ಸಾರಾಂಶ
ಇಲ್ಲಿನ ನೇಜಾರು ಗ್ರಾಮದಲ್ಲಿ ತಾಯಿ ಮತ್ತು ಮೂವರು ಮಕ್ಕಳ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಫೇಸ್ ಬುಕ್ ನಲ್ಲಿ ಪ್ರಚೋದನಾಕಾರಿ ಪೋಸ್ಟ್ ಹಾಕಿದ ಆರೋಪಿ, ಶಿವಮೊಗ್ಗದ ಯುವಕನ ಮೇಲೆ ಉಡುಪಿ ಪೊಲೀಸರು ಸ್ವಯಂ ಪ್ರಕರಣ ದಾಖಲಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿನ ನೇಜಾರು ಗ್ರಾಮದಲ್ಲಿ ತಾಯಿ ಮತ್ತು ಮೂವರು ಮಕ್ಕಳ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಫೇಸ್ ಬುಕ್ ನಲ್ಲಿ ಪ್ರಚೋದನಾಕಾರಿ ಪೋಸ್ಟ್ ಹಾಕಿದ ಆರೋಪಿ, ಶಿವಮೊಗ್ಗದ ಯುವಕನ ಮೇಲೆ ಉಡುಪಿ ಪೊಲೀಸರು ಸ್ವಯಂ ಪ್ರಕರಣ ದಾಖಲಿಸಿದ್ದಾರೆ.ಶಿವಮೊಗ್ಗದ ಹಫೀಜ್ ಮೊಹಮದ್ , ‘ಪ್ರಿಪರೇಶನ್ ಇಲ್ಲದೇ ಪ್ರವೀಣ್ ಚೌಗಲೆಯನ್ನು ಕೊಲ್ಲುವ ಒಂದು ಸುಲಭದ ದಾರಿಯನ್ನು ನೇಜಾರಿನವರು ಕಳೆದುಕೊಂಡರು’ ಎಂಬ ಬರಹ ಪ್ರಕಟಿಸಿದ್ದರು.
ಅವರ ವಿರುದ್ಧ ಅಪರಾಧ ಕೃತ್ಯಕ್ಕೆ ಪ್ರಚೋದನೆ, ಸಾರ್ವಜನಿಕ ಶಾಂತಿ ಕದಡುವ ಪ್ರಯತ್ನದ ಪ್ರಕರಣವನ್ನು ಉಡುಪಿ ನಗರ ಠಾಣೆಯ ಪೊಲೀಸರು ದಾಖಲಿಸಿಕೊಂಡಿದ್ದಾರೆ.ಕೊಲೆ ಆರೋಪಿ ಪ್ರವೀಣ್ ಚೌಗುಲೆಯನ್ನು ಪೊಲೀಸರು ನೇಜಾರಿಗೆ ಸ್ಥಳ ಮಹಜರಿಗೆ ಕರೆದುಕೊಂಡು ಹೋಗಿದ್ದಾಗ ಕೆಲವು ಮಂದಿ ಆರೋಪಿಯ ವಿರುದ್ಧ ಘೋಷಣೆ ಕೂಗುತ್ತಾ ಪೊಲೀಸ್ ವಾಹನದ ಮೇಲೆ ದಾಳಿ ನಡೆಸಲು ಪ್ರಯತ್ನಿಸಿದ್ದರು. ಈ ಘಟನೆಯ ಹಿನ್ನೆಲೆಯಲ್ಲಿ ಶಿವಮೊಗ್ಗದ ಹಫೀಜ್ ಫೇಸ್ ಬುಕ್ ನಲ್ಲಿ ಈ ಪ್ರಚೋದನಾಕಾರಿ ಹೇಳಿಕೆ ಪ್ರಕಟಿಸಿದ್ದರು ಎಂದು ಆರೋಪಿಸಲಾಗಿದೆ.
ಇದೇ ರೀತಿ ಪ್ರವೀಣ್ ಚೌಗುಲೆಯ ಕೃತ್ಯವನ್ನು ವಿಶ್ವದಾಖಲೆ ಎಂದು ಬಣ್ಣಿಸಿದ ಹಿಂದೂ ಮಂತ್ರ ಎಂಬ ಸಾಮಾಜಿಕ ಜಾಲಾತಾಣದ ಮೇಲೂ ಪೊಲೀಸರು ಸ್ವಯಂ ದೂರು ದಾಖಲಿಸಿದ್ದಾರೆ.