ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಡಿ.೧೨ ರಿಂದ ೧೪ರವರೆಗೆ ೩ ದಿನಗಳ ಕಾಲ ನಗರದ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ರಾಜ್ಯ ಮಟ್ಟದ ನೆಟ್ ಬಾಲ್ ಪಂದ್ಯಾವಳಿಗೆ ಕೈಗೊಳ್ಳಲಾಗಿರುವ ಸಿದ್ಧತೆಗಳನ್ನು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಪರಿಶೀಲಿಸಿದರು.
ಕನ್ನಡಪ್ರಭ ವಾರ್ತೆ, ಚಾಮರಾಜನಗರ
ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಡಿ.೧೨ ರಿಂದ ೧೪ರವರೆಗೆ ೩ ದಿನಗಳ ಕಾಲ ನಗರದ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ರಾಜ್ಯ ಮಟ್ಟದ ನೆಟ್ ಬಾಲ್ ಪಂದ್ಯಾವಳಿಗೆ ಕೈಗೊಳ್ಳಲಾಗಿರುವ ಸಿದ್ಧತೆಗಳನ್ನು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಪರಿಶೀಲಿಸಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ನೆಟ್ ಬಾಲ್ ಪಂದ್ಯಾವಳಿಯ ಸಿದ್ಧತಾ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಪಂದ್ಯಾವಳಿಗಾಗಿ ಕೈಗೊಂಡಿರುವ ಸಿದ್ದತೆಗಳ ಬಗ್ಗೆ ಜಿಲ್ಲಾಧಿಕಾರಿಯವರು ಪೂರ್ಣ ಮಾಹಿತಿ ಪಡೆದರು.
ಬಳಿಕ ಮಾತನಾಡಿದ ಅವರು, ರಾಜ್ಯಾದ್ಯಂತ ಅಂದಾಜು ೧ ಸಾವಿರ ವಿದ್ಯಾರ್ಥಿಗಳು ನೆಟ್ ಬಾಲ್ ಪಂದ್ಯಾವಳಿಗೆ ಭಾಗವಹಿಸುವ ನಿರೀಕ್ಷೆ ಇರುವ ಹಿನ್ನೆಲೆಯಲ್ಲಿ ಸಮರ್ಪಕವಾಗಿ ನೋಂದಣಿ ಕಾರ್ಯ ಕೈಗೊಳ್ಳಬೇಕು. ಉದ್ಘಾಟನೆ, ವಸತಿ, ಕ್ರೀಡಾಂಗಣಕ್ಕೆ ಅಗತ್ಯವಿರುವ ವ್ಯವಸ್ಥೆಗಳಿಗೆ ಯಾವುದೇ ಲೋಪವಾಗಬಾರದು. ಸ್ಪರ್ಧಿಗಳು ವಾಸ್ತವ್ಯ ಹೂಡುವ ವಸತಿ ಮತ್ತು ಕ್ರೀಡಾಂಗಣದಲ್ಲಿಯೂ ಸೂಕ್ತ ಊಟ ಉಪಾಹಾರ ವ್ಯವಸ್ಥೆ ಇರಬೇಕು.ಕ್ರೀಡಾಂಗಣಕ್ಕೆ ನೀರಿನ ಸಿಂಪಡಣೆ, ಸ್ವಚ್ಛತೆ, ತಾತ್ಕಾಲಿಕ ಶೌಚಾಲಯಕ್ಕಾಗಿ ನಗರಸಭೆ ಅಧಿಕಾರಿಗಳು ಮತ್ತೊಮ್ಮೆ ಭೇಟಿ ನೀಡಿ ಸೂಕ್ತ ಕ್ರಮ ವಹಿಸಬೇಕು. ಪಂದ್ಯಾವಳಿಗೆ ಅಗತ್ಯವಿರುವ ಕ್ರೀಡಾ ಉಪಕರಣಗಳಿಗೆ ಎಲ್ಲ ಸಿದ್ಧತೆ ಇರಬೇಕು. ಕ್ರೀಡಾಂಗಣದಲ್ಲಿ ಕುಡಿಯುವ ನೀರು, ಊಟ ಉಪಹಾರ ವಿತರಣೆಗೆ ಆಹಾರ ಸಮಿತಿ ನಿಗಾ ವಹಿಸಬೇಕು. ಮಕ್ಕಳು ವಾಸ್ತವ್ಯ ಹೂಡವ ಸ್ಥಳಗಳಲ್ಲಿಯೂ ಮೂಲ ಸೌಕರ್ಯಗಳಿಗೆ ಕೊರತೆಯಾಗಬಾರದು. ಮಕ್ಕಳ ಸುರಕ್ಷತೆ, ಸಾರಿಗೆ ವ್ಯವಸ್ಥೆ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಸಮರ್ಪಕವಾಗಿ ಇರುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ, ಉಪವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಚಂದ್ರಪಾಟೀಲ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಸುರೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್. ಚಿದಂಬರ, ನಗರಸಭೆ ಪ್ರಭಾರ ಆಯುಕ್ತ ಪ್ರಕಾಶ್, ಹಿರಿಯ ಕ್ರೀಡಾಪಟು ಶ್ರೀನಿವಾಸ ಪ್ರಸಾದ್, ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.