ನೇಜಾರು ತಾಯಿ ಮಕ್ಕಳ ಕೊಲೆ: ಜಾರ್ಚ್ ಶೀಟ್ ಸಲ್ಲಿಕೆ

| Published : Feb 13 2024, 12:48 AM IST

ಸಾರಾಂಶ

ಪ್ರಕರಣಕ್ಕೆ ಸಂಬಂಧಿಸಿದ ವಿಧಿವಿಜ್ಞಾನ ಪ್ರಯೋಗಾಲಯದ ವರದಿಗಳು ಪೊಲೀಸರ ಕೈಸೇರಿದ್ದು, ಅವುಗಳೊಂದಿಗೆ ಆರೋಪಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.

ಕನ್ನಡಪ್ರಭ ವಾರ್ತೆ ಉಡುಪಿಇಲ್ಲಿನ ಮಲ್ಪೆ ಠಾಣಾ ವ್ಯಾಪ್ತಿಯ ನೇಜಾರು ಎಂಬಲ್ಲಿ ನವೆಂಬರ್‌ನಲ್ಲಿ ಒಂದೇ ಕುಟುಂಬದ ನಾಲ್ವರ ಬೀಭತ್ಸ ಹತ್ಯೆ ಪ್ರಕರಣದ ಆರೋಪ ಪಟ್ಟಿಯನ್ನು ಪೊಲೀಸರು ಸೋಮವಾರ ಜಿಲ್ಲಾ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.ದೇಶಾದ್ಯಂದ ಸುದ್ದಿಗೆ ಕಾರಣವಾಗಿದ್ದ ಈ ಪ್ರಕರಣದಲ್ಲಿ ಇಲ್ಲಿನ ನಿವಾಸಿ ನೂರ್ ಮಹಮ್ಮದ್ ಎಂಬವರ ಪತ್ನಿ ಹಸೀನಾ ಮತ್ತು ಅವರ ಇಬ್ಬರು ಹೆಣ್ಣು ಮಕ್ಕಳು, ಒಬ್ಬ ಮಗನನ್ನು ಬರ್ಭರವಾಗಿ ಇರಿದು ಕೊಲೆ ಮಾಡಲಾಗಿತ್ತು. ಆರೋಪಿ ಬೆಳಗಾವಿಯ ಪ್ರವೀಣ್ ಚೌಗುಲೆಯನ್ನು ಪೊಲೀಸರು 72 ಗಂಟೆಯೊಳಗೆ ಬಂಧಿಸಿದ್ದರು.ಇದೀಗ ಪ್ರಕರಣಕ್ಕೆ ಸಂಬಂಧಿಸಿದ ವಿಧಿವಿಜ್ಞಾನ ಪ್ರಯೋಗಾಲಯದ ವರದಿಗಳು ಪೊಲೀಸರ ಕೈಸೇರಿದ್ದು, ಅವುಗಳೊಂದಿಗೆ ಆರೋಪಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.ಪ್ರಸ್ತುತ ಆರೋಪಿಯು ನ್ಯಾಯಾಂಗ ಬಂಧನದಲ್ಲಿದ್ದು, ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಂಬಿ ಎಣಿಸುತಿದ್ದಾನೆ.* ಪರೋಲ್ ಅರ್ಜಿ ತಿರಸ್ಕೃತಆರೋಪಿ ಇತ್ತೀಚೆಗೆ ಪರೋಲ್ ಮೇಲೆ ಬಿಡುಗಡೆಗೂ ಅರ್ಜಿ ಸಲ್ಲಿಸಿದ್ದ. ಫೆ.1ರಂದು ಆತನ ಸಹೋದರ ನಿತಿನ್ ಚೌಗುಲೆ ನಿಧನರಾಗಿದ್ದು, ಆತನ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು, ಮಹರಾಷ್ಟ್ರ ಸಾಂಗ್ಲಿಗೆ ತೆರಳಲು ಅವಕಾಶ ನೀಡುವಂತೆ ನ್ಯಾಯಾಲಯಕ್ಕೆ ಫೆ.8ರಂದು ತನ್ನ ವಕೀಲರ ಮೂಲಕ ಅರ್ಜಿ ಸಲ್ಲಿಸಿದ್ದ.ಆದರೆ ಇದಕ್ಕೆ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕ ಎಚ್.ಎಂ. ನದಾಫ್ ಆಕ್ಷೇಪಣೆ ಸಲ್ಲಿಸಿದ್ದು, ಆರೋಪಿಗೆ ಪರೋಲ್ ನೀಡಿದರೆ ಕಾನೂನು ಸುವ್ಯವಸ್ಥೆಗೆ ಸಮಸ್ಯೆಯಾಗುತ್ತದೆ. ಅಲ್ಲದೆ ಆರೋಪಿಯ ಮೇಲೆ ದಾಳಿಯಾಗುವ ಸಾಧ್ಯತೆ ಇರುತ್ತದೆ. ಅಲ್ಲದೇ ಆರೋಪಿ ತನ್ನ ಸಹೋದರ ಮೃತಪಟ್ಟ ಬಗ್ಗೆ ಯಾವುದೇ ಮರಣ ಪ್ರಮಾಣಪತ್ರವನ್ನು ಸಲ್ಲಿಸಿಲ್ಲ. ಆದ್ದರಿಂದ ಬಿಡುಗಡೆ ಮಾಡಬಾರದು ಎಂದು ವಾದಿಸಿದ್ದರು. ಅದರಂತೆ ನ್ಯಾಯಾಧೀಶೆ ದೀಪಾ, ಆರೋಪಿಯ ಪರೋಲ್ ಅರ್ಜಿಯನ್ನು ತಿರಸ್ಕರಿಸಿ ಆದೇಶ ನೀಡಿದರು.