ಗುಂಡ್ಲುಪೇಟೆ ವಾರ್ಡ್‌ಲ್ಲಿ ನೆರೆ ಹೊರೆ ಸಮಿತಿ ರಚಿಸಿ

| Published : Nov 23 2025, 02:00 AM IST

ಸಾರಾಂಶ

ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು, ಪಟ್ಟಣದ ವಾರ್ಡ್‌ ವ್ಯಾಪ್ತಿಯಲ್ಲಿ ನೆರೆ ಹೊರೆ ಸಮಿತಿ ರಚಿಸಿದರೆ ಬಡಾವಣೆ/ವಾರ್ಡ್‌ನ ಮೂಲಭೂತ ಸೌಕರ್ಯ ಒದಗಿಸಲು ಮಾಹಿತಿ ಸಿಗಲಿದೆ ಎಂದು ಕರ್ನಾಟಕ ರಾಜ್ಯ ವಿಕೇಂದ್ರಿಕೃತ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್.ಪಾಟೀಲ್‌ ಹೇಳಿದರು.

ಕನ್ನಡಪ್ರಭ ವಾರ್ತೆ, ಗುಂಡ್ಲುಪೇಟೆ

ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು, ಪಟ್ಟಣದ ವಾರ್ಡ್‌ ವ್ಯಾಪ್ತಿಯಲ್ಲಿ ನೆರೆ ಹೊರೆ ಸಮಿತಿ ರಚಿಸಿದರೆ ಬಡಾವಣೆ/ವಾರ್ಡ್‌ನ ಮೂಲಭೂತ ಸೌಕರ್ಯ ಒದಗಿಸಲು ಮಾಹಿತಿ ಸಿಗಲಿದೆ ಎಂದು ಕರ್ನಾಟಕ ರಾಜ್ಯ ವಿಕೇಂದ್ರಿಕೃತ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್.ಪಾಟೀಲ್‌ ಹೇಳಿದರು.

ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ಪಟ್ಟಣದ ವಾರ್ಷಿಕ ಕರಡು ಅಭಿವೃದ್ಧಿ ಯೋಜನೆ ಕುರಿತ ಶನಿವಾರ ನಡೆದ ಸಭೆಯಲ್ಲಿ ಮಾತನಾಡಿ, ಮಹಾತ್ಮ ಗಾಂಧೀಜಿ ತತ್ವ ಆಧರಿಸಿ ಸ್ವಚ್ಛತೆಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮುಂದಾಗಬೇಕು ಎಂದರು.

ಪಟ್ಟಣದ ಅಭಿವೃದ್ಧಿ ಆಗಬೇಕಿದ್ದಲ್ಲಿ ತಳ ಹಂತದಿಂದ ಯೋಜನೆ ರೂಪಿಸಲು ಪ್ರತಿ ನೂರು ಜನಕ್ಕೆ ಇಬ್ಬರು ಸದಸ್ಯರನ್ನು (ಓರ್ವ ಪುರುಷ, ಓರ್ವ ಮಹಿಳೆ) ನೇಮಿಸಿ ಆಯಾ ವಾರ್ಡಿನಲ್ಲಿ ಏನು ಕೆಲಸ ಆಗಬೇಕು ಎಂದು ಪರಿಶೀಲಿಸಿ, ಮಾಹಿತಿ ಸಂಗ್ರಹಿಸಿ, ಸದರಿ ಮಾಹಿತಿಯನ್ನು ಬರುವ ಡಿ.೬ ರೊಳಗೆ ನೀಡಬೇಕು. ಸದರಿ ಮಾಹಿತಿ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಯೋಜನೆ ಮತ್ತು ಅಭಿವೃದ್ಧಿ ಯೋಜನೆ ಸಮಿತಿಯಲ್ಲಿ ಮಂಡಿಸಲಾಗುವುದು ಎಂದರು.

ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಮಾತನಾಡಿ, ಪಟ್ಟಣದ ೨೩ ವಾರ್ಡ್‌ಗಳ ವ್ಯಾಪ್ತಿಯಲ್ಲಿ ರಸ್ತೆ,ಚರಂಡಿ, ಕುಡಿಯುವ ನೀರು ಸೇರಿದಂತೆ ಮೂಲ ಭೂತ ಸೌಕರ್ಯ ಒದಗಿಸಲು ಸರ್ಕಾರದಿಂದ ಅನುದಾನ ತಂದು ಪಟ್ಟಣದ ಅಭಿವೃದ್ಧಿಗೆ ಶ್ರಮಿಸುವೆ ಎಂದರು. ಜಿಲ್ಲಾಧಿಕಾರಿ ಟಿ.ಸಿ.ಶಿಲ್ಪ ನಾಗ್‌ ಮಾತನಾಡಿ, ಪಟ್ಟಣದ ವ್ಯಾಪ್ತಿಯಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು. ಪಟ್ಟಣದ ಸಾರ್ವಜನಿಕರಿಗೆ ನಿಗಧಿತ ಸಮಯದಲ್ಲಿ ಮೂಲ ಭೂತ ಸೌಕರ್ಯ ಒದಗಿಸಬೇಕು. ಜೊತೆಗೆ ನೀರಿನ ಸೋರಿಕೆ ಕಂಡು ಬಂದಲ್ಲಿ ೬ ಗಂಟೆಯೊಳಗೆ ಜನರಿಗೆ ನೀರು ಸರಬರಾಜು ಮಾಡಬೇಕು ಎಂದರು.

ವಾಹನಗಳು ದುರಸ್ತಿಯಾದರೆ ಅದೇ ದಿನ ಸರಿಪಡಿಸಬೇಕು. ಎಲ್ಲಾ ವಾರ್ಡ್‌ಗಲ್ಲಿ ಹಸಿ ಮತ್ತು ಒಣ ಕಸ ಸಂಗ್ರಹಣೆ ಆಗಬೇಕು. ಕುಡಿಯುವ ನೀರು ಸರಬರಾಜು, ಎಲ್ಲಾ ವಾಣಿಜ್ಯ ಮಳಿಗೆಗಳ ತಿಂಗಳ ಬಾಡಿಗೆ, ತೆರಿಗೆ ವಸೂಲಾತಿ, ನೀರು, ಆಸ್ತಿ ತೆರಿಗೆ, ಉದ್ದಿಮೆ ಪರವಾನಗಿ ಶುಲ್ಕ, ಕಟ್ಟಡ ನಿರ್ಮಾಣ ಶುಲ್ಕ ಎಲ್ಲಾ ಮೂಲಗಳಿಂದ ಬರುವ ಆದಾಯ ನಿಗಧಿತ ಸಮಯದಲ್ಲಿ ವಸೂಲಾತಿ ಮಾಡಬೇಕು ಎಂದರು.

ಪುರಸಭೆ ಮಾಜಿ ಅಧ್ಯಕ್ಷ ಶಶಿಧರ್‌ ಪಿ ದೀಪು, ಯೋಜನಾ ನಿರ್ದೇಶಕ ಸುಧಾ ಎಂ.ವಿ, ತಹಸೀಲ್ದಾರ್‌ ಎಂ.ಎಸ್.ತನ್ಮಯ್‌, ಪುರಸಭೆ ಮಾಜಿ ಉಪಾಧ್ಯಕ್ಷ ಶ್ರೀನಿವಾಸ್, ಪುರಸಭೆ ಮುಖ್ಯಾಧಿಕಾರಿ ಎಸ್.ಶರವಣ ಇದ್ದರು.

ಪಟ್ಟಣದ ನಾಗರಿಕರಿಗೆ ಅನುಕೂಲವಾಗಲು ಪುರಸಭೆಯ ಮೂಲಭೂತ ಸೌಕರ್ಯ ಕಲ್ಪಿಸಲು ತುರ್ತಾಗಿ ಸ್ಪಂದಿಸಲು ಪುರಸಭೆ ಸಹಾಯವಾಣಿಯನ್ನು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್ ಬಿಡುಗಡೆಗೊಳಿಸಿದರು.

ಬಳಿಕ ಮಾತನಾಡಿದ ಅವರು, ಪಟ್ಟಣದ ಸೌಂದರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಸ್ವಚ್ಛತೆ, ಕುಡಿಯುವ ನೀರಿನ ತೊಂದರೆ, ಬೀದಿ ದೀಪ ನಿರ್ವಹಣೆ, ಒಳಚರಂಡಿ ವ್ಯವಸ್ಥೆಗೆ ತುರ್ತಾಗಿ ಸ್ಪಂದಿಸಲು ಪುರಸಭೆ ಸಹಾಯವಾಣಿ ತೆರೆದಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಪಟ್ಟಣದ ನಾಗರಿಕರು ಪುರಸಭೆಯಿಂದ ಆಗಬೇಕಾದ ಮೂಲಭೂತ ಸೌಕರ್ಯಗಳಿಗೆ ಪುರಸಭೆ ಸಹಾಯವಾಣಿ ಸಂಖ್ಯೆ ೯೪೮೦೨೨೯೦೫೪ ಗೆ ವಾಟ್ಸಾಪ್‌ ಮೂಲಕ ದೂರು ಸಲ್ಲಿಸಿ ಸಮಸ್ಯೆ ಪರಿಹರಿಸಿಕೊಳ್ಳಿ ಎಂದರು.