ನೇತಾಜಿ ಭಾರತದ ನಿಜವಾದ ಹೀರೋ: ದಿನೇಶ್‌ ಗುಂಡೂರಾವ್‌

| Published : Sep 02 2025, 12:00 AM IST

ನೇತಾಜಿ ಭಾರತದ ನಿಜವಾದ ಹೀರೋ: ದಿನೇಶ್‌ ಗುಂಡೂರಾವ್‌
Share this Article
  • FB
  • TW
  • Linkdin
  • Email

ಸಾರಾಂಶ

ಮಂಗಳೂರು ವಿವಿ, ಹಂಪನಕಟ್ಟೆ ವಿವಿ ಕಾಲೇಜು ರವೀಂದ್ರ ಕಲಾಭವನದಲ್ಲಿ ಭಾನುವಾರ ಪ್ರೊ.ಕೆ.ಈ. ರಾಧಾಕೃಷ್ಣ ಅನುವಾದಿಸಿರುವ ನೇತಾಜಿ ಸುಭಾಶ್‌ಚಂದ್ರ ಬೋಸ್‌ ಅವರ ಮೂರು ಪುಸ್ತಕಗಳ ಲೋಕಾರ್ಪಣೆ ಸಮಾರಂಭ ನೆರವೇರಿತು.

ಮಂಗಳೂರು: ಸ್ವಾತಂತ್ರ್ಯ ಹೋರಾಟದಲ್ಲಿ ಅಪ್ರತಿಮ ಸಾಹಸ ಮೆರೆದ ನೇತಾಜಿ ಸುಭಾಶ್ಚಂದ್ರ ಬೋಸ್‌ ಮಹಾನ್‌ ದೇಶಭಕ್ತ. ದೇಶಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ್ದ ನೇತಾಜಿ ಭಾರತದ ನಿಜವಾದ ಹೀರೋ ಎಂದು ಆರೋಗ್ಯ ಮತ್ತು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.

ಮಂಗಳೂರು ವಿವಿ, ಹಂಪನಕಟ್ಟೆ ವಿವಿ ಕಾಲೇಜು ವತಿಯಿಂದ ಮಹಾತ್ಮಾ ಗಾಂಧಿ ಶಾಂತಿ ಪ್ರತಿಷ್ಠಾನ ಸಹಯೋಗದೊಂದಿಗೆ ನಗರದ ವಿವಿ ಕಾಲೇಜು ರವೀಂದ್ರ ಕಲಾಭವನದಲ್ಲಿ ಭಾನುವಾರ ಪ್ರೊ.ಕೆ.ಈ. ರಾಧಾಕೃಷ್ಣ ಅನುವಾದಿಸಿರುವ ನೇತಾಜಿ ಸುಭಾಶ್‌ಚಂದ್ರ ಬೋಸ್‌ ಅವರ ಮೂರು ಪುಸ್ತಕಗಳ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಈಗ ಎಲ್ಲಗೂ ತಾವೇ ದೇಶಭಕ್ತರ ಫೋಸು ಕೊಡುತ್ತಾರೆ, ಆದರೆ ಎಲ್ಲವನ್ನೂ ತ್ಯಾಗ ಮಾಡಿದ ನೇತಾಜಿ ಮಾತ್ರ ಅಪ್ಪಟ ದೇಶಭಕ್ತರಾಗಿದ್ದರು ಎಂದು ದಿನೇಶ್‌ ಗುಂಡೂರಾವ್‌ ಹೇಳಿದರು.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಅಧ್ಯಕ್ಷರಾಗಿ ಎರಡನೇ ಅವಧಿಗೆ ಸ್ಪರ್ಧಿಸಿದ್ದ ನೇತಾಜಿ ಅವರು ಮಹಾತ್ಮಾ ಗಾಂಧಿ ಅವರ ಅಭ್ಯರ್ಥಿಯನ್ನೇ ಸೋಲಿಸಿ ಗೆದ್ದಿದ್ದರು. ಮಹಾತ್ಮಾ ಗಾಂಧೀಜಿ ಅವರಿಗೆ ‘ರಾಷ್ಟ್ರಪಿತ’ ಎಂದು ಮೊದಲು ಸಂಬೋಧಿಸಿದ್ದು ನೇತಾಜಿ. ಅತಿ ಸಣ್ಣ ವಯಸ್ಸಿನಲ್ಲೇ ಅಸಾಮಾನ್ಯ ಸಾಧನೆ ಮಾಡಿದ ಅವರ ಜೀವನಯಾತ್ರೆ ಎಲ್ಲರಿಗೂ ಸ್ಫೂರ್ತಿದಾಯಕ ಎಂದರು.

ಪ್ರೊ. ಸುಮಂತ್ರ ಬೋಸ್‌ ಭಾಗಿ:

ಕಾರ್ಯಕ್ರಮದಲ್ಲಿ ನೇತಾಜಿ ಸುಭಾಶ್ಚಂದ್ರ ಬೋಸ್‌ ಅವರ ಅಣ್ಣ ಶರತ್‌ಚಂದ್ರ ಬೋಸ್‌ ಅವರ ಮೊಮ್ಮಗ, ಕೋಲ್ಕತ್ತಾದ ನೇತಾಜಿ ಸುಭಾಶ್ಚಂದ್ರ ಬೋಸ್‌ ಟ್ರಸ್ಟ್‌ನ ನಿರ್ದೇಶಕ ಪ್ರೊ. ಸುಮಂತ್ರ ಬೋಸ್‌ ಭಾಗವಹಿಸಿದ್ದರು. ನೇತಾಜಿ ಅವರ ಕುರಿತಾದ ಮೂರು ಪುಸ್ತಕಗಳಾದ ‘ಭಾರತೀಯ ಹೋರಾಟ’, ‘ಓರ್ವ ಭಾರತೀಯ ಯಾತ್ರಿಕ ಒಂದು ಅಪೂರ್ಣ ಆತ್ಮಕಥೆ’, ‘ಅಸಾಮಾನ್ಯ ದಿನಚರಿ’ಯನ್ನು ಅವರು ಬಿಡುಗಡೆಗೊಳಿಸಿದರು.

ಈ ವೇಳೆ ಮಾತನಾಡಿದ ಪ್ರೊ. ಸುಮಂತ್ರ ಬೋಸ್‌, ನೇತಾಜಿ ಅವರು ಆಳವಾದ ಚಿಂತಕ ಹಾಗೂ ತತ್ವಜ್ಞಾನಿಯಾಗಿದ್ದರು. ಸ್ವತಂತ್ರ ಭಾರತ ಹೇಗಿರಬೇಕು ಎಂಬ ಬಗ್ಗೆ ಅವರಲ್ಲಿ ಸ್ಪಷ್ಟವಾದ ವಿಚಾರಗಳಿದ್ದವು ಎಂದರು.ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್‌. ಧರ್ಮ ಅಧ್ಯಕ್ಷತೆ ವಹಿಸಿದ್ದರು. ವಿದ್ವಾಂಸ ನಾರಾಯಣ ಯಾಜಿ ಕೃತಿ ಪರಿಚಯ ಮಾಡಿದರು. ಮಾಜಿ ಎಂಎಲ್ಸಿ ಕ್ಯಾ. ಗಣೇಶ್‌ ಕಾರ್ಣಿಕ್‌, ಬೆಂಗಳೂರಿನ ನೇತಾಜಿ ಸುಭಾಶ್‌ ಚಂದ್ರ ಬೋಸ್‌ ಟ್ರಸ್ಟ್‌ ಅಧ್ಯಕ್ಷ ಎಂ. ರಾಜಕುಮಾರ್‌, ಪುಸ್ತಕದ ಪ್ರಕಾಶಕ ಡಿ.ಎನ್‌. ಶೇಖರ್‌, ಮಹಾತ್ಮಗಾಂಧಿ ಶಾಂತಿ ಪ್ರತಿಷ್ಠಾನದ ಕಲ್ಲೂರು ನಾಗೇಶ ಇದ್ದರು. ಲೇಖಕ ಪ್ರೊ.ಕೆ.ಈ. ರಾಧಾಕೃಷ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಗಳೂರು ವಿವಿ ಕಾಲೇಜು ಪ್ರಾಂಶುಪಾಲ ಡಾ. ಗಣಪತಿ ಗೌಡ ಸ್ವಾಗತಿಸಿದರು.