ನವಜಾತ ಶಿಶು ಸಾವು: ಬೆಣಚಿನಮರ್ಡಿ ಗ್ರಾಮಸ್ಥರ ಪ್ರತಿಭಟನೆ

| Published : Jul 05 2024, 12:47 AM IST

ನವಜಾತ ಶಿಶು ಸಾವು: ಬೆಣಚಿನಮರ್ಡಿ ಗ್ರಾಮಸ್ಥರ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ನಗರದ ಖಾಸಗಿ ಆರೋಗ್ಯ ಆಧಾರ ಆಸ್ಪತ್ರೆಯಲ್ಲಿ ನವಜಾತ ಶಿಶು ಮೃತಪಟ್ಟ ಹಿನ್ನೆಲೆಯಲ್ಲಿ ಬೆಣಚಿನಮರ್ಡಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಘಟನೆ ಬುಧವಾರ ಜರುಗಿದೆ.

ಕನ್ನಡಪ್ರಭ ವಾರ್ತೆ ಗೋಕಾಕ

ನಗರದ ಖಾಸಗಿ ಆರೋಗ್ಯ ಆಧಾರ ಆಸ್ಪತ್ರೆಯಲ್ಲಿ ನವಜಾತ ಶಿಶು ಮೃತಪಟ್ಟ ಹಿನ್ನೆಲೆಯಲ್ಲಿ ಬೆಣಚಿನಮರ್ಡಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಘಟನೆ ಬುಧವಾರ ಜರುಗಿದೆ.

ನಗರದ ಆರೋಗ್ಯ ಆಧಾರ ಆಸ್ಪತ್ರೆಯಲ್ಲಿ ಬೆಣಚಿನಮರ್ಡಿ ಗ್ರಾಮದ ನವಜಾತ ಶಿಶುವೊಂದನ್ನು ಕಳೆದ ನಾಲ್ಕು ದಿನಗಳಿಂದ ಚಿಕಿತ್ಸೆಗೆ ದಾಖಲಿಸಿದ್ದು, ಮಂಗಳವಾರ ವೈದ್ಯರು ಶಿಶು ಆರೋಗ್ಯವಾಗಿದೆ ಎಂದು ಪೋಷಕರಿಗೆ ತಿಳಿಸಿದ್ದರು. ಬುಧವಾರ ಬೆಳಗ್ಗೆ ಶಿಶು ಬಿಳಿರಕ್ತ ಕಣಗಳು ಕಡಿಮೆಯಾಗಿರುವುದರಿಂದ ಅಸುನೀಗಿದೆ ಎಂದು ವೈದ್ಯರು ಸರಿಯಾಗಿ ಮಾಹಿತಿ ನೀಡದ್ದರಿಂದ ಬೆಣಚಿನಮರ್ಡಿ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು.ಸವಿತಾ ಶಿವಾನಂದ ಬಡಬಡಿ ಅವರು ಗರ್ಭಿಣಿಯಾದಾಗಿನಿಂದ ಮಗು ಜನಿಸುವವರೆಗೆ ನಗರದ ಖಾಸಗಿ ಆರೋಗ್ಯ ಆಧಾರ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದರು. ಜೂ.30 ರಂದು ಸವಿತಾ ಅವರಿಗೆ ಬೆಳಗಿನ ಜಾವ ಗಂಡು ಮಗು ಜನಿಸಿದ್ದು, ಶಿಶುವಿಗೆ ಆರೋಗ್ಯದಲ್ಲಿ ಏರುಪೇರಾದ್ದರಿಂದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡುತ್ತಿದ್ದರು. ಜು.2 ರಂದು ಮಗುವಿನ ಆರೋಗ್ಯದಲ್ಲಿ ಚೇತರಿಕೆಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಜು.2ರಂದು ರಾತ್ರಿ ಸಮಯದಲ್ಲಿ ಶಿಶುವಿನಲ್ಲಿ ಬಿಳಿ ರಕ್ತ ಕಣಗಳು ಕಡಿಮೆ ಇರುವುದಾಗಿ ತಿಳಿಸಿದ ವೈದ್ಯರು ಮುಧೋಳದಿಂದ ಬಿಳಿರಕ್ತಕಣಗಳನ್ನು ತರಿಸಿಕೊಂಡು ಶಿಶುವಿಗೆ ಹಾಕಲಾಗಿದೆ. ಜು.3 ರಂದು ಬೆಳಗ್ಗೆ ಶಿಶು ಮೃತಪಟ್ಟಿದೆ ಎಂದು ವೈದ್ಯರು ತಿಳಿಸುತ್ತಿದ್ದಂತೆ ಪೋಷಕರು, ಗ್ರಾಮಸ್ಥರು ಸೇರಿ ಪ್ರತಿಭಟನೆ ನಡೆಸಿದ್ದಾರೆ. ಶಿಶು ಆರೋಗ್ಯವಾಗಿದೆ ಎಂದು ಹೇಳಿರುವ ವೈದ್ಯರು ಬಿಳಿರಕ್ತ ಕಣಗಳನ್ನು ಹಾಕಬೇಕಿದೆ ಎಂದು ಹೇಳಿದ ತಕ್ಷಣ ರಕ್ತಕಣಗಳನ್ನು ತರಲಾಗಿದೆ. ಆದರೆ, ಬೆಳಗ್ಗೆ ಶಿಶು ಸಾವನ್ನಪ್ಪಿದೆಂದು ವೈದ್ಯರು ಹೇಳುತ್ತಾರೆ. ಇದು ಸುಳ್ಳು ಜು.02ರ ರಾತ್ರಿ 9 ಗಂಟೆಗೆ ಶಿಶು ಸಾವನ್ನಪ್ಪಿದ್ದು, ವೈದ್ಯರು ಸುಳ್ಳು ಹೇಳಿ ಮೃತ ಶಿಶುವಿಗೆ ಚಿಕಿತ್ಸೆ ನೀಡಿದ್ದಾರೆಂದು ಪೋಷಕರು ಆರೋಪಿಸಿದ್ದಾರೆ. ಪೋಷಕರು, ಗ್ರಾಮಸ್ಥರು ಪ್ರತಿಭಟಿಸುತ್ತಿರುವ ಸುದ್ದಿ ತಿಳಿದು ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ. ಈ ಕುರಿತು ಗೋಕಾಕ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಇದುವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ.

ಆಸ್ಪತ್ರೆಯ ಮೇಲೆ ಹಲ್ಲೆ ಮಾಡಿಸಿ ರಾಜಕೀಯ: ಡಾ.ಮಹಾಂತೇಶ ಕಡಾಡಿ ಆರೋಪಗೋಕಾಕ: ನನ್ನ ಒಡೆತನದ ಆಸ್ಪತ್ರೆಯಲ್ಲಿ ನಮ್ಮ ನಿರ್ಲಕ್ಷ್ಯದಿಂದ ಮಗು ಸಾವನ್ನಪ್ಪಿಲ್ಲ. ಮೃತ ಮಗುವಿನ ಪೋಷಕರನ್ನು ಎತ್ತಿಕಟ್ಟಿ ನಮ್ಮ ಆಸ್ಪತ್ರೆಯ ಮೇಲೆ ಹಲ್ಲೆ ಮಾಡಿಸಿ ರಾಜಕೀಯ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಡಾ.ಮಹಾಂತೇಶ ಕಡಾಡಿ ಆರೋಪಿಸಿದರು.ನಗರದ ತಮ್ಮ ಕಚೇರಿಯಲ್ಲಿ ಗುರುವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂ.30 ರಂದು ಆಸ್ಪತ್ರೆಯಲ್ಲಿ 7 ತಿಂಗಳ 3 ದಿನಗಳಿಗೆ ಮಗುವಿನ ಹೆರಿಗೆಯಾಗಿದ್ದು ಹೆರಿಗೆ ಸಮಯದಲ್ಲಿ ಮಗು 1 ಕಿಲೋ 300 ಗ್ರಾಂ ಗ್ರಾತದಾಗಿತ್ತು. ದಿನಗಳು ಪೂರ್ಣ ತುಂಬದ ಪರಿಣಾಮ ಮಗುವಿನ ಆರೋಗ್ಯದಲ್ಲಿ ಏರುಪೇರಾಗಿ ಪ್ಲೇಟ್ಲೆಟ್ ಕಡಿಮೆ, ಉಸಿರಾಟ ತೊಂದರೆಯಾದ ಮಗುವನ್ನು ಆಕ್ಸಿಜನ್ ಮೇಲೆ ಇಡಲಾಗಿತ್ತು. ಮಗುವಿಗೆ ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಲು ಆಗುವುದಿಲ್ಲ ಎಂಬ ವಿಷಯವನ್ನು ಪಾಲಕರಿಗೆ ಮೊದಲೇ ಮನವರಿಕೆ ಮಾಡಿಕೊಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮಗು ತಿರಿಕೊಂಡಿದೆ. ಇದನ್ನು ಸಹ ಪಾಲಕರಿಗೆ ಮಗುವಿನ ಆರೋಗ್ಯದ ಬಗ್ಗೆ ತಿಳಿಹೇಳಿ ಮನವರಿಕೆ ಮಾಡಿಕೊಡಲಾಗಿತ್ತು. ಆದರೆ, ಬೆನಚಿನಮರಡಿ ಗ್ರಾಮದ ಲಕ್ಕಪ್ಪ ಮಾಳಗಿ, ವಿಠಲ ಗುಂಡಿ, ಬಾಳಪ್ಪ ಗಿಡ್ಡನವರ ಸೇರಿದಂತೆ ಸುಮಾರು 30 ರಿಂದ 35 ಜನರು ಆಸ್ಪತ್ರೆಯ ಮೇಲೆ ದಾಳಿ ಮಾಡಿದ್ದಾರೆ. ಈ ಪ್ರಕರಣ ಮಗುವಿನ ಸಾವಿನಕ್ಕಿಂತ ಇದು ರಾಜಕೀಯ ಪ್ರೇರಿತವಾಗಿದೆ. ಇವರ ಮೇಲೆ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ ಎಂದು ತಿಳಿಸಿದರು.