ಸಾರಾಂಶ
ಕೊಡಿಮರ ಇಳಿಸುವ ಮೂಲಕ ಉತ್ಸವ ಸಂಪನ್ನದೊಂದಿಗೆ ದೇವರ ಕಟ್ಟು ತೆರವುಗೊಂಡಿತು. ಅಪಾರ ಭಕ್ತ ಸಮೂಹ ಕಣ್ತುಂಬಿಕೊಂಡಿತು.
ಕನ್ನಡಪ್ರಭ ವಾರ್ತೆ ಶ್ರೀಮಂಗಲ
ಪೊನ್ನಂಪೇಟೆ ತಾಲೂಕು ನೆಮ್ಮಲೆ ಗ್ರಾಮ ಕಿತ್ತ್ ಶ್ರೀ ಅಯ್ಯಪ್ಪ ದೇವರ ವಾರ್ಷಿಕ ಉತ್ಸವ ಅತ್ಯಂತ ಶ್ರದ್ಧಾ ಭಕ್ತಿ ಯೊಂದಿಗೆ ಜರುಗಿ, ಸೋಮವಾರ ಕೊಡಿಮರ ಇಳಿಸುವ ಮೂಲಕ ಉತ್ಸವ ಸಂಪನ್ನದೊಂದಿಗೆ, ದೇವರ ಕಟ್ಟು ತೆರವು ಗೊಂಡಿತು.ಉತ್ಸವ ಪ್ರಯುಕ್ತ 24 ರಂದು ರಾತ್ರಿ 7 ಗಂಟೆ ಕೊಡಿಮರ ನಿಲ್ಲಿಸುವುದರೊಂದಿಗೆ ಉತ್ಸವ ಪ್ರಾರಂಭವಾಗಿದ್ದು, 28ರವರೆಗೆ ಹರಕೆ ಹಾಗೂ ಊರ್ ಬೊಳಕ್ ನಡೆದು 29 ರಂದು ನೆರ್ಪು ದಿವಸ ರಾತ್ರಿ ದೇವರ ಉತ್ಸವಮೂರ್ತಿಯ ದರ್ಶನ ಹಾಗೂ ವಸಂತಪೂಜೆ ನಡೆಯಿತು. 30 ರಂದು ಭಾನುವಾರ ದೇವರ ಅವಭೃ ತ ಸ್ನಾನದೊಂದಿಗೆ ಉತ್ಸವ ವಿಜೃಂಭಣೆಯಿಂದ ಜರುಗಿದೆ.
ಭಾನುವಾರ ಬೆಳಗ್ಗೆಯಿಂದಲೇ ವಿವಿಧ ಪೂಜಾ ಕೈಂಕರ್ಯಗಳು ನಡೆದು ಮಧ್ಯಾಹ್ನ ಮಹಾಪೂಜೆ, ಅಪರಾಹ್ನ 4 ಗಂಟೆಗೆ ತೆಂಗಿನಕಾಯಿಗೆ ಗುಂಡು ಹೊಡೆಯುವುದು, 5-30 ಗಂಟೆಗೆ ದೇವರ ಉತ್ಸವ ಮೂರ್ತಿಯ ದರ್ಶನ ಹಾಗೂ ದೇವರ ನೃತ್ಯ, 6-30 ಗಂಟೆಗೆ ದೇವರ ಅವಭೃತ ಸ್ನಾನ, ಉತ್ಸವ ಮೂರ್ತಿಯ ಅಲಂಕಾರ ಹಾಗೂ ಪೂಜೆ, ನೈವೇದ್ಯ ಸಮರ್ಪಣೆ, ರಾತ್ರಿ 7-30ರಿಂದ 10 ಗಂಟೆಯವರೆಗೆ ವಿಶೇಷ ಚಂಡೆ ಮೇಳದೊಂದಿಗೆ ದೇವರ ಅಲಂಕೃತ ಉತ್ಸವ ಮೂರ್ತಿಯೊಂದಿಗೆ ದೇವರ ನೃತ್ಯ, ವಿಗ್ರಹ ಹಾಗೂ ಉತ್ಸವ ಮೂರ್ತಿಗೆ ಮಹಾಮಂಗಳಾರತಿಯೊಂದಿಗೆ ಉತ್ಸವ ಸಂಪನ್ನವಾಯಿತು.ವಿಶೇಷ ಹೂವಿನ ಹಾಗೂ ವಿದ್ಯುದ್ದೀಪಗಳ ಅಲಂಕಾರ, ಚಂಡೆ, ಕೊಡವ ವಾಲಗ, ಸಿಡಿಮದ್ದುಗಳ ಪ್ರದರ್ಶನವನ್ನು ನೆರೆದಿದ್ದ ಅಪಾರ ಭಕ್ತಸಮೂಹ ಕಣ್ತುಂಬಿಕೊಂಡಿತು. ಹಬ್ಬದ ಆರಂಭದ ದಿನದಿಂದ ಅಂತಿಮ ದಿನದವರೆಗೂ ರಾತ್ರಿ ಭಕ್ತಾದಿಗಳೆಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿತ್ತು. ಗ್ರಾಮದ ತಕ್ಕ ಮುಖ್ಯಸ್ಥರಾದ ಚೆಟ್ಟಂಗಡ ಹ್ಯಾರಿ ನಾಣಯ್ಯ, ಆಡಳಿತ ಮಂಡಳಿ ಅಧ್ಯಕ್ಷ ಚೊಟ್ಟೆಯಾಂಡಮಾಡ ವಿಶ್ವನಾಥ್ ಹಾಗೂ ಸಮಿತಿ ಸದಸ್ಯರ ಮುಂದಾಳತ್ವದಲ್ಲಿ ಹಾಗೂ ಗ್ರಾಮದ ಅರ್ಚಕರಾದ ಜಯಂತರವರ ನೇತ್ರತ್ವದಲ್ಲಿ ದೈವಿಕ ಕಾರ್ಯಗಳು ಹಾಗೂ ಉತ್ಸವ ವಿಜೃಂಭಣೆಯಿಂದ ಜರುಗಿತು.