ಸಾರಾಂಶ
ನೆಲಮಂಗಲ: ನಗರಸಭೆ ವ್ಯಾಪ್ತಿಯಲ್ಲಿ ಸುಸಜ್ಜಿತ ನಗರ ನಿರ್ಮಾಣಕ್ಕೆ ನಗರದ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ನಗರಸಭೆ ಅಧ್ಯಕ್ಷ ಎನ್.ಗಣೇಶ್ ಹೇಳಿದರು.
ನಗರಸಭೆ 2025-26ನೇ ಸಾಲಿನ ಆಯವ್ಯಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ನ್ಯೂಟೌನ್ ರಸ್ತೆ ಅಭಿವೃದ್ಧಿಗೆ 85 ಲಕ್ಷ ಅನುದಾನ ಬಿಡುಗಡೆಯಾಗಿದ್ದು ಶಾಸಕರ ನೇತೃತ್ವದಲ್ಲಿ ಭೂಮಿಪೂಜೆ ನೆರವೇರಿಸಲಾಗುವುದು. ರಾಜಕಾಲುವೆ ಒತ್ತುವರಿ ತೆರವುಗೊಳಿಸಿ ಐದು ಮೇಲ್ಸೆತುವೆ ನಿರ್ಮಾಣ ಮಾಡುವುದಾಗಿ ಮಾಹಿತಿ ನೀಡಿದರು.ನಗರಸಭೆ ವ್ಯಾಪ್ತಿ ಪ್ರದೇಶಗಳಲ್ಲಿ ಆಗಬೇಕಿರುವ ಅಭಿವೃದ್ಧಿ ಕೆಲಸಗಳು, ಸಮಸ್ಯೆಗಳಿಗೆ ಪರಿಹಾರ ಕುರಿತಾಗಿ ಸಲಹೆ ಸೂಚನೆಗಳನ್ನು ಸಂಗ್ರಹಿಸುವ ಉದ್ದೇಶದಿಂದ ಜನಪ್ರತಿನಿಧಿಗಳು, ಸಾರ್ವಜನಿಕರು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಭೆಯಲ್ಲಿ ನೀರಿನ ಸಮಸ್ಯೆ, ಸ್ವಚ್ಛತೆ, ರಸ್ತೆ ಸಮಸ್ಯೆಗಳ ಕುರಿತಾದ ಚರ್ಚೆಗಳನ್ನು ಆಲಿಸಿದರು.
ಕರ್ನಾಟಕ ರಾಷ್ಟ್ರ ಸಮಿತಿ ಜಿಲ್ಲಾ ಉಪಾಧ್ಯಕ್ಷ ಅರುಣ್ ಕುಮಾರ್ ಮಾತನಾಡಿ, ನಗರದ ಕೆಲವೆಡೆ ಸುಸಜ್ಜಿತ ಶೌಚಾಲಯ ವ್ಯವಸ್ಥೆ, ಮೂಲ ಸೌಕರ್ಯಕ್ಕೆ ಆದ್ಯತೆ ನೀಡಿ ಬಸ್ ನಿಲ್ದಾಣ ಉದ್ಘಾಟಿಸಿ ಬಸ್ ನಿಲುಗಡೆಗೆ ಶೀಘ್ರ ಕ್ರಮ ವಹಿಸುವಂತೆ ಒತ್ತಾಯಿಸಿದರು.ಮುಖಂಡ ಎಚ್.ಜಿ.ರಾಜು ಮಾತನಾಡಿ, ನಗರದಲ್ಲಿ ಸ್ವಚ್ಛತೆ, ತ್ಯಾಜ್ಯ ವಿಲೇವಾರಿ ಘಟಕ ಸೇರಿದಂತೆ ನಗರದ ಬೀದಿದೀಪ ನಿರ್ವಹಣೆಗೆ ಅನುದಾನ ನೀಡಬೇಕು. ಸ್ವಚ್ಛತೆ ವಿಚಾರದಲ್ಲಿ ತಾರತಮ್ಯ ಮಾಡಬಾರದು. ರಸ್ತೆ ನಿರ್ಮಾಣ, ಕುಡಿಯುವ ನೀರಿನ ಬಗ್ಗೆ ಶಾಶ್ವತ ಪರಿಹಾರ ಸೇರಿದಂತೆ ಈ ಬಾರಿ ತೆರಿಗೆಯಲ್ಲಿ ಸ್ವಲ್ಪ ವಿನಾಯಿತಿ ನೀಡಬೇಕೆಂದು ತಿಳಿಸಿದರು.
ದಲಿತ ಸಂಘಟನೆ ನಾರಾಯಣಮೂರ್ತಿ ಮಾತನಾಡಿ, ನಗರ ವೇಗವಾಗಿ ಬೆಳೆಯುತ್ತಿದ್ದು ಬಜೆಟ್ ಪ್ರಮಾಣ ಹೆಚ್ಚಾಗಬೇಕಿದೆ. ಪರಿಶಿಷ್ಟ ಜಾತಿ ಪಂಗಡದವರಿಗೆ ಮೀಸಲಿಟ್ಟ ಅನುದಾನದಲ್ಲಿ ಆರ್ಥಿಕ ಅಭಿವೃದ್ಧಿ ಯೋಜನೆ ರೂಪಿಸಬೇಕೆಂದು ಮನವಿ ಮಾಡಿದರು.ನಗರಸಭೆ ಅಧ್ಯಕ್ಷ ಎನ್.ಗಣೇಶ್ ಮಾತನಾಡಿ, ಸ್ವಚ್ಛ ಹಾಗೂ ಅಭಿವೃದ್ಧಿ ನಗರ ನಿರ್ಮಾಣ ಮಾಡುವಲ್ಲಿ ಪ್ರತಿಯೊಬ್ಬರು ಕೈಜೋಡಿಸಬೇಕು. ನಗರಸಭೆ 2025-26ನೇ ಸಾಲಿನ ಆಯ-ವ್ಯಯ ಸಭೆಯಲ್ಲಿ ಸಾರ್ವಜನಿಕರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ನೀಡಿರುವ ಸಲಹೆಗಳನ್ನು ಸರ್ವ ಸದಸ್ಯರ ಗಮನಕ್ಕೆ ತಂದು ಅನುಷ್ಠಾನಗೊಳಿಸಲಾಗುವುದು ಎಂದರು.
ನಗರಸಭೆ ಪೌರಾಯುಕ್ತ ಮನುಕುಮಾರ್ ಮಾತನಾಡಿ, ನಗರಾದ್ಯಂತ ಅಭಿವೃದ್ಧಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಕಳೆದ ಬಾರಿ 88 ಲಕ್ಷ ಉಳಿತಾಯ ಬಜೆಟ್ ನೀಡಿದ್ದು ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿದೆ. ಈಬಾರಿ ಸಾರ್ವಜನಿಕ ಸಲಹೆ ಸೂಚನೆ ಹಾಗೂ ಜನಪ್ರತಿನಿಧಿಗಳ ಮಾರ್ಗದರ್ಶನದಂತೆ ಅಭಿವೃದ್ಧಿ ಕಾರ್ಯಗಳಿಗೆ ಪೂರಕವಾಗುವ ನಿಟ್ಟನಲ್ಲಿ ಅಧ್ಯಕ್ಷರ ನೇತೃತ್ವದಲ್ಲಿ 2025-26ನೇ ಸಾಲಿನ ಬಜೆಟ್ ಮಂಡನೆ ಮಾಡಲಾಗುವುದು ಎಂದು ಹೇಳಿದರು.ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷ ಜಿ.ಆನಂದ್ ಸ್ಥಾಯಿ ಸಮಿತಿ ಅದ್ಯಕ್ಷ ಸುನೀಲ್‌ಮೂಡ್, ನಿಕಟಪೂರ್ವ ಅಧ್ಯಕ್ಷೆ ಪೂರ್ಣಿಮಾ, ಸದಸ್ಯ ಅಂಜಿನಪ್ಪ, ಶಿವಕುಮಾರ್, ಲತಾ, ಲೋಕಾಕ್ಷಿ, ಹೆಚ್ಚುವರಿ ಸದಸ್ಯ ಅಂಜನಾಮೂರ್ತಿ, ಕೃಪಾನಂದ್, ಮುನಿರಾಜು, ಎಇಇ ನಾಗಲಿಂಗ ಬಡಿಗೇರ್, ಎಇ ಶ್ರೀನಿವಾಸ್, ಲೆಕ್ಕ ಪರಿಶೋಧಕ ನಾಗೇಶ್, ಜನಸೈನ್ಯ ಸಂಘಟನೆ ಅಧ್ಯಕ್ಷ ನರಸಿಂಹಯ್ಯ, ಗಂಗಬೈಲಪ್ಪ, ಗಂಗಾಧರ್, ನಾರಾಯಣ ಮೂರ್ತಿ, ಎನ್.ರಾಜಶೇಖರ್, ಆನಂದ್, ವೈ.ಮೌರ್ಯ, ಬೈರಪ್ಪ ಮತ್ತಿತರರು ಉಪಸ್ಥಿತರಿದ್ದರು.
ಪೊಟೊ-1 ಕೆ ಎನ್ ಎಲ್ ಎಮ್ 1-ನೆಲಮಂಗಲದಲ್ಲಿ ನಗರಸಭೆ 2025-26ನೇ ಸಾಲಿನ ಆಯವ್ಯಯ ಕುರಿತಾದ ಪೂರ್ವಭಾವಿ ಸಭೆಯನ್ನು ನಗರಸಭೆ ಅಧ್ಯಕ್ಷ ಗಣೇಶ್ ಉದ್ಘಾಟಿಸಿದರು. ಉಪಾಧ್ಯಕ್ಷ ಆನಂದ್, ಪೌರಾಯುಕ್ತ ಮನುಕುಮಾರ್ ಇತರರಿದ್ದರು.