ಮುಸ್ಲಿಂ ಯುವಕನಿಂದ ಆದ ಹತ್ಯೆ ಬಿಜೆಪಿಗೆ ಚುನಾವಣಾ ಅಸ್ತ್ರವಾಗಿದ್ದರೆ, ಮೊದಲಿಗೆ ತನ್ನ ಹೇಳಿಕೆ, ನಿರ್ಲಕ್ಷ್ಯ ಧೋರಣೆಯಿಂದ ಎಡವಿದ್ದ ಕಾಂಗ್ರೆಸ್‌ ಇದೀಗ ಸಿಐಡಿ ತನಿಖೆ, ವಿಶೇಷ ನ್ಯಾಯಾಲಯ ರಚನೆ ಮಾಡುವ ಮೂಲಕ ಪರಿಸ್ಥಿತಿ ಸುಧಾರಿಸಿಕೊಂಡು ಪ್ರತ್ಯಸ್ತ್ರ ಪ್ರಯೋಗಿಸುತ್ತಿದೆ.

ಇಲ್ಲಿನ ಬಿವಿಬಿ ಕಾಲೇಜ್‌ ಕ್ಯಾಂಪಸ್‌ನಲ್ಲಿ ಹಾಡಹಗಲೇ ನೇಹಾಳನ್ನು ಫಯಾಜ್‌ ಬರೋಬ್ಬರಿ13 ಬಾರಿ ಇರಿದು ಹತ್ಯೆ ಮಾಡಿದ್ದ. ಈ ಘಟನೆ ಇಡೀ ನಗರವಷ್ಟೇ ಅಲ್ಲ ರಾಜ್ಯವೇ ತಲ್ಲಣಗೊಳಿಸಿತ್ತು.

ಕಾಂಗ್ರೆಸ್‌ ಎಡವಟ್ಟು:

ಹಾಗೆ ನೋಡಿದರೆ ಕಾಂಗ್ರೆಸ್‌ ಮುಖಂಡ ಹಾಗೂ ಪಾಲಿಕೆ ಸದಸ್ಯ ನಿರಂಜನಯ್ಯ ಹಿರೇಮಠ ಪುತ್ರಿಯ ಹತ್ಯೆಯಿದು. ಕಾಂಗ್ರೆಸ್‌ನವರು ಮೊದಲು ಹೋಗುತ್ತಾರೆ ಮಗಳನ್ನು ಕಳೆದುಕೊಂಡ ತಂದೆಗೆ ಸಮಾಧಾನ ಮಾಡುತ್ತಾರೆ. ಆತನೊಂದಿಗೆ ಇರುತ್ತಾರೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಇತ್ತ ಘಟನೆ ನಡೆದ ಅರ್ಧಗಂಟೆಯಲ್ಲೇ ಬೆಂಗಳೂರಲ್ಲಿ ಗೃಹ ಸಚಿವ ಜಿ. ಪರಮೇಶ್ವರ ಇದು ಪ್ರೇಮ ಪ್ರಕರಣದಿಂದ ಆಗಿರುವ ಹತ್ಯೆ ಎಂದು ಹೇಳಿಕೆ ನೀಡಿದ್ದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಇದು ವೈಯಕ್ತಿಕ ಕಾರಣಕ್ಕಾಗಿ ನಡೆದ ಕೊಲೆ ಎಂದಿದ್ದರು.

ಇನ್ನು ಹಿರಿಯ ಸಚಿವರಾದ ಎಚ್‌.ಕೆ. ಪಾಟೀಲ, ಸಂತೋಷ ಲಾಡ್‌, ವಿಪ ಮುಖ್ಯಸಚೇತಕ ಸಲೀಂ ಅಹ್ಮದ್‌ ಹುಬ್ಬಳ್ಳಿಯಲ್ಲೇ ಇದ್ದರು. ಆದರೆ ಆವತ್ತು ಅವರು ನಿರಂಜನ ಮನೆಗೆ ಹೋಗುವ ಗೋಜಿಗೆ ಹೋಗಲಿಲ್ಲ. ಹಾಗಂತ ಇವರು ಹೋಗಿಯೇ ಇಲ್ಲ ಅಂತೇನೂ ಇಲ್ಲ. ಲಾಡ್‌, ಸಲೀಂ ಮರುದಿನ ಹೋಗಿ ಸಾಂತ್ವನ ಹೇಳಿದರು. ಎಚ್‌.ಕೆ. ಪಾಟೀಲರು 6ನೇ ದಿನಕ್ಕೆ ಬಂದರು.

ಆದರೆ ಅವತ್ತು ಶಿಗ್ಗಾವಿಯಲ್ಲಿ ಪ್ರಚಾರದಲ್ಲಿದ್ದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶಾಸಕರಾದ ಮಹೇಶ ಟೆಂಗಿನಕಾಯಿ, ಅರವಿಂದ ಬೆಲ್ಲದ ಮೂವರು ಅದೇ ದಿನ ರಾತ್ರಿ ಭೇಟಿ ನೀಡಿ ಸಾಂತ್ವನ ಹೇಳಿದ್ದರು. ಮೊದಲೇ ತಮ್ಮವರು, ದೊಡ್ಡ ದೊಡ್ಡ ಮುಖಂಡರು ಇಲ್ಲಿದ್ದರೂ ಬಂದಿಲ್ಲ ಎಂಬ ಆಕ್ರೋಶ ನೇಹಾ ತಂದೆಯಲ್ಲಿತ್ತು. ಹೀಗಾಗಿ ನಮ್ಮ ಮಗಳಿಗೆ ನೀವೇ ನ್ಯಾಯ ಕೊಡಿಸಬೇಕು ಎಂದು ಬೇಡಿಕೊಂಡರು. ಜತೆಗೆ ತಮ್ಮ ಪುತ್ರಿ ಸಾವಿನ ಬಗ್ಗೆ ವ್ಯತಿರಿಕ್ತ ಹೇಳಿಕೆ ನೀಡಿದ್ದ ಸಿಎಂ ಹಾಗೂ ಗೃಹ ಸಚಿವರ ಮೇಲೆ ತಂದೆ ನಿರಂಜನ ಹರಿಹಾಯ್ದಿದ್ದರು.

2-3 ದಿನಗಳಲ್ಲಿ ಅಕ್ಷರಶಃ ಬಿಜೆಪಿ ಪಾಲಿಗೆ ಇದು ಅಸ್ತ್ರವಾಗಿ ಪರಿಣಮಿಸಿತು. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ರಾಜ್ಯಾಧ್ಯಕ್ಷ ವಿಜಯೇಂದ್ರ ಸೇರಿದಂತೆ ದೊಡ್ಡ ದೊಡ್ಡ ಗಣ್ಯರೆಲ್ಲರೂ ಬಂದು ಸಾಂತ್ವನ ಹೇಳಿದರು. ಲವ್‌ ಜಿಹಾದ್‌ದ ಪ್ರಯತ್ನ ಎಂಬುದು ಪ್ರಕರಣಕ್ಕೆ ಅಂಟಿಕೊಂಡಿತು. ಮೊದಲೇ ಕಾಂಗ್ರೆಸ್‌ಗೆ ಹಿಂದೂ ವಿರೋಧಿ ಎಂಬ ಹಣೆಪಟ್ಟಿ ಇದೆ. ಅದರಲ್ಲೂ ಈ ಪ್ರಕರಣ ನಡೆದ ಮೇಲೆ ರಾಜ್ಯ ಸರ್ಕಾರ, ಮುಖಂಡರ ಹೇಳಿಕೆಗಳೆಲ್ಲ ಇದಕ್ಕೆ ಮತ್ತಷ್ಟು ಪುಷ್ಟಿ ನೀಡುವಂತಾಯಿತು. ಬಿಜೆಪಿಗೆ ಚುನಾವಣೆ ಸಂದರ್ಭದಲ್ಲಿ ಅಸ್ತ್ರ ದೊರೆದಂತಾಯಿತು.

ಸುಧಾರಿಸಿಕೊಂಡ ಕಾಂಗ್ರೆಸ್‌:

ಪರಿಸ್ಥಿತಿ ಸಂಪೂರ್ಣ ಹದಗೆಡುತ್ತಿರುವುದು ಅರಿತ ಕಾಂಗ್ರೆಸ್‌, ಹೀಗೆ ಬಿಟ್ಟರೆ ಈ ಕ್ಷೇತ್ರವಷ್ಟೇ ಅಲ್ಲ. ಇಡೀ ರಾಜ್ಯದಲ್ಲೇ ವ್ಯತಿರಿಕ್ತ ಪರಿಣಾಮ ಎದುರಿಸಬೇಕಾಗುತ್ತದೆ ಎಂದುಕೊಂಡು ಪ್ರಕರಣವನ್ನು ತಕ್ಷಣವೇ ಸಿಐಡಿ ತನಿಖೆಗೊಪ್ಪಿಸಿತು. ಬೇಗ ಇತ್ಯರ್ಥಕ್ಕೆ ವಿಶೇಷ ನ್ಯಾಯಾಲಯವನ್ನು ರಚಿಸುವ ಆದೇಶ ಹೊರಡಿಸಿದೆ. ಸಿಎಂ, ಡಿಸಿಎಂ ಸೇರಿದಂತೆ ಸರ್ಕಾರದಲ್ಲಿನ ಗಣ್ಯಾತಿಗಣ್ಯರು ಕರೆ ಮಾಡಿ ನಿರಂಜನಗೆ ಕ್ಷಮೆ ಕೂಡ ಕೇಳಿದರು. ಈ ಮೂಲಕ ಆಗಿರುವ ಎಡವಟ್ಟನ್ನು ಸುಧಾರಿಸುವ ಕೆಲಸ ಮಾಡುತ್ತಿದ್ದಾರೆ.

ಸರ್ಕಾರದ ವಿರುದ್ಧ ಹರಿಹಾಯುತ್ತಿದ್ದ ನಿರಂಜನ ಇದೀಗ ಉಲ್ಟಾ ಹೊಡೆಯುತ್ತಿದ್ದಾರೆ. ಸರ್ಕಾರದ ವಿರುದ್ಧ ನೀಡಿದ್ದ ಹೇಳಿಕೆಗೆ ಕ್ಷಮೆ ಕೇಳುತ್ತಿದ್ದಾರೆ. ಮಾಹಿತಿ ಕೊರತೆಯಿಂದ ಆ ರೀತಿಯೆಲ್ಲ ಹೇಳಿಕೆ ನೀಡಿದ್ದೆ ಎಂದೆಲ್ಲ ಹೇಳುತ್ತಿದ್ದಾರೆ. ಹೀಗೆ ಪರಿಸ್ಥಿತಿಯನ್ನು ಕಾಂಗ್ರೆಸ್‌ ಸುಧಾರಿಸಿಕೊಳ್ಳುವತ್ತ ಹೆಜ್ಜೆ ಹಾಕುವ ಮೂಲಕ ಬಿಜೆಪಿಯ ಅಸ್ತ್ರಕ್ಕೆ ಪ್ರತ್ಯಸ್ತ್ರ ಪ್ರಯೋಗಿಸಿದ್ದಾರೆ.

ಒಟ್ಟಿನಲ್ಲಿ ಲೋಕಸಭೆ ಚುನಾವಣೆಯಲ್ಲಿ ಈ ಪ್ರಕರಣ ಯಾರಿಗೆ ಎಷ್ಟು ಲಾಭವಾಗುತ್ತದೆ ಎಂಬುದು ರಾಜಕಾರಣಿಗಳಷ್ಟೇ ಸಾರ್ವಜನಿಕ ವಲಯದಲ್ಲೂ ಭಾರಿ ಚರ್ಚೆಗೆ ಗ್ರಾಸ್‌ವನ್ನುಂಟು ಮಾಡಿರುವುದಂತೂ ಸತ್ಯ.!