ನೇತ್ರಾಣಿ ದ್ವೀಪ ವೀಕ್ಷಿಸಿದ ಡಿಸಿಎಂ ಡಿ.ಕೆ. ಶಿವಕುಮಾರ

| Published : Nov 23 2024, 12:30 AM IST

ನೇತ್ರಾಣಿ ದ್ವೀಪ ವೀಕ್ಷಿಸಿದ ಡಿಸಿಎಂ ಡಿ.ಕೆ. ಶಿವಕುಮಾರ
Share this Article
  • FB
  • TW
  • Linkdin
  • Email

ಸಾರಾಂಶ

ಉಪಮುಖ್ಯಮಂತ್ರಿಯವರು ನೇತ್ರಾಣಿ ದ್ವೀಪದ ಸುತ್ತ ಇರುವ ಸಮುದ್ರದ ಸೊಬಗಿನ ಬಗ್ಗೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಂತರ ಮುರುಡೇಶ್ವರ ಬೀಚ್‌ನಲ್ಲಿ ಕೆಲಕಾಲ ಕಾಳೆದರು.

ಭಟ್ಕಳ: ವಿಶ್ವ ಮೀನುಗಾರಿಕಾ ದಿನಾಚರಣೆ ಕಾರ್ಯಕ್ರಮಕ್ಕೆ ಆಗಮಿಸಿ ವಿಶ್ವವಿಖ್ಯಾತ ಪ್ರವಾಸಿತಾಣ ಮುರುಡೇಶ್ವರದಲ್ಲಿ ತಂಗಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಶುಕ್ರವಾರ ಬೆಳಗ್ಗೆ ಪತ್ನಿ ಉಷಾ ಅವರೊಂದಿಗೆ ನೇತ್ರಾಣಿ ದ್ವೀಪಕ್ಕೆ ಭೇಟಿ ನೀಡಿ ಅಲ್ಲಿನ ಪರಿಸರ, ಸ್ಕೂಬಾ ಡೈವಿಂಗ್ ಮಾಡುವ ಸ್ಥಳ ವೀಕ್ಷಿಸಿದರು.

ಉಪಮುಖ್ಯಮಂತ್ರಿಯವರು ನೇತ್ರಾಣಿ ದ್ವೀಪದ ಸುತ್ತ ಇರುವ ಸಮುದ್ರದ ಸೊಬಗಿನ ಬಗ್ಗೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಂತರ ಮುರುಡೇಶ್ವರ ಬೀಚ್‌ನಲ್ಲಿ ಕೆಲಕಾಲ ಕಾಳೆದರು. ಮುರುಡೇಶ್ವರದ ಸೌಂದರ್ಯವನ್ನು ವೀಕ್ಷಿಸಿದರು. ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ಅವರು ನಿಸರ್ಗಕ್ಕೆ ಹತ್ತಿರವಾಗಿರುವ ನೇತ್ರಾಣಿ ಐಲ್ಯಾಂಡ್‌ಗೆ ಪಾರಿವಾಳ ದ್ವೀಪ ಎನ್ನುವ ಹೆಸರೂ ಇದೆ. ಕರ್ನಾಟಕದಲ್ಲಿ ಸ್ಕೂಬಾ ಡೈವಿಂಗ್‌ಗೆ ಅತ್ಯುತ್ತಮ ಸ್ಥಳವಾದ ನೇತ್ರಾಣಿ ದ್ವೀಪವು ಪಾರಿವಾಳಗಳಿಗೆ ಆಶ್ರಯ ತಾಣವೂ ಹೌದು. ಪ್ರಶಾಂತವಾದ ಈ ದ್ವೀಪ ಮನಸ್ಸಿಗೆ ಆಹ್ಲಾದಕರ ಅನುಭವ ನೀಡಿತು ಎಂದು ಬರೆದುಕೊಂಡಿದ್ದಾರೆ.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಪತ್ನಿ ಅವರೊಂದಿಗೆ ಬೋಟಿನಲ್ಲಿ ನೇತ್ರಾಣಿ ದ್ವೀಪಕ್ಕೆ ಹೋಗುತ್ತಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಉಪಮುಖ್ಯಮಂತ್ರಿ ಅವರಿಗೆ ಮೀನುಗಾರಿಕಾ, ಬಂದರು ಸಚಿವ ಮಂಕಾಳ ಎಸ್. ವೈದ್ಯ, ಶಿರಸಿ ಶಾಸಕ ಭೀಮಣ್ಣ ನಾಯ್ಕ ಸಾಥ್ ನೀಡಿದರು.

ಡಿ.ಕೆ. ಶಿವಕುಮಾರ ಅವರು ನೇತ್ರಾಣಿಯಲ್ಲಿ ಸ್ಕೂಬಾ ಡೈವಿಂಗ್ ಮಾಡಿದ್ದಾರೋ, ಇಲ್ಲವೋ ಎನ್ನುವ ಬಗ್ಗೆ ಇನ್ನೂ ಖಚಿತತೆ ಸಿಕ್ಕಿಲ್ಲ. ಕೆಲವರು ಅವರು ಸ್ಕೂಬಾ ಡೈವಿಂಗ್ ಮಾಡಿದ್ದು, ಇದರ ಚಿತ್ರ ಮಾತ್ರ ತೆಗೆಯಲಿಲ್ಲ ಎನ್ನುತ್ತಿದ್ದಾರೆ. ಕುಚುಕು ಕುಚುಕು ಹಾಡಿಗೆ ಹೆಜ್ಜೆ ಹಾಕಿದ ಸಚಿವ, ಶಾಸಕರು!

ಭಟ್ಕಳ: ಬೇಂಗ್ರೆಯ ಗಾಲ್ಫ್‌ ಮೈದಾನದಲ್ಲಿ ನಡೆದ ವಿಶ್ವ ಮೀನುಗಾರಿಕೆ ದಿನಾಚರಣೆ ಪ್ರಯುಕ್ತ ಗುರುವಾರ ರಾತ್ರಿ ಏರ್ಪಡಿಸಿದ್ದ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಮೀನುಗಾರಿಕೆ ಸಚಿವ ಮಂಕಾಳ ವೈದ್ಯ, ಶಾಸಕರಾದ ಸತೀಶ ಸೈಲ್, ಭೀಮಣ್ಣ ನಾಯ್ಕ ಅವರು ಕುಚುಕು ಕುಚುಕು ಕುಚುಕು ನಾನು ಚಡ್ಡಿ ದೋಸ್ತಿ ಕಣೋ ಕುಚುಕು ಹಾಡಿಗೆ ಹೆಜ್ಜೆ ಹಾಕುವ ಮೂಲಕ ಗಮನ ಸೆಳೆದರು.ನಂತರ ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ ಹಾಡಿಗೂ ಸಹ ಸಚಿವರು, ಸಚಿವರ ಪತ್ನಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ, ಪ್ರಧಾನ ಕಾರ್ಯದರ್ಶಿ ಸುರೇಶ ನಾಯ್ಕ ಮುಂತಾದವರು ಹೆಜ್ಜೆ ಹಾಕಿ ಗಮನ ಸೆಳೆದರು.ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಮತ್ತು ನಿರೂಪಕಿ ಅನುಶ್ರೀ ಅವರ ತಂಡದಿಂದ ಸಂಗೀತ ಸಂಜೆ ಏರ್ಪಡಿಸಲಾಗಿತ್ತು. ಹಲವು ಕಲಾವಿದರು ಹಾಡು, ನೃತ್ಯದ ಮೂಲಕ ಜನರ ಮನರಂಜಿಸಿದರು. ಸಚಿವರು, ಶಾಸಕರು ಕುಣಿತದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.