ಕೆಫೆ ಬಾಂಬ್‌ ತನಿಖೆಗೆ ನೆರೆ ರಾಜ್ಯಗಳಿಗೆ

| Published : Mar 04 2024, 01:18 AM IST

ಸಾರಾಂಶ

ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟ ಪ್ರಕರಣದ ಬಗ್ಗೆ ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ದ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಪೊಲೀಸರ ತಂಡಗಳು ನೆರೆಯ ರಾಜ್ಯಗಳಿಗೆ ತೆರಳಿ ಹಿಂದಿನ ಬಾಂಬ್‌ ಸ್ಫೋಟ ಪ್ರಕರಣಗಳ ಕುರಿತು ಮಾಹಿತಿ ಸಂಗ್ರಹಿಸುತ್ತಿವೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟ ಪ್ರಕರಣದ ಬಗ್ಗೆ ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ದ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಪೊಲೀಸರ ತಂಡಗಳು ನೆರೆಯ ರಾಜ್ಯಗಳಿಗೆ ತೆರಳಿ ಹಿಂದಿನ ಬಾಂಬ್‌ ಸ್ಫೋಟ ಪ್ರಕರಣಗಳ ಕುರಿತು ಮಾಹಿತಿ ಸಂಗ್ರಹಿಸುತ್ತಿವೆ.

ನೆರೆಯ ಆಂಧ್ರಪ್ರದೇಶ, ತೆಲಂಗಾಣ, ಕೇರಳ, ತಮಿಳುನಾಡು ರಾಜ್ಯಗಳಿಗೆ ಪೊಲೀಸರ ತಂಡಗಳು ಭೇಟಿ ನೀಡಿ ಮಾಹಿತಿ ಸಂಗ್ರಹಣೆಯಲ್ಲಿ ನಿರತವಾಗಿವೆ. ಈ ಹಿಂದೆ ಮಂಗಳೂರು ಕುಕ್ಕರ್‌ ಬಾಂಬ್‌ ಸ್ಫೋಟ, ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದ ಬಾಂಬ್‌ ಸ್ಫೋಟ ಪ್ರಕರಣಗಳಿಗೂ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್‌ ಸ್ಫೋಟ ಪ್ರಕರಣಗಳಲ್ಲಿ ಕೆಲವು ಸಾಮ್ಯತೆಗಳಿವೆ. ಅಂದರೆ ಸ್ಫೋಟದ ಸ್ಥಳದಲ್ಲಿ ಪತ್ತೆಯಾಗಿರುವ ಬ್ಯಾಟರಿ, ಟೈಮರ್‌ಗಳು ಸೇರಿದಂತೆ ಕೆಲ ವಸ್ತುಗಳಲ್ಲಿ ಸಾಮ್ಯತೆ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ನೆರೆಯ ರಾಜ್ಯಗಳಿಗೆ ತೆರಳಿ ಹಳೆಯ ಪ್ರಕರಣಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಈ ನಡುವೆ ಪ್ರಕರಣದ ತನಿಖಾಧಿಕಾರಿ ಸಿಸಿಬಿಯ ಎಸಿಪಿ ನವೀನ್‌ ಕುಲಕರ್ಣಿ ನೇತೃತ್ವದ ತಂಡ ಕುಂದಲಹಳ್ಳಿಯ ರಾಮೇಶ್ವರಂ ಕೆಫೆಗೆ ಭೇಟಿ ನೀಡಿ ಬಾಂಬ್‌ ಸ್ಫೋಟದ ಸ್ಥಳವನ್ನು ಪರಿಶೀಲಿಸಿದೆ. ಹೋಟೆಲ್‌ನ ಸಿಬ್ಬಂದಿ ಹಾಗೂ ಕೆಲ ಸ್ಥಳೀಯರಿಂದ ಘಟನೆ ಕುರಿತು ಮಾಹಿತಿ ಸಂಗ್ರಹಿಸಿದೆ. ಸಿಸಿಟಿವಿಯಲ್ಲಿ ಸೆರೆಯಾಗಿರುವ ಶಂಕಿತ ಓಡಾಡಿದ ಸ್ಥಳಗಳಿಗೂ ತೆರಳಿ ಪರಿಶೀಲಿಸಿದ್ದಾರೆ.

ರಾಮೇಶ್ವರಂ ಕೆಫೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ಶಂಕಿತನ ಪತ್ತೆಗೆ ಪೊಲೀಸರು ರೇಖಾಚಿತ್ರ ಮೊರೆ ಹೋಗಲು ಸಿದ್ಧತೆ ನಡೆಸಿದ್ದಾರೆ. ಸದ್ಯಕ್ಕೆ ಲಭ್ಯವಿರುವ ಸಿಸಿಟಿವಿ ದೃಶ್ಯಾವಳಿಯಲ್ಲಿ ಶಂಕಿತ ವ್ಯಕ್ತಿ ತಲೆಗೆ ಟೋಪಿ, ಕನ್ನಡಕ, ಮಾಸ್ಕ್‌ ಧರಿಸಿರುವುದು ಸೆರೆಯಾಗಿದೆ. ಈ ಫೋಟೋವನ್ನು ಬಳಸಿಕೊಂಡು ಶಂಕಿತನ ವಿವಿಧ ರೇಖಾಚಿತ್ರಗಳನ್ನು ಬಿಡಿಸಲಾಗುತ್ತದೆ. ಶಂಕಿತ ಗಡ್ಡಧಾರಿಯಾಗಿದ್ದರೆ, ಗಡ್ಡ ಇಲ್ಲದಿದ್ದರೆ, ಮೀಸೆ ಇದ್ದರೆ, ಮೀಸೆ ಇಲ್ಲದಿದ್ದರೆ, ತಲೆಯಲ್ಲಿ ಕೂದಲು ಇದ್ದರೆ, ಬೋಳು ತಲೆಯಾಗಿದ್ದರೆ ಹೇಗೆ ಕಾಣಬಹುದು ಎಂಬುದನ್ನು ರೇಖಾಚಿತ್ರದಲ್ಲಿ ಮೂಡಿಸಲಾಗುತ್ತದೆ. ಈ ರೇಖಾಚಿತ್ರ ಬಳಸಿಕೊಂಡು ಶಂಕಿತನ ಪತ್ತೆಗೆ ಪೊಲೀಸರು ಬಲೆ ಬೀಸಲಿದ್ದಾರೆ.

ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದ ಶಂಕಿತ ವ್ಯಕ್ತಿ ಘಟನೆ ಬಳಿಕ ರಾಜ್ಯ ತೊರೆದು ಹೊರ ರಾಜ್ಯಕ್ಕೆ ಪರಾರಿಯಾಗಿ ತಲೆಮರೆಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಶುಕ್ರವಾರ ಮಧ್ಯಾಹ್ನ 12.56ಕ್ಕೆ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟಕ್ಕೂ ಮುನ್ನ ಶಂಕಿತ ವ್ಯಕ್ತಿ ರಾಜ್ಯದ ಗಡಿ ದಾಟಿರುವ ಶಂಕೆ ವ್ಯಕ್ತವಾಗಿದೆ. ಅಂದು ಬೆಳಗ್ಗೆ 11.40ಕ್ಕೆ ಕೆಫೆಗೆ ಭೇಟಿ ನೀಡಿರುವ ಶಂಕಿತ, ಹಲವು ಬಾರಿ ವಾಚ್‌ನಲ್ಲಿ ಸಮಯ ನೋಡಿಕೊಂಡು ರವೆ ಇಡ್ಲಿಯನ್ನು ಖರೀದಿಸಿ ತಿಂದಿದ್ದಾನೆ.ಸಮಯ ನಿಗದಿಪಡಿಸಿ ಸ್ಫೋಟಕವಿದ್ದ ಬ್ಯಾಗ್‌ ಅನ್ನು ಕೈ ತೊಳೆಯುವ ಸ್ಥಳದಲ್ಲಿ ಇರಿಸಿ ಅಲ್ಲಿಂದ ಪರಾರಿಯಾಗಿದ್ದಾನೆ. ಬಳಿಕ ಮಧ್ಯಾಹ್ನ 12.56ಕ್ಕೆ ಆ ಸ್ಫೋಟಕವಿದ್ದ ಬ್ಯಾಗ್‌ ಸ್ಫೋಟಗೊಂಡಿದೆ. ಈ ಸುದ್ದಿ ತಿಳಿದು ಪೊಲೀಸರು ಅಲರ್ಟ್‌ ಆಗುವ ವೇಳೆಗೆ ಶಂಕಿತ ಪರಾರಿಯಾಗಲು ಸುಮಾರು ಒಂದೂಕಾಲು ಗಂಟೆ ಸಿಕ್ಕಿದೆ. ರಾಮೇಶ್ವರಂ ಕೆಫೆಯಿಂದ ಹೊಸೂರು ಗಡಿ ದಾಟಲು ಸುಮಾರು 1 ತಾಸು ಸಮಯದ ಅಗತ್ಯವಿದೆ. ಹೀಗಾಗಿ ಶಂಕಿತ ಈ ಸಮಯದಲ್ಲಿ ಬೆಂಗಳೂರು ಬಿಟ್ಟು ಹೊರರಾಜ್ಯಕ್ಕೆ ಪರಾರಿಯಾಗಿರುವ ಸಾಧ್ಯತೆಯಿದೆ ಎನ್ನಲಾಗಿದೆ. ಹೀಗಾಗಿ ಸಿಸಿಬಿ ಪೊಲೀಸರು, ನೆರೆಯ ತಮಿಳುನಾಡು ಹಾಗೂ ಕೇರಳ ಪೊಲೀಸರ ಜತೆಗೆ ಸತತ ಸಂಪರ್ಕದಲ್ಲಿದ್ದಾರೆ.

ಈಗಾಗಲೇ ಸಿಸಿಬಿ ಪೊಲೀಸರ ತನಿಖಾ ತಂಡಗಳು ರಾಮೇಶ್ವರಂ ಕೆಫೆಯಿಂದ ತಮಿಳುನಾಡು ಗಡಿವರೆಗಿನ ನೂರಾರು ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಸಂಗ್ರಹಿಸಿ ಪರಿಶೀಲಿಸುತ್ತಿವೆ. ಶಂಕಿತ ಅತ್ತಿಬೆಲೆ ಮುಖಾಂತರ ತಮಿಳುನಾಡು ಗಡಿ ಪ್ರವೇಶಿಸಿ ತಲೆಮರೆಸಿಕೊಂಡಿರುವ ಅನುಮಾನ ವ್ಯಕ್ತವಾಗಿದೆ. ಹೀಗಾಗಿ ಸಿಸಿಬಿ ಪೊಲೀಸರು ನೆರೆಯ ತಮಿಳುನಾಡು ಪೊಲೀಸರ ಜತೆಗೆ ಸಂಪರ್ಕ ಸಾಧಿಸಿ ಶಂಕಿತ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.