ನಾಳೆಗೆ...........42 ಕೋಟಿ ವೆಚ್ಚದಲ್ಲಿ ನೆಲಮಂಗಲ ತಾಲೂಕು ಆಸ್ಪತ್ರೆ ನಿರ್ಮಾಣ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭರವಸೆ

| Published : May 07 2025, 12:45 AM IST

ನಾಳೆಗೆ...........42 ಕೋಟಿ ವೆಚ್ಚದಲ್ಲಿ ನೆಲಮಂಗಲ ತಾಲೂಕು ಆಸ್ಪತ್ರೆ ನಿರ್ಮಾಣ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭರವಸೆ
Share this Article
  • FB
  • TW
  • Linkdin
  • Email

ಸಾರಾಂಶ

ನೆಲಮಂಗಲ ತಾಲೂಕು ಆಸ್ಪತ್ರೆಯು ಹಳೆಯದಾಗಿದೆ, ಸಮಯಕ್ಕೆ ನೀಡಬೇಕಾದ ಸೇವೆಗಳನ್ನು ಒದಗಿಸಲು ಆಗುತ್ತಿಲ್ಲ. ಇಲ್ಲಿ ಪ್ರತಿನಿತ್ಯ ನೂರಾರು ರೋಗಿಗಳು ಚಿಕಿತ್ಸೆ ಪಡೆಯಲು ದೂರದ ಹಳ್ಳಿಗಳಿಂದ ಬರುತ್ತಾರೆ.

ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ

ಕನ್ನಡಪ್ರಭ ವಾರ್ತೆ ದಾಬಸ್‍ಪೇಟೆ/ ನೆಲಮಂಗಲ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರಾದ ದಿನೇಶ್ ಗುಂಡೂರಾವ್ ಅವರು ನೆಲಮಂಗಲ, ಸೋಲೂರು, ದಾಬಸ್‍ಪೇಟೆ ಮತ್ತು ಬೇಗೂರು ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಸಾರ್ವಜನಿಕರಿಗೆ ಉತ್ತಮ ಆರೋಗ್ಯವನ್ನು ಒದಗಿಸುವ ನಿಟ್ಟಿನಲ್ಲಿ ಆಸ್ಪತ್ರೆಗಳ ಪಾತ್ರ ಬಹಳ ಮುಖ್ಯ. ಆಸ್ಪತ್ರೆಗಳಲ್ಲಿ ಎಲ್ಲಾ ಮೂಲಭೂತ, ಔಷಧೋಪಚಾರ ಸೌಕರ್ಯ ಇರಬೇಕು. ಹಾಗಾಗಿ ಸಾರ್ವಜನಿಕರ ಆರೋಗ್ಯವನ್ನು ಕಾಪಾಡಲು ನಮ್ಮ ಸರ್ಕಾರವು ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದೆ ಎಂದರು.

ನೆಲಮಂಗಲ, ಸೋಲೂರು ಮತ್ತು ದಾಬಸ್‍ಪೇಟೆ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಟಿ.ಬೇಗೂರು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳಿಂದ, ವೈದ್ಯರಿಂದ ಅಭಿಪ್ರಾಯ, ಮಾಹಿತಿ ಪಡೆದು ಆಸ್ಪತ್ರೆಗಳಿಗೆ ಅವಶ್ಯಕತೆ ಇರುವ ಸೌಲಭ್ಯಗಳನ್ನು ಒದಗಿಸಲು ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದರು.

ಹೊಸ ತಾಲೂಕು ಆಸ್ಪತ್ರೆ ನಿರ್ಮಾಣ:

ಕಳೆದ ಬಜೆಟ್‌ನಲ್ಲಿ ನೆಲಮಂಗಲ ಹಾಗೂ ಹೊಸಕೋಟೆ ಸಾರ್ವಜನಿಕ ಆಸ್ಪತ್ರೆ ನಿರ್ಮಾಣಕ್ಕಾಗಿ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ಬಳಿ ನಾವು ತಿಳಿಸಿದಾಗ ಆಸ್ಪತ್ರೆಗಳ ನಿರ್ಮಾಣಕ್ಕೆ ಹಣ ಮೀಸಲಿರಿಸಿದ್ದಾರೆ. ಇದು ಖುಷಿಯ ವಿಚಾರವಾಗಿದೆ ಎಂದರು.

ಜೂ. 15ರೊಳಗೆ ಗುದ್ದಲಿ ಪೂಜೆ:

ನೆಲಮಂಗಲ ತಾಲೂಕು ಆಸ್ಪತ್ರೆಯು ಹಳೆಯದಾಗಿದೆ, ಸಮಯಕ್ಕೆ ನೀಡಬೇಕಾದ ಸೇವೆಗಳನ್ನು ಒದಗಿಸಲು ಆಗುತ್ತಿಲ್ಲ. ಇಲ್ಲಿ ಪ್ರತಿನಿತ್ಯ ನೂರಾರು ರೋಗಿಗಳು ಚಿಕಿತ್ಸೆ ಪಡೆಯಲು ದೂರದ ಹಳ್ಳಿಗಳಿಂದ ಬರುತ್ತಾರೆ. ಆದ್ದರಿಂದ ಈಗಿರುವ ಸ್ಥಳದಲ್ಲಿ ಆಸ್ಪತ್ರೆ ನಿರ್ಮಿಸಲು ಜಾಗ ಸಾಕಾಗುವುದಿಲ್ಲ, ಹಾಗಾಗಿ ಆದಷ್ಟು ಬೇಗ ಜನರಿಗೆ ಹತ್ತಿರವಾಗುವ ಸ್ಥಳವನ್ನು ಗುರುತಿಸಿ ತಾಲೂಕು ಆಸ್ಪತ್ರೆ ನಿರ್ಮಾಣಕ್ಕೆ ಜೂ.15ರೊಳಗೆ ಗುದ್ದಲಿ ಪೂಜೆಯನ್ನು ಮಾಡುತ್ತೇವೆ. ಇನ್ನೂ ಒಂದೆರಡು ತಿಂಗಳೊಳಗೆ ಕಾಮಗಾರಿಯನ್ನು ಪ್ರಾರಂಭ ಮಾಡುತ್ತೇವೆ. ಪ್ರಸ್ತುತ ಇರುವ ಆಸ್ಪತ್ರೆಯನ್ನು ಹೊಸದಾಗಿ ನವೀಕರಣ ಮಾಡಿ, ಬೇರೆ ಕೆಲಸಗಳಿಗೆ ಬಳಸಿಕೊಳ್ಳಲಾಗುವುದು ಎಂದರು.

ಈ ಸಂದರ್ಭದಲ್ಲಿ ಶಾಸಕ ಎನ್.ಶ್ರೀನಿವಾಸ್, ಉಪವಿಭಾಗಾಧಿಕಾರಿ ದುರ್ಗಶ್ರೀ, ತಹಸೀಲ್ದಾರ್ ಅಮೃತ್ ಆತ್ರೇಶ್, ಎನ್ ಡಿಎ ಅಧ್ಯಕ್ಷ ನಾರಾಯಣಗೌಡ, ನಗರಸಭೆ ಅಧ್ಯಕ್ಷ ಗಣೇಶ್, ಸದಸ್ಯರಾದ ಪ್ರದೀಪ್, ಪೂರ್ಣಿಮಾ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಆರ್.ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನಾಗರಾಜು, ಜಗದೀಶ್, ಮುಖಂಡರಾದ ಅಗಳಕುಪ್ಪೆ ಗೋವಿಂದರಾಜು, ಎಂ.ಕೆ.ನಾಗರಾಜು, ಅಂಚೆಮನೆ ಪ್ರಕಾಶ್, ಶೈಲೇಂದ್ರ, ಚಂದ್ರಶೇಖರ್, ಬಿ.ಟಿ.ರಾಮಚಂದ್ರ, ಚಂದ್ರಶೇಖರ್ ಸೇರಿದಂತೆ ಗ್ರಾ.ಪಂ.ಅಧ್ಯಕ್ಷರು, ಸದಸ್ಯರು, ಮುಖಂಡರು ಮತ್ತು ಕಾರ್ಯಕರ್ತರು, ಅಧಿಕಾರಿಗಳು ಉಪಸ್ಥಿತರಿದ್ದರು.

ಪೋಟೋ 10 : ಟಿ.ಬೇಗೂರು ಸಮೀಪ ನಿರ್ಮಾಣವಾಗಲಿರುವ ತಾಲೂಕು ಆಸ್ಪತ್ರೆಯ ಜಾಗವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರಾದ ದಿನೇಶ್ ಗುಂಡೂರಾವ್ ಪರಿಶೀಲನೆ ನಡೆಸಿ ಅಧಿಕಾರಿಗಳ ಜೊತೆ ಚರ್ಚಿಸಿದರು.