ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ತಾಲೂಕಿನ ಕುಕ್ಕೇಡಿ ಗ್ರಾ.ಪಂ. ವ್ಯಾಪ್ತಿಯ ಬರ್ಕಜೆ ಶ್ರೀ ದುರ್ಗಾಪರಮೇಶ್ವರಿ ಮತ್ತು ನವಗುಳಿಗ ಕ್ಷೇತ್ರದ ವಾರ್ಷಿಕ ಜಾತ್ರೋತ್ಸವದಲ್ಲಿ ಫೆ. ೪ರಂದು ಒಂದೇ ರಾತ್ರಿ ಜರುಗಿದ ೧೮ ಗುಳಿಗ ದೈವಗಳ ಗಗ್ಗರಸೇವೆಯನ್ನು ಸಹಸ್ರಾರು ಜನ ವೀಕ್ಷಿಸಿದರು.ಕ್ಷೇತ್ರದ ಗುಳಿದ ದೈವದ ಗಗ್ಗರ ಸೇವೆ ಜರುಗಿದ ಬಳಿಕ ಹರಕೆಯ ೯ ಗುಳಿಗ ದೈವಗಳಿಗೆ ಗಗ್ಗರ ಸೇವೆ ಜರಗಿತು. ಆ ಬಳಿಕ ಮತ್ತೆ ಹರಕೆಯ ೯ ಗುಳಿಗ ದೈವಗಳ ಗಗ್ಗರ ಸೇವೆ ನೆರವೇರಿತು. ಫೆ.೧ರಂದು ೯ನೇ ವರ್ಷದ ವಾರ್ಷಿಕ ಜಾತ್ರಾತ್ಸವಕ್ಕೆ ಚಾಲನೆ ದೊರೆತು ವಾಸ್ತುಪೂಜೆ, ವಾಸ್ತುಹೋಮ, ದಿಕ್‌ಬಲಿ ಮುಂತಾದ ಧಾರ್ಮಿಕ ವಿಧಿ ವಿಧಾನಗಳು ನಡೆಯಿತು. ಫೆ.೨ರಂದು ಕ್ಷೇತ್ರದ ನಾಗದೇವರ ಸನ್ನಿಧಿಯಲ್ಲಿ ನಾಗತಂಬಿಲ, ದುರ್ಗಾದೇವಿ ಗುಡಿಯಲ್ಲಿ ಜರಗಿದ ಮಹಾಚಂಡಿಕಾಯಾಗ ನೆರವೇರಿತು. ಆಗಮಿಸಿದ ಭಕ್ತಾದಿಗಳು ದೇವರಿಗೆ ರಂಗಪೂಜೆ, ಹೂವಿನಪೂಜೆ, ಹಣ್ಣುಕಾಯಿ, ತುಲಾಭಾರ ಸೇವೆ, ಪಂಚಕಜ್ಜಾಯ, ಗುಳಿಗ ದೈವಕ್ಕೆ ಪಂಚಕಜ್ಜಾಯ, ಸರ್ವಸೇವೆ ಕುಂಕುಮಾರ್ಚನ ಸೇವೆಗಳನ್ನು ಸಮರ್ಪಿಸಿದರು.
ಜಾತ್ರೋತ್ಸವದ ಹಿನ್ನೆಲೆಯಲ್ಲಿ ಫೆ. ೩ರಂದು ಕ್ಷೇತ್ರದಲ್ಲಿ ೧೦೮ ಕಲಶಾಭಿಷೇಕ, ಗಣಹೋಮ, ರಂಗಪೂಜೆ, ಮಧ್ಯಾಹ್ನ ಮಹಾಪೂಜೆ ನಡೆಯಿತು. ಬಳಿಕ ಅನ್ನಸಂತರ್ಪಣೆ ನಡೆಯಿತು. ಮಧ್ಯಾಹ್ನ ಕ್ಷೇತ್ರದಲ್ಲಿ ಭಜನೆ, ರಾತ್ರಿ ಮಹಾಪೂಜೆ ಬಳಿಕ ಅನ್ನ ಸಂತರ್ಪಣೆ ನಡೆಯಿತು.ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಶ್ವವಿಖ್ಯಾತ ಡಾ. ಸುಧಾಕರ್ ಅವರು ಪ್ರಸ್ತುತಪಡಿಸಿದ ಜಾದೂ ಪ್ರದರ್ಶನ ನೆರೆದಿದ್ದ ವೀಕ್ಷಕರನ್ನು ನಿಬ್ಬೆರಗಾಗಿಸಿತು. ಸಂಜೆ ನಡೆದ ಶ್ರೀ ರಾಮಕುಂಜೇಶ್ವರ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಂದ ಕಲಾ ಸಿಂಚನ ಸಾಂಸ್ಕೃತಿಕ ಹಾಗೂ ವಿಠಲ ನಾಯಕ್ ಕಲ್ಲಡ್ಕ ತಂಡದವರಿಂದ ವಿನೂತನ ಶೈಲಿಯ ಕಾರ್ಯಕ್ರಮ ಗೀತಾ ಸಾಹಿತ್ಯ ಸಂಭ್ರಮ ಜನರನ್ನು ಮನಸೂರೆಗೊಳಿಸಿತು.
ಫೆ. ೪ರಂದು ಬೆಳಗ್ಗೆ ಜರುಗಿದ ಪರಿವಾರ ದೈವಗಳು ಹಾಗೂ ಕೊರಗಜ್ಜನ ಗಗ್ಗರಸೇವೆಯಲ್ಲಿ ನೂರಾರು ಭಕ್ತರು ಪಾಲ್ಗೊಂಡು ದೈವಗಳ ದರ್ಶನ ಪಡೆದು ಕೃಪೆಗೆ ಪಾತ್ರರಾದರು. ರಾತ್ರಿ ಶಿವದೂತೆ ಗುಳಿಗೆ ನಾಟಕ ಪ್ರದರ್ಶನಗೊಂಡಿತು. ಫೆ.೫ರಂದು ಪರಿವಾರ ದೈವಗಳಿಗೆ ಪರ್ವಸೇವೆ ಜರಗಿ ವಾರ್ಷಿಕ ಜಾತ್ರೋತ್ಸವ ಸಂಪನ್ನಗೊಂಡಿತು.ಕ್ಷೇತ್ರದ ಧರ್ಮದರ್ಶಿ ರಮೇಶ್ ಬರ್ಕಜೆ, ರಮಾನಂದ ಬರ್ಕಜೆ, ಸುಧಾಕರ ಬರ್ಕಜೆ ಆಗಮಿಸಿದ ಭಕ್ತಾಧಿಗಳನ್ನು ಸ್ವಾಗತಿಸಿದರು. ಕ್ಷೇತ್ರದ ಭಕ್ತರು ಕಾರ್ಯಕ್ರಮದಲ್ಲಿ ಸಹಕರಿಸಿದರು.