ನೇಹಾ ಕೊಲೆ: ಮಠಾಧೀಶರ, ಗಣ್ಯರ ಭೇಟಿ, ಸಾಂತ್ವನ

| Published : Apr 21 2024, 02:24 AM IST

ನೇಹಾ ಕೊಲೆ: ಮಠಾಧೀಶರ, ಗಣ್ಯರ ಭೇಟಿ, ಸಾಂತ್ವನ
Share this Article
  • FB
  • TW
  • Linkdin
  • Email

ಸಾರಾಂಶ

ಕಾನೂನು ಸುವ್ಯವಸ್ಥೆ ದಾರಿ ತಪ್ಪಿರುವ ಆತಂಕ ಎದುರಾಗಿದೆ. ಸರ್ಕಾರ ಮತ್ತು ಜನಪ್ರನಿಧಿಗಳು ಬೇಜಬಾಬ್ದಾರಿ ಹೇಳಿಕೆ ನೀಡಿ ಕುಟುಂಬಕ್ಕೆ ನೋವನ್ನುಂಟು ಮಾಡಬಾರದು.

ಹುಬ್ಬಳ್ಳಿ:

ಇಲ್ಲಿನ ಬಿವಿಬಿ ಕಾಲೇಜ್‌ ಕ್ಯಾಂಪಸ್‌ನಲ್ಲಿ ಹತ್ಯೆಗೀಡಾದ ನೇಹಾ ಹಿರೇಮಠ ಮನೆಗೆ ಶನಿವಾರವೂ ಗಣ್ಯಾತಿಗಣ್ಯರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ವಿವಿಧ ಮಠಾಧೀಶರು, ಸಚಿವರು, ವಿವಿಧ ರಾಜಕಾರಣಿಗಳು, ಸಂಘ-ಸಂಸ್ಥೆಗಳ ಗಣ್ಯರು ಭೇಟಿ ನೀಡಿ ಸಾಂತ್ವನ ಹೇಳಿದರು. ಅಲ್ಲದೇ, ನಿಮ್ಮೊಂದಿಗೆ ನಾವಿದ್ದೇವೆ ಎಂದು ಧೈರ್ಯ ತುಂಬಿದರು.

ಬೆಳಗ್ಗೆಯಿಂದಲೇ ನಿರಂಜನ ಹಿರೇಮಠ ಮನೆಗೆ ಭೇಟಿ ನೀಡುತ್ತಿದ್ದ ಗಣ್ಯರು, ಕುಟುಂಬಕ್ಕೆ ಸಮಾಧಾನ ಹೇಳುತ್ತಿದ್ದರು. ಘಟನೆ ಖಂಡಿಸಿ, ಆರೋಪಿಗೆ ಕಠಿಣ ಶಿಕ್ಷೆಯಾಗಲೇಬೇಕು. ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತಿದ್ದರು. ಸಿರಿಗೆರೆಯ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಭೇಟಿ ನೀಡಿ ಸಾಂತ್ವನ ಹೇಳಿದರು. ಈ ವೇಳೆ ಯುವ ಬ್ರಿಗೇಡ್‌ನ ಚಕ್ರವರ್ತಿ ಸೂಲಿಬೆಲೆ ಸೇರಿದಂತೆ ಹಲವರಿದ್ದರು.

ಕೂಡಲಸಂಗಮದ ಬಸವ ಜಯಮೃತ್ಯುಂಜಯ ಶ್ರೀ ಭೇಟಿ ನೀಡಿ ಸಾಂತ್ವನ ಹೇಳಿದರು. ಅಲ್ಲದೇ, ಕಾನೂನು ಸುವ್ಯವಸ್ಥೆ ದಾರಿ ತಪ್ಪಿರುವ ಆತಂಕ ಎದುರಾಗಿದೆ. ಸರ್ಕಾರ ಮತ್ತು ಜನಪ್ರನಿಧಿಗಳು ಬೇಜಬಾಬ್ದಾರಿ ಹೇಳಿಕೆ ನೀಡಿ ಕುಟುಂಬಕ್ಕೆ ನೋವನ್ನುಂಟು ಮಾಡಬಾರದು. ಬದಲಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು ಎಂದರು.

ಇನ್ನು ಶಿರಹಟ್ಟಿ ಫಕೀರೇಶ್ವರ ಮಠದ ಹಿರಿಯ ಸ್ವಾಮೀಜಿ ಸಿದ್ಧರಾಮ ಶ್ರೀಗಳು ಭೇಟಿ ನೀಡಿ ಕುಟುಂಬಕ್ಕೆ ಧೈರ್ಯ ತುಂಬಿದರು. ತಪ್ಪು ಮಾಡಿದವರಿಗೆ ಶಿಕ್ಷೆ ಆಗದೇ ಹೋದಲ್ಲಿ ಇಂತಹ ಘಟನೆ ಮರುಕಳಿಸುತ್ತವೆ. ಕಾನೂನು ಬದಲಾವಣೆ ತಂದು ಕಟ್ಟುನಿಟ್ಟಿನ ಶಿಕ್ಷೆಗೆ ಗುರಿಪಡಿಸುವ ಕೆಲಸವಾಗಬೇಕಿದೆ ಎಂದರು.

ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಶ್ರೀ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಘಟನೆ ನೋಡಿ ದಿಗ್ರ್ಭಮೆಯಾಗಿದೆ. ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕು. ಈ ಮೂಲಕ ಮೃತ ನೇಹಾಳ ಆತ್ಮಕ್ಕೆ ಶಾಂತಿ ದೊರೆಯುವಂತೆ ಮಾಡಬೇಕು ಎಂದರು.

ರುದ್ರಾಕ್ಷಿ ಮಠದ ಬಸವಲಿಂಗ ಶ್ರೀ, ಎರಡೆತ್ತಿನ ಮಠದ ಸಿದ್ಧಲಿಂಗ ಶ್ರೀ, ಹಂದಿಗುಂದದ ಶಿವಾನಂದ ಶ್ರೀ, ಬೂದಿಹಾಳದ ಪ್ರಭು ಶ್ರೀ ಸೇರಿದಂತೆ ಹಲವು ಮಠಾಧೀಶರು ಭೇಟಿ ನೀಡಿದ್ದರು.ರಾಜಕಾರಣಿಗಳ ಭೇಟಿ

ಸಚಿವೆ ಲಕ್ಷ್ಮಿ ಹೆಬ್ಬಾಳಕರ್‌ ಭೇಟಿ ನೀಡಿ ಧೈರ್ಯ ನೀಡಿದರು. ಕೊಲೆ ಅತ್ಯಂತ ಹೇಯ ಕೃತ್ಯ. ಪ್ರಕರಣದ ನಿಷ್ಪಕ್ಷಪಾತ, ನಿಖರವಾದ ತನಿಖೆ ನಡೆಸಿ ಕುಟುಂಬಕ್ಕೆ ನ್ಯಾಯ ಒದಗಿಸಲಾಗುವುದು ಎಂದರು.

ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಭೇಟಿ ನೀಡಿ ಸಾಂತ್ವನ ಹೇಳಿ, ನಿಮ್ಮ ಹೋರಾಟದಲ್ಲಿ ನಾವು ಕೂಡ ಭಾಗಿ. ನಿಮ್ಮೊಂದಿಗೆ ಸದಾಕಾಲ ಇರುತ್ತೇವೆ. ಸರ್ಕಾರ ನಿರ್ಲಕ್ಷ್ಯ ಮಾಡದೇ, ಬೇಜವಾಬ್ದಾರಿ ಹೇಳಿಕೆ ನೀಡದೇ ಸೂಕ್ತವಾದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಶಾಸಕ ಎನ್‌.ಎಚ್‌. ಕೋನರಡ್ಡಿ, ವಿಧಾನ ಪರಿಷತ್‌ ಸದಸ್ಯ ಪ್ರದೀಪ ಶೆಟ್ಟರ್‌, ಯುವ ಬ್ರಿಗೇಡ್‌ನ ಚಕ್ರವರ್ತಿ ಸೂಲಿಬೆಲಿ, ರಾಜಶೇಖರ ಮೆಣಸಿನಕಾಯಿ, ರಜತ್‌ ಉಳ್ಳಾಗಡ್ಡಿಮಠ, ಸೇರಿದಂತೆ, ಕಾಂಗ್ರೆಸ್‌, ಜೆಡಿಎಸ್‌, ಬಿಜೆಪಿಯ ಹಲವು ಮುಖಂಡರು ಭೇಟಿ ನೀಡಿ ಸಾಂತ್ವನ ಹೇಳಿದರು.