ಬ್ರಿಟಿಷರು ಭಾರತಕ್ಕೆ ಸ್ವಾತಂತ್ರ ಘೋಷಿಸಿದ ಸಂದರ್ಭದಲ್ಲಿ ಇದ್ದ 33 ಕೋಟಿ ಜನಸಂಖ್ಯೆಗೆ ಆಹಾರ ಒದಗಿಸುವುದು ಕಷ್ಟದ ಕೆಲಸವಾಗಿತ್ತು. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಪ್ರಧಾನಿಯಾಗಿದ್ದ ನೆಹರು, ದೇಶದಲ್ಲಿ ಕೃಷಿ, ಕೈಗಾರಿಕೆಗಳು, ಹೈನುಗಾರಿಕೆ, ವಿಜ್ಞಾನಗಳಿಗೆ ಒತ್ತು ನೀಡಿ, ಶೈಕ್ಷಣಿಕವಾಗಿ ಭಾರತವನ್ನು ಬೆಳೆಸಲು ಪಣತೊಟ್ಟರು.

ಕನ್ನಡಪ್ರಭ ವಾರ್ತೆ, ತುಮಕೂರು

ಆಗರ್ಭ ಶ್ರೀಮಂತ ಮನೆತನದಲ್ಲಿ ಹುಟ್ಟಿದರೂ ದೇಶಕ್ಕಾಗಿ ತನ್ನೆಲ್ಲಾ ಆಸ್ತಿ ದಾನ ಮಾಡಿ ದೇಶದ ಅಭ್ಯುದಯಕ್ಕೆ ಭದ್ರ ಬುನಾಧಿ ಹಾಕಿದ ನೆಹರು ದೇಶ ಕಂಡ ಅಪರೂಪದ ನಾಯಕರಲ್ಲಿ ಒಬ್ಬರು ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಚಂದ್ರಶೇಖರಗೌಡ ತಿಳಿಸಿದ್ದಾರೆ.

ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಆಯೋಜಿಸಿದ್ದ ಪಂಡಿತ ಜವಹರ್ ಲಾಲ್ ನೆಹರು ಅವರ 137 ನೇ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.ವಿದೇಶದಲ್ಲಿ ಓದಿ ಅಪಾರ ಪಾಂಡಿತ್ಯ ಪಡೆದಿದ್ದರೂ ಮಹಾತ್ಮಗಾಂಧೀಜಿ ಕರೆಗೆ ಓಗೊಟ್ಟು ಸ್ವಾತಂತ್ರ ಸಂಗ್ರಾಮಕ್ಕೆ ಧುಮುಕಿ ಸೈಮನ್‌ ಕಮಿಷನ್ ವರದಿಯನ್ನು ಧಿಕ್ಕರಿಸಿ ಪ್ರತಿಭಟನೆಗೆ ಇಳಿದು ಲಾಠಿ ಏಟು ತಿಂದು ಜೈಲುವಾಸ ಅನುಭವಿಸಿದರು. ಜೈಲಿನಿಂದಲೇ ತಮ್ಮ ಮಗಳಿಗೆ ಬರೆದ ಪತ್ರಗಳ ಸಂಗ್ರಹ ಡಿಸ್ಕವರಿ ಅಫ್‌ ಇಂಡಿಯಾ ಇಂದಿಗೂ ಜನಪ್ರಿಯ ಪುಸ್ತಕಗಳಲ್ಲಿ ಒಂದು. ಒಂದು ಗುಂಡು ಸೂಜಿಗೂ ವಿದೇಶಗಳ ಮೇಲೆ ಅವಲಂಬಿತವಾಗಿದ್ದ ಕಾಲದಲ್ಲಿ ದೇಶವನ್ನು ಅರ್ಥಿಕ, ಶೈಕ್ಷಣಿಕ, ವೈಜ್ಞಾನಿಕವಾಗಿ ಮುಂದೆ ತರಲು ಪಂಚವಾರ್ಷಿಕ ಯೋಜನೆಗಳನ್ನು ಜಾರಿಗೆ ತಂದು, ಆವುಗಳ ಮೂಲಕ ಹಂತ ಹಂತವಾಗಿ ದೇಶದ ಅಭಿವೃದ್ಧಿ ಪಥದತ್ತ ಸಾಗಲು ಕಾರಣರಾದ ನೆಹರು ನವ ಭಾರತದ ನಿಮಾತೃಗಳಲ್ಲಿ ಒಬ್ಬರು ಎಂದು ಹೇಳಿದರು.

ರಾಜ್ಯ ಸರ್ಕಾರ ಶಾಸಕರು, ಮಾಜಿ ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರ ಸಲಹೆಯಂತೆ ನಿಗಮ ಮಂಡಳಿಗಳಿಗೆ ನಿರ್ದೇಶಕರನ್ನು ನೇಮಕ ಮಾಡಿದೆ. ಜಿಲ್ಲಾ ಅಧ್ಯಕ್ಷರ ಯಾವುದೇ ಪಟ್ಟಿ ಇಲ್ಲ. ಮುಂದೆ ಮತ್ತೆರಡು ಪಟ್ಟಿಗಳು ಬಿಡುಗಡೆಯಾಗಲಿವೆ ಎಂಬ ನಿರೀಕ್ಷೆ ಇದೆ. ಒಂದು ವೇಳೆ ನನಗೆ ಅವಕಾಶ ನೀಡಿದರೆ, ಪಕ್ಷಕ್ಕಾಗಿ ಹಗಲಿರುಳು ದುಡಿಯುತ್ತೇನೆ ಎಂದು ಅವರು ಭರವಸೆ ನೀಡಿದರು

ಕೆಪಿಸಿಸಿ ಉಪಾಧ್ಯಕ್ಷ ಮುರುಳೀಧರ ಹಾಲಪ್ಪ ಮಾತನಾಡಿ, ಬ್ರಿಟಿಷರು ಭಾರತಕ್ಕೆ ಸ್ವಾತಂತ್ರ ಘೋಷಿಸಿದ ಸಂದರ್ಭದಲ್ಲಿ ಇದ್ದ 33 ಕೋಟಿ ಜನಸಂಖ್ಯೆಗೆ ಆಹಾರ ಒದಗಿಸುವುದು ಕಷ್ಟದ ಕೆಲಸವಾಗಿತ್ತು. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಪ್ರಧಾನಿಯಾಗಿದ್ದ ನೆಹರು, ದೇಶದಲ್ಲಿ ಕೃಷಿ, ಕೈಗಾರಿಕೆಗಳು, ಹೈನುಗಾರಿಕೆ, ವಿಜ್ಞಾನಗಳಿಗೆ ಒತ್ತು ನೀಡಿ, ಶೈಕ್ಷಣಿಕವಾಗಿ ಭಾರತವನ್ನು ಬೆಳೆಸಲು ಪಣತೊಟ್ಟರು. ಇದರ ಫಲವಾಗಿ ಐಐಎಸ್ಸಿ, ಎಐಎಂಎಸ್, ಇಸ್ರೋ, ಐಐಟಿಯಂತಹ ಶಿಕ್ಷಣ ಸಂಸ್ಥೆಗಳು ಸ್ಥಾಪನೆಯಾಗಿ ಇಂದು ದೇಶದ ವಿದ್ಯಾವಂತರು ಪ್ರಪಂಚದೆಲ್ಲೆಡೆ ದೊರೆಯುವಂತಾಗಿದ್ದಾರೆ. ಇದರ ಹಿಂದಿನ ಶಕ್ತಿ ನೆಹರು ಎಂದು ಸ್ಮರಿಸಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಆರ್.ರಾಮಕೃಷ್ಣ ಮಾತನಾಡಿ, ಭಾರತವನ್ನುಅಭಿವೃದ್ದಿ ಶೀಲ ರಾಷ್ಟ್ರವನ್ನಾಗಿ ಕಟ್ಟಿದ್ದು ನೆಹರು. ಆದರೆ ಇಂದಿನ ಪ್ರಧಾನಿ ನೆಹರು ಯೋಜನೆಗಳ ಹೆಸರುಗಳನ್ನಷ್ಟೇ ಬದಲಾವಣೆ ಮಾಡಿ, ಪ್ರಚಾರ ಪಡೆಯುತ್ತಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ. 17 ವರ್ಷಗಳ ಕಾಲ ದೇಶದ ಪ್ರಧಾನಿಯಾಗಿ ದೇಶವನ್ನುಎಲ್ಲ ರೀತಿಯಿಂದಲು ಮುನ್ನೆಡೆಸಿದ ಕೀರ್ತಿ ನೆಹರು ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.

ಕಾರ್ಯಕ್ರಮ ಕುರಿತು ಮುಖಂಡರಾದ ಷಣ್ಮುಗಪ್ಪ, ನಟರಾಜಶೆಟ್ಟಿ, ಪಿ.ಶಿವಾಜಿ, ಇರ್ಫಾನ್ ಅಹಮದ್, ಸುರೇಶ್‌ರಾಜು, ಲಿಂಗರಾಜು ಮಾತನಾಡಿದರು. ಕಾರ್ಯಕ್ರಮದಲ್ಲಿ ಮುಖಂಡರಾದ ಸಂಜೀವ್‌ ಕುಮಾರ್, ವಕೀಲರಾದ ಕೆ.ಎನ್. ಹರೀಶ್, ಮಂಜುನಾಥ್, ಕೈದಾಳ ರಮೇಶ್, ಅತೀಕ್‌ ಅಹಮದ್, ಕೆಂಪಣ್ಣ, ಸೈಯದ್‌ದಾದಾಪೀರ್, ಅಂಬರೀಷ್, ಶಮಾ ಮತ್ತಿತರರು ಉಪಸ್ಥಿತರಿದ್ದರು.